ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜೀವನದ ಸಂಪತ್ತುಗಳಲ್ಲಿ ಶಿಕ್ಷಣ ಸಂಪತ್ತು ಅಮೂಲ್ಯವಾಗಿದೆ. ಉಳಿದ ಸಂಪತ್ತು ಕದಿಯಬಹುದು. ಶಿಕ್ಷಣ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಇಂತಹ ಸಂಪತ್ತು ನಮ್ಮದಾಗಿಸಿಕೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ತಾಲೂಕಿನ ಹೂವಿನಹಿಪ್ಪರಗಿಯ ಆಶೀರ್ವಾದ ಶಿಕ್ಷಣ ಸಂಸ್ಥೆಯ ಆಶೀರ್ವಾದ ಪಬ್ಲಿಕ್ ಸ್ಕೂಲ್, ಪರಿವರ್ತನ ವಿದ್ಯಾಮಂದಿರದ ಅಭಿವ್ಯಕ್ತಿ-ಸಂಭ್ರಮ ೨೦೨೪-೨೫ಯಂಗವಾಗಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ, ಪಾಲಕರ ಪಾತ್ರವಿದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಪಾಲಕರು ಮಕ್ಕಳಿಗೆ ಸಮಯ ಕೊಡುವದನ್ನು ಮರೆಯಬಾರದು. ಪಾಲಕರು ಮಕ್ಕಳ ಕಡೆಗೆ ಗಮನ ಹರಿಸದೇ ಹೋದರೆ ಅವರು ದಾರಿ ತಪ್ಪುವ ಸಾಧ್ಯತೆಯಿದೆ. ಮಕ್ಕಳು ಯಾವ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದುತ್ತಾರೋ ಅವರಿಗೆ ಆ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿ, ಶಿಕ್ಷಣ ಎನ್ನುವದು ತಪಸ್ಸು ಇದ್ದ ಹಾಗೆ. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ನಾಗರಿಕರಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡುವ ಮೂಲಕ ಅವರ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಇದು ಶಿಕ್ಷಣ ಕಲಿಕೆಗೂ ಪೂರಕವಾಗುತ್ತದೆ ಎಂದರು.
ವಕೀಲ ಜಿ.ಬಿ.ಬಾಗೇವಾಡಿ ಮಾತನಾಡಿದರು.
ಅಧ್ಯಕ್ಷತೆಯನ್ನು ಆಶೀರ್ವಾದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ವ್ಹಿ.ಸಜ್ಜನ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಬಸವರಾಜ ತಿಳಗೂಳ, ಪಿಕೆಪಿಎಸ್ ಅಧ್ಯಕ್ಷ ಪಿ.ಜಿ.ಗೋಠೆದ, ಆಶೀರ್ವಾದ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಜಶೇಖರ ಸಜ್ಜನ, ಸುರೇಶ ಸಜ್ಜನ, ಸಂಗಣ್ಣ ಹುನಗುಂದ, ಆನಂದ ಪತ್ತಾರ, ಸಿಆರ್‌ಪಿ ಸುಮಿತ್ರಾ ತೋಟದ, ಕಾನಿಪ ಸಂಘದ ಜಿಲ್ಲಾ ಹಂಗಾಮಿ ಅಧ್ಯಕ್ಷ ಪ್ರಕಾಶ ಬೆಣ್ಣೂರ, ಸಂಸ್ಥೆಯ ಕಾರ್ಯದರ್ಶಿ ವಿದ್ಯಾಶ್ರೀ ಸಜ್ಜನ ಇದ್ದರು. ವೈ.ಎಸ್.ಬೇಲಿ ಸ್ವಾಗತಿಸಿದರು. ಬಿ.ಟಿ.ದೊಡಮನಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ವರ್ಗಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉತ್ತಮ ಬಾಲಕ, ಬಾಲಕಿ ಪ್ರಶಸ್ತಿ ವಿತರಣೆ , ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಜರುಗಿತು. ನಂತರ ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.