ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಸಾರಸ್ವತ ಲೋಕಕ್ಕೆ ವಚನಕಾರರ ಮತ್ತು ಹರಿದಾಸರ ಕೊಡುಗೆ ಅನನ್ಯ. ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರ ಕಾಲ ಮುಗಿದ ಮೇಲೆ ಶ್ರೀ ವಿಜಯದಾಸರು ಬರುವವರೆಗೆ ದಾಸಸಾಹಿತ್ಯದ ಕಾಲ ಶೂನ್ಯಘಟ್ಟವೆಂದು ತಜ್ಞರ ಅಂಬೋಣವಾಗಿತ್ತು.
ಆದರೆ ಈ ಮಧ್ಯದ ಅವಧಿಯಲ್ಲಿಯೂ ದಾಸಸಾಹಿತ್ಯವನ್ನು ಜೀವಂತವಾಗಿಟ್ಟವರು ವಿಜಯಪುರ ಜಿಲ್ಲೆಯ ಕಾಖಂಡಕಿಯ ಶ್ರೀ ಮಹಿಪತಿದಾಸರು.
ಶ್ರೀ ಮಹಿಪತಿದಾಸರು ಕನ್ನಡ ಭಾಷೆಯಲ್ಲಿ ಅಲ್ಲದೆ ದಖನಿ ಉರ್ದು ಭಾಷೆಯಲ್ಲಿಯೂ ಕೀರ್ತನೆಗಳನ್ನು ರಚಿಸಿದವರು.
ಮುಂಡಿಗೆಗಳು
ದಾಸಸಾಹಿತ್ಯದ ವಿಶಿಷ್ಟ ರಚನೆಗಳು. ಮುಂಡಿಗೆಗಳು ಎಂದ ಕೂಡಲೇ ನೆನಪಾಗುವರು ಶ್ರೀ ಕನಕದಾಸರು. ಕನಕನನ್ನು ಕೆಣಕಬೇಡ ಎಂಬ ಮಾತು ಜನಜನಿತವಿದೆ. ಮುಂಡಿಗೆಗಳೆಂದರೆ ಮೇಲ್ನೋಟಕ್ಕೆ ಅರ್ಥವಾಗದ ರಚನೆಗಳು. ವಚನಸಾಹಿತ್ಯದಲ್ಲಿ ಬೆಡಗಿನ ವಚನಗಳಿದ್ದಂತೆ ದಾಸಸಾಹಿತ್ಯದಲ್ಲಿ ಮುಂಡಿಗೆಗಳು.
ಶ್ರೀ ಮಹಿಪತಿದಾಸರ ಕೀರ್ತನೆಗಳಲ್ಲಿಯೂ ಹಲವು ಮುಂಡಿಗೆಗಳಿದ್ದು ಅವುಗಳಿಗೆ ಅಲ್ಲೊಂದು ಇಲ್ಲೊಂದು ಅರ್ಥಗಳನ್ನು ಬರೆಯುವ ಪ್ರಯತ್ನಗಳಾಗಿವೆ.
ಕಾಖಂಡಕಿ ಗ್ರಾಮದವರೇ ಆದ ಸಾಹಿತಿ ನಾರಾಯಣ ಬಾಬಾನಗರ ಇವರು ಈಗ ಶ್ರೀ ಮಹಿಪತಿರಾಯರ ಅನೇಕ ಮುಂಡಿಗೆಗಳನ್ನು ಗುರುತಿಸಿ ಅವುಗಳಿಗೆ ಮೊತ್ತ ಮೊದಲ ಬಾರಿಗೆ ಅರ್ಥಗಳನ್ನು ಬರೆಯುವ ಪ್ರಯತ್ನ ಮಾಡಿದ್ದಾರೆ.
ಮುಂಡಿಗೆಗಳ ಪರಿಚಯಾತ್ಮಕ ಲೇಖನವೊಂದನ್ನು ಪ್ರಸ್ತಾವನೆಯಾಗಿ ಪ್ರೊ. ಎಮ್ ಆರ್.ನಾಗರಾಜು ಅವರು ಬರೆದಿದ್ದಾರೆ.
ಈ ಪುಸ್ತಕದಲ್ಲಿ 13 ಮುಂಡಿಗೆಗಳಿಗೆ ಅರ್ಥಗಳಿವೆ. ಪ್ರತಿ ಮುಂಡಿಗೆಯಲ್ಲಿನ ವಿಶಿಷ್ಟ ಶಬ್ದಗಳಿಗೆ ಅರ್ಥ ಬರೆಯಲಾಗಿದೆ.
ಕನ್ನಡದಲ್ಲಿ ಮುಂಡಿಗೆಗಳ ಅರ್ಥಾನುಸಂಧಾನ ಪುಸ್ತಕಗಳು ಹೊರಬಂದಿದ್ದೇ ಕಡಿಮೆ. ಹೀಗಾಗಿ ಈ ಪುಸ್ತಕ ಅತ್ಯಂತ ವಿಶಿಷ್ಟವಾಗಿ ಎದ್ದು ಕಾಣುತ್ತದೆ.
ದಾಸಸಾಹಿತ್ಯ ಅಧ್ಯಯನಶೀಲರಿಗೆ ಇದೊಂದು ಆಕರಗ್ರಂಥವಾಗಿದೆ.ಈ ಪುಸ್ತಕವನ್ನು ದಾಸಸಾಹಿತ್ಯ ಸುಧೆ ಸಮೂಹ ಪ್ರಕಾಶಿಸಿದೆ.
“ಕಾಖಂಡಕಿಯ ಶ್ರೀ ಮಹಿಪತಿರಾಯರ ಕೀರ್ತನೆಗಳು ಅರ್ಥೈಸಿಕೊಳ್ಳಲು ತುಂಬಾ ಕ್ಲಿಷ್ಟಕರವಾಗಿವೆ. ಅದರಲ್ಲಿಯೂ ಶ್ರೀ ಮಹಿಪತಿರಾಯರ ಮುಂಡಿಗೆಗಳು ದಾಸಸಾಹಿತ್ಯದಲ್ಲಿ ವಿಶಿಷ್ಟವಾದವುಗಳು.”
– ನಾರಾಯಣ ಬಾಬಾನಗರ
ವಿಜಯಪುರ