ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬಿ.ಬಿ.ಇಂಗಳಗಿ ಗ್ರಾಮದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಇತ್ಯರ್ಥ ಪಡಿಸಿ, ನಿಯಮಿತವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಗೆ ಮಂಗಳವಾರ ಆಗಮಿಸಿದ ಗ್ರಾಮಸ್ಥರು ತಾವು ಎದುರಿಸುತ್ತಿರುವ ನೀರಿನ ತಾಪತ್ರಯದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಲಾಲಸಾಬ್ ವಠಾರ ಮಾತನಾಡಿ, ಕೊಂಡಗೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಿ.ಇಂಗಳಗಿ ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆಯೇ ನೀರಿನ ಸಮಸ್ಯೆ ತಲೆದೋರುವುದು ಸಾಮಾನ್ಯವಾಗಿದೆ. ಈಗ ಗ್ರಾಮದಲ್ಲಿ ೮ ರಿಂದ ೧೦ ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು, ನೀರಿಗಾಗಿ ಪರದಾಡುವಂತಾಗಿದೆ. ಈಗ ಬೇಸಿಗೆ ಆರಂಭಗೊಳ್ಳುತ್ತಿದ್ದು ಮನೆಯಲ್ಲಿನ ಎಲ್ಲರಿಗೂ ಹಾಗೂ ದನಕರುಗಳಿಗೂ ನೀರು ಪೂರೈಸುವುದು ಸವಾಲಿನ ಕೆಲಸವೇ ಆಗಿದೆ. ಆದ್ದರಿಂದ ಕೂಡಲೇ ಬೊರವೆಲ್ ಮಂಜೂರು ಮಾಡಿ ಅಥವಾ ಇನ್ನಾವುದೇ ಕ್ರಮಗಳಿಂದ ನೀರಿನ ಸಮಸ್ಯೆ ಹೋಗಲಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಲೀಮ್ ವಠಾರ, ಮಡಿವಾಳಯ್ಯ ಹಿರೇಮಠ, ಚಂದಪ್ಪ ಅಗಸರ, ಪರಸಪ್ಪ ದಲ್ಲಾಳಿ, ಬಡೇಸಾಬ್ ದೊಡಮನಿ, ಲಾಲ್‌ಸಾಬ್ ನದಾಫ್, ಲಾಲ್‌ಅಹ್ಮದ್ ದೊಡಮನಿ, ಸಲೀಂ ಕೋಲಾರ, ಹಣಮಂತ ಮಾದರ, ಕುರ್ಬಾನ್ ದೊಡಮನಿ, ಶಿವು ಮಾದರ, ಮೋದಿನಸಾಬ್ ದೊಡಮನಿ, ಜಹಾಂಗೀರ್ ದೊಡಮನಿ ಸೇರಿದಂತೆ ಹಲವರು ಇದ್ದರು.