ಲೇಖನ:
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ವ್ಯಕ್ತಿಯಿಂದ ವ್ಯಕ್ತಿಗೆ ಆತನ ದೇಹ ಪ್ರಕೃತಿಗಳು ವಿಭಿನ್ನವಾಗಿರುತ್ತದೆ. ಅದರಲ್ಲಿ ಪ್ರಮುಖವಾಗಿ ಉಷ್ಣ ಪ್ರಕೃತಿ, ವಾತ ಪ್ರಕೃತಿ, ಪಿತ್ತ ಪ್ರಕೃತಿ ಮತ್ತು ಶೀತ ಪ್ರಕೃತಿ ಇವೇ ಮುಂತಾದ ನಾಲ್ಕು ವಿಧದ ದೇಹ ಪ್ರಕೃತಿಗಳಿವೆ. ಅದರಲ್ಲೂ ಉಷ್ಣ ದೇಹ ಪ್ರಕೃತಿಯನ್ನು ಹೊಂದಿರುವವರ ಪಾಡಂತೂ ಹೇಳತೀರದು. ಯಾವುದೇ ಆಹಾರ ಉಷ್ಣ ಪ್ರಕೃತಿಯಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೂ ಕೂಡಲೇ ಅವರ ದೇಹದಲ್ಲಿ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮುಖ್ಯವಾಗಿ ಬೆರಳಿನ ಉಗುರಿನ ಮೇಲ್ಭಾಗದಲ್ಲಿ ಸಿಪ್ಪೆ ಏಳುವುದು, ಉರಿಮೂತ್ರ, ಹೊಟ್ಟೆ ಉರಿ ಮತ್ತು ನೋವು, ಬಾಯಿಯಲ್ಲಿ ಹುಣ್ಣಾಗುವುದು ಇವೇ ಮೊದಲಾದ ವಿವಿಧ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಬೇಸಗೆಯಲ್ಲಿ ಇನ್ನಷ್ಟು ಹೆಚ್ಚಾಗಿರುತ್ತದೆ. ನಾಲಿಗೆಗೆ ಹೆಚ್ಚು ರುಚಿ ಎನಿಸುವ ಆಹಾರಗಳನ್ನು ಬೇಕಾಬಿಟ್ಟಿ ತಿಂದರೆ ತಕ್ಷಣದಲ್ಲಿ ದೇಹವು ಉಷ್ಣಗೊಳ್ಳುತ್ತದೆ. ದೇಹದ ಉಷ್ಣವನ್ನು ಕಡಿಮೆಗೊಳಿಸುವ ಆಹಾರ ಪದಾರ್ಥಗಳನ್ನು ಅಥವಾ ತಂಪು ಪಾನೀಯಗಳನ್ನು ಕುಡಿದು ದೇಹದ ಉಷ್ಣವನ್ನು ಕಡಿಮೆ ಮಾಡಿಕೊಳ್ಳಬೇಕು. ಅಂತಹ ತಂಪು ಪಾನೀಯಗಳ ಬಗ್ಗೆ ತಿಳಿದುಕೊಳ್ಳೋಣ.
ಸೋಂಪು ಮತ್ತು ಜೀರಿಗೆ
ಸೋಂಪು ಮತ್ತು ಜೀರಿಗೆಯ ಸೇವನೆಯು ಮನುಷ್ಯನ ದೇಹಕ್ಕೆ ಹೆಚ್ಚು ತಂಪನ್ನು ನೀಡುವುದರಿಂದ ಊಟವಾದ ಬಳಿಕ ಸ್ವಲ್ಪ ಸೋಂಪನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮ. ಅಡುಗೆಯಲ್ಲಿ ಬಳಸುವ ಜೀರಿಗೆಯನ್ನು ಸಣ್ಣ ಲೋಟದಲ್ಲಿ ನೆನೆಹಾಕಿ ನಿತ್ಯ ಎರಡು ಮೂರು ಲೋಟ ನೀರಿಗೆ ಅವುಗಳನ್ನು ಮಿಶ್ರಣ ಮಾಡಿ ಕುಡಿದರೆ ಎರಡೇ ದಿನದಲ್ಲಿ ದೇಹದ ಉಷ್ಣವು ಕಡಿಮೆಯಾಗುವುದು.

ಕಾಯಿಸದೆ ಇರುವ ಹಾಲು
ದೇಹವು ಉಷ್ಣಗೊಂಡಿರುವ ಸಂದರ್ಭದಲ್ಲಿ ಆಕಳಿನ ಹಾಲನ್ನು ಕುದಿಸದೆ ಹಸಿ ಹಸಿಯಾಗಿ ಕುಡಿದಲ್ಲಿ ದೇಹದ ಉಷ್ಣವು ಕಡಿಮೆಯಾಗಿ ಅಜೀರ್ಣ ಸಮಸ್ಯೆಯೂ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
ದಾಳಿಂಬೆ ಹಣ್ಣಿನ ಜ್ಯೂಸ್
ದಾಳಿಂಬೆ ಹಣ್ಣಿನಲ್ಲಿ ದೇಹದ ಹೆಚ್ಚುವರಿ ಉಷ್ಣವನ್ನು ಹೊರ ಹಾಕುವ ಗುಣವಿದೆ. ದಾಳಿಂಬೆ ಹಣ್ಣನ್ನು ನೇರವಾಗಿ ತಿನ್ನುವುದರಿಂದ ಅಥವಾ ಈ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ದೇಹದ ಉಷ್ಣವನ್ನು ಹೊರಹಾಕಬಹುದು. ಉಷ್ಣ ದೇಹ ಪ್ರಕೃತಿಯನ್ನು ಹೊಂದಿರುವವರು ನಿತ್ಯ ದಾಳಿಂಬೆ ಹಣ್ಣನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ದೇಹದ ಉಷ್ಣವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು.
ಪುದೀನಾ ಸೊಪ್ಪಿನ ಜ್ಯೂಸ್
ಪುದೀನ ಸೊಪ್ಪು ಮನುಷ್ಯನ ದೇಹಕ್ಕೆ ಹೆಚ್ಚಿನ ತಂಪನ್ನು ಒದಗಿಸುವುದರಿಂದ ಇದರ ಜ್ಯೂಸನ್ನು ಕೂಡಿದಲ್ಲಿ ದೇಹವು ತಂಪಾಗಿರುವುದು. ಉಷ್ಣದಿಂದ ಹೊಟ್ಟೆನೋವು ಬಂದಿದ್ದಲ್ಲಿ ಪುದೀನ ಜ್ಯೂಸ್ ಶೀಘ್ರ ಉಪಶಮನವನ್ನು ನೀಡುತ್ತದೆ.
ಸಕ್ಕರೆಯ ನೀರು
ಉಷ್ಣ ಜಾಸ್ತಿಯಾಗಿ ಸಮಸ್ಯೆಯನ್ನು ಆಗಿಂದಾಗ ಎದುರಿಸುತ್ತಿದ್ದಲ್ಲಿ ಒಂದು ಲೋಟ ನೀರಿಗೆ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ ಈ ದ್ರಾವಣವನ್ನು ಕುಡಿದರೆ ದೇಹಕ್ಕೆ ಆಹ್ಲಾದವನ್ನು ನೀಡುತ್ತದೆ. ಇದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿ ನವೋಲ್ಲಾಸವನ್ನು ಒದಗಿಸುತ್ತದೆ.
ಎಳನೀರು
ಉಷ್ಣ ದೇಹ ಪ್ರಕೃತಿಯುಳ್ಳವರು ನಿತ್ಯ ಒಂದೊಂದು ಎಳನೀರನ್ನು ಕುಡಿಯುತ್ತಿದ್ದಲ್ಲಿ ದೇಹದ ಉಷ್ಣವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಉಷ್ಣ ದೇಹ ಪ್ರಕೃತಿಯವರಿಗೆ ಇದೊಂದು ಆರೋಗ್ಯದಾಯಕವಾದ ಪೇಯವೂ ಹೌದು.
ಸೌತೆಕಾಯಿ ಜ್ಯೂಸ್
ಸೌತೆಕಾಯಿಯಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಹೇರಳವಾಗಿದ್ದು, ಇದರ ಜ್ಯೂಸ್ ಮಾಡಿ ಕುಡಿದಲ್ಲಿ ದೇಹದ ಉಷ್ಣವು ಗಣನೀಯ ಕಡಿಮೆಯಾಗಿ ದೇಹವು ಅತ್ಯಂತ ಶೀಘ್ರವಾಗಿ ತಂಪಾಗುವುದು.
ಮಜ್ಜಿಗೆ
ಮನುಷ್ಯನ ದೇಹಕ್ಕೆ ಮೊಸರು ಮಜ್ಜಿಗೆಯೂ ಅತ್ಯಂತ ತಂಪನ್ನೀಯುವ ಪಾನೀಯವಾಗಿದ್ದು ಪ್ರತಿದಿನ ಮೂರು ಹೊತ್ತಿನ ಊಟದಲ್ಲಿ ಮಜ್ಜಿಗೆಯನ್ನು ಸೇವಿಸುವುದು ಅಥವಾ ಪಾನೀಯವಾಗಿ ಮಜ್ಜಿಗೆಯನ್ನು ಕುಡಿಯುವುದರಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು.
ಕಲ್ಲಂಗಡಿ ಹಣ್ಣು
ಸಿಹಿಯಿಂದ ಕೂಡಿದ ಹಾಗೂ ಅತ್ಯಂತ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ ಹಣ್ಣಿಗಿಂತ ಅತ್ಯುತ್ತಮವಾದ ಹಣ್ಣು ಬೇರೊಂದು ಸಿಗಲಾರದು. ಪ್ರತಿದಿನ ಒಂದಷ್ಟು ಕಲ್ಲಂಗಡಿ ಹಣ್ಣಿನ ಹೋಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ನೀರು, ನಾರಿನಂಶ ಹಾಗೂ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ. ಕಲ್ಲಂಗಡಿ ಹಣ್ಣನ್ನು ಜಜ್ಜಿ ಮುಖದ ಮೇಲೆ ಇರಿಸಿಕೊಳ್ಳುವುದರಿಂದ ಬಾಹ್ಯವಾಗಿಯೂ ಶಾರೀರಿಕ ತಂಪನ್ನು ಗಳಿಸಿಕೊಳ್ಳಬಹುದು.

ಕರ್ಬೂಜ
ಕರ್ಬೂಜ ಹಣ್ಣಿನಲ್ಲೂ ನೀರಿನ ಅಂಶವೂ ಯಥೇಚ್ಚವಾಗಿದ್ದು, ಇದರಲ್ಲಿ ಪೊಟಾಶಿಯಂ ಅಂಶವು ಹೇರಳವಾಗಿದೆ. ಇದು ಕಡಿಮೆ ಕ್ಯಾಲೊರಿ ಉಳ್ಳ ಹಣ್ಣಾಗಿದ್ದು ಕರ್ಬೂಜದ ಹೋಳುಗಳನ್ನು ಹಾಗೆಯೇ ಸೇವಿಸಬಹುದು ಅಥವಾ ಕರ್ಬೂಜವನ್ನು ಹಸಿ ಹಾಲಿನೊಂದಿಗೆ ಜ್ಯೂಸ್ ಮಾಡಿ ಕುಡಿದಲ್ಲಿ ಅಥವಾ ಸಕ್ಕರೆಯೊಂದಿಗೆ ಸೇವಿಸಿದಲ್ಲಿ ದೇಹದ ಉಷ್ಣವು ಕಡಿಮೆಯಾಗುತ್ತದೆ.
ಏಲಕ್ಕಿ ಕಷಾಯ
ಸಾಂಬಾರ ಪದಾರ್ಥಗಳ ಪೈಕಿ ಏಲಕ್ಕಿಯು ಮನುಷ್ಯನ ದೇಹಕ್ಕೆ ತಂಪನ್ನು ಒದಗಿಸುವ ಪದಾರ್ಥವೆಂದೇ ಚಿರಪರಿಚಿತ. ಒಂದೆರಡು ಏಲಕ್ಕಿಯನ್ನು ತೆಗೆದುಕೊಂಡು ಅದನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಸೋಸಿ ತಂಪಾಗಿಸಿ ನಿರಂತರವಾಗಿ ಕುಡಿಯುತ್ತಿದ್ದಲ್ಲಿ ದೇಹದ ಉಷ್ಣವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು.
ಬಾರ್ಲಿ ನೀರು
ಬಾರ್ಲಿ ಮನುಷ್ಯನ ದೇಹಕ್ಕೆ ಹೆಚ್ಚಿನ ತಂಪನ್ನು ಒದಗಿಸುವ ಪದಾರ್ಥವಾಗಿದ್ದು, ಎರಡು ಟೇಬಲ್ ಚಮಚಗಳಷ್ಟು ಬಾರ್ಲಿಯನ್ನು ಎರಡು ಲೋಟ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ಕುದಿಸಿ ಈ ಬಾರ್ಲಿ ನೀರನ್ನು ತಣಿಸಿ ಆಗಾಗ್ಗ ಕುಡಿಯುತ್ತಾ ಇರಬೇಕು. ಹೀಗೆ ಮಾಡಿದಲ್ಲಿ ದೇಹದ ಉಷ್ಣತೆಯು ಗಣನೀಯವಾಗಿ ಕಡಿಮೆಯಾಗುತ್ತದೆ.
ಹೇರಳವಾಗಿ ನೀರನ್ನು ಕುಡಿಯಿರಿ: ನೀರನ್ನು ಹೆಚ್ಚು ಹೆಚ್ಚು ಕುಡಿದಷ್ಟು ಶರೀರದ ಉಷ್ಣಾಂಶವನ್ನು ಹೊರಹಾಕಬಹುದು ಎಂದು ಎಲ್ಲರಿಗೂ ತಿಳಿದಿರುವ ಸತ್ಯ. ಇದರಿಂದಾಗಿ ದೇಹವು ನಿರ್ಜಲೀಕರಣದ ಸಮಸ್ಯೆಗೆ ಈಡಾಗುವ ಸಂದರ್ಭಗಳು ಇರುವುದಿಲ್ಲ. ಹೇರಳ ನೀರನ್ನು ಕುಡಿಯುವುದರಿಂದ ಬಿಸಿಲ ತಾಪಕ್ಕೆ ಶರೀರವು ಆಯಾಸಗೊಳ್ಳದೆ ದೇಹದ ಉಷ್ಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಲಿಂಬೆ ಹಣ್ಣಿನ ಜ್ಯೂಸ್
ಮಳೆಗಾಲ, ಬೇಸಿಗೆ ಕಾಲ ಮತ್ತು ಚಳಿಗಾಲ ಈ ಮೂರು ಋತುಗಳಲ್ಲಿಯೂ ನಿಂಬೆ ಹಣ್ಣಿನಿಂದ ತಯಾರಿಸಿದ ಜ್ಯೂಸನ್ನು ನಿತ್ಯ ಕುಡಿಯುವುದರಿಂದ ದೇಹವನ್ನು ತಂಪಾಗಿಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಿಕೊಳ್ಳಬಹುದು.
ಮೆಂತೆ ಕಾಳಿನ ಜ್ಯೂಸ್
ಉಷ್ಣ ದೇಹ ಪ್ರಕೃತಿಯನ್ನು ಹೊಂದಿರುವವರಿಗೆ ಮೆಂತೆಕಾಳು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಒಂದು ಚಮಚದಷ್ಟು ಮೆಂತೆ ಕಾಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿದಲ್ಲಿ ದೇಹವು ತಂಪಾಗಿರುತ್ತದೆ. ನೀರಿನಲ್ಲಿ ನೆನೆಸಿಟ್ಟ ಮೆಂತೆಕಾಳುಗಳನ್ನು ಬಾಯಲ್ಲಿ ಹಾಕಿ ಜಗಿಯುತ್ತಿದ್ದಲ್ಲಿ ದೇಹದ ಉಷ್ಣವನ್ನು ಹೊರ ಹಾಕಿ ಆರಾಮವನ್ನು ನೀಡುತ್ತದೆ.
ಮೂಲಂಗಿ ಜ್ಯೂಸ್
ತರಕಾರಿಗಳ ಪೈಕಿ ದೇಹಕ್ಕೆ ಹೆಚ್ಚು ತಂಪನ್ನು ನೀಡುವ ತರಕಾರಿಯೆಂದರೆ ಮೂಲಂಗಿ. ಮೂಲಂಗಿಯ ಸಿಪ್ಪೆಯನ್ನು ತೆಗೆದು ಹೋಳುಗಳನ್ನಾಗಿ ಮಾಡಿ ಮಿಕ್ಸಿಗೆ ಹಾಕಿ ಅದರೆ ರಸವನ್ನು ತೆಗೆದು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕುಡಿದರೆ ತಕ್ಷಣದಲ್ಲಿ ದೇಹವನ್ನು ತಂಪು ಮಾಡುತ್ತದೆ.
ಉಷ್ಣ ದೇಹ ಪ್ರಕೃತಿಯನ್ನು ಹೊಂದಿರುವವರು ಖಾರವಾದ ಆಹಾರ ಪದಾರ್ಥಗಳನ್ನು ಸೇವಿಸಿದಲ್ಲಿ ದೇಹದ ಉಷ್ಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ದೇಹದ ಉಷ್ಣವನ್ನು ತಗ್ಗಿಸುವ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಉತ್ತಮ. ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಹಾಗೂ ನಾರಿನ ಅಂಶವನ್ನು ಹೊಂದಿರುವ ಸೊಪ್ಪು ತರಕಾರಿಗಳು, ಸೌತೆಕಾಯಿ, ಮೊಸರು ಇವುಗಳನ್ನು ತಮ್ಮ ನಿತ್ಯ ಆಹಾರ ಕ್ರಮದಲ್ಲಿ ನಿರಂತರವಾಗಿ ಸೇರಿಸಿಕೊಂಡಲ್ಲಿ ದೇಹದ ಉಷ್ಣವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಹುಳಿಯಾಗಿರುವ ಆಹಾರ ವಸ್ತುಗಳ ಸೇವನೆಯೂ ದೇಹದ ಉಷ್ಣವನ್ನು ಹೆಚ್ಚಿಸಬಹುದು. ಆದ್ದರಿಂದ ದೇಹಕ್ಕೆ ತಂಪನ್ನು ನೀಡುವ ಆರೋಗ್ಯವರ್ಧಕ ಪಾನೀಯಗಳನ್ನು ಸೇವಿಸಿದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
