ಉದಯರಶ್ಮಿ ದಿನಪತ್ರಿಕೆ
ಇಂಡಿ: ಹಕ್ಕಿ ಜ್ವರ ಪಕ್ಷಿಗಳಿಗೆ ಹರಡುವ ಕಾಯಿಲೆಯಾಗಿದ್ದು ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವದಿಲ್ಲ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕಂದಾಯ ಉಪವಿಭಾಗಾಧಿಕಾರಿ ವಿನಯ ಪಾಟೀಲ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿನ ಕಂದಾಯ ಉಪವಿಬಾಗಾಧಿಕಾರಿಗಳ ಸಭಾಭವನದಲ್ಲಿ ನಡೆದ ಹಕ್ಕಿಜ್ವರ ಕುರಿತು ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು ಹತ್ತು ಸಾವಿರ ಕೋಳಿಗಳು ಇವೆ. ಸಾವಿರ ಕೋಳಿಯ ೪ ಫಾರಂ ಗಳಿವೆ. ೫೦೦ ಕೋಳಿಯ ೧೦ , ನೂರು ಕೋಳಿಯ ೪೦, ಐವತ್ತು ಕೋಳಿಯ ೩೦ ಹೀಗೆ ಫಾರಂಗಳಿವೆ.ಮರಣ ಹೊಂದಿದ ಕೋಳಿಗಳ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಕೋಳಿ ಶೀತ ಜ್ವರವೆಂದು ಕಂಡಿರುವ ಕೋಳಿ ಸಾಕಣೆ ಕೇಂದ್ರವನ್ನು ನಿರ್ಭಂದಿತ ಪ್ರದೇಶವೆಂದು ಘೋಷಿಸಿ ವಾಹನಗಳ ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಲು ಕ್ರಮ ವಹಿಸಲಾಗಿದೆ. ಕೋಳಿ ಫಾರಂ ಒಂದು ಕಿಮಿ ರಸಾಯನಿಕ ದ್ರಾವಣ ಸಿಂಪಡಿಸಲಾಗಿದೆ ಎಂದರು.
ತಾಲೂಕಾ ಹಕ್ಕಿ ಜ್ವರದ ನೋಡಲ್ ಅಧಿಕಾರಿ ಡಾ. ಪ್ರಕಾಶ ಮಿರ್ಜಿ ಮಾತನಾಡಿ ತಾಲೂಕಿನಲ್ಲಿ ಕೋಳಿ ಶೀತ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋಳಿ ಸಾಗಾಣಿಕೆ ಕೇಂದ್ರಗಳ ಮಾಲಿಕರಿಗೆ ಕೋಳಿಗಳಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ತಕ್ಷಣವೇ ಪಶು ಪಾಲನಾ ಇಲಾಖೆಗೆ ತಿಳಿಸುವಂತೆ ಹಾಗೂ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಿ ಸೂಚನೆ ನೀಡಲಾಗಿದೆ ಎಂದು ಅಡಕಿ ಹೇಳಿದರು.
ಪಶು ವೈದ್ಯಾಧಿಕಾರಿಗಳಾದ ಡಾ. ಲಕ್ಷ್ಮೀಶ ಕಟ್ಟಿಮನಿ, ಡಾ.ರವಿಕಾಂತ ಬಿರಾದಾರ, ಡಾ.ರಾಜಶೇಖರ ಕಾರಜೋಳ, ಡಾ.ಸಂಜೀವಕುಮಾರ ಲಾಳಸಂಗಿ, ಡಾ.ವಿನಯ ಜಂಬಗಿ, ಡಾ.ಪ್ರಶಾಂತ ಬೆಳ್ಳುಂಡಗಿ, ಡಾ.ಆಶಾರಾಣಿ ದಶವಂತ ಸಿಬ್ಬಂದಿ ರಾಮಣ್ಣ ಉಪ್ಪಾರ, ರಮೇಶ ನರಳೆ, ಜಾವೇದ ಬಾಗವಾನ, ಪುಂಡಲೀಕ ಕೂಡಗಿ, ವಿಶ್ವನಾಥ ಮೋಕಲಾಜಿ ಮತ್ತಿತರಿದ್ದರು.