ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೇಣುಕಾಚಾರ್ಯರ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆಯ ತತ್ವಗಳು ಇಂದಿನ ಸಮಾಜದ ಸಮಾನತೆ, ಧಾರ್ಮಿಕ ಸಮರಸತೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ದಾರಿದೀಪದಂತಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಬುಧವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ಜಗದ್ಗುರು ರೇಣುಕಾಚಾರ್ಯರ ಜಯಂತಿ’ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರು ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್ ಶರಣರು. ಅವರ ಬದುಕು ಮತ್ತು ತತ್ವಗಳು ಇಡೀ ವಿಶ್ವಕ್ಕೆ ಆದರ್ಶಪ್ರಾಯವಾಗಿವೆ ಎಂದು ಹೇಳಿದರು.
ರೇಣುಕಾಚಾರ್ಯರು ಬಾಲ್ಯದಲ್ಲೇ ಭಕ್ತಿಯಿಂದ ಪರಿಪೂರ್ಣರಾಗಿ, ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿದರು. ಇಂದಿನ ಪೀಳಿಗೆ ಅವರ ಜೀವನ ಸಂದೇಶ, ತತ್ವಜ್ಞಾನವನ್ನು ಅರ್ಥೈಸಿಕೊಂಡು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, “ಸಮಾನತೆ” ಎಂಬ ತತ್ವಕ್ಕೆ ಮಹತ್ವ ನೀಡಿದ ರೇಣುಕಾಚಾರ್ಯರು ಅದರಲ್ಲಿ ಎಲ್ಲಾ ವರ್ಣಗಳು ಸಮಾನವೆಂಬ ನಂಬಿಕೆಯನ್ನು ಇಡೀ ವಿಶ್ವಕ್ಕೆ ಹರಡಿದರು.
ಅವಮಾನಿತ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತ್ರ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿದರು ಎಂದು ಹೇಳಿದರು.
ಗ್ರಾಮದ ರಾಜು ಕತ್ನಳ್ಳಿ, ಪ್ರವೀಣ ಅರಕೇರಿ, ಆನಂದ ಗಂಗನಳ್ಳಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.