ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಲ್ಲ 13 ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 2024-25ನೇ ಆರ್ಥಿಕ ವರ್ಷದಲ್ಲಿ ವಸತಿರಹಿತರಿಗೆ ಮನೆ ಕಟ್ಟಲು ಆಯ್ಕೆ ಪ್ರಕ್ರೀಯೆ ಪೂರ್ಣವಾದ ಫಲಾನುಭವಿಗಳ ಖಾತೆಗೆ ನೇರವಾಗಿ ಸರಕಾರದ ಅನುದಾನ ಜಮೆ ಆಗುತ್ತಿದೆ. ಆದರೆ ಗುರಿಗೆ ತಕ್ಕಂತೆ ಆಯ್ಕೆ ಪೂರ್ಣ ಆಗಿಲ್ಲ. ಈ ಹಿನ್ನಲೆಯಲ್ಲಿ ಕೂಡಲೇ ಫಲಾನುಭವಿಗಳ ಆಯ್ಕೆಯನ್ನು ಪೂರ್ಣಗೊಳಿಸಿ ಜಿ.ಪಿ.ಎಸ್ ಮಾಡಿಸಿ ಅನುದಾನ ಜಮೆ ಆಗುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ)ಗಳಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ. ಪಾಟೀಲ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ(ಸಿ.ಇ.ಓ) ಅವರಿಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 219 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 33074 ಗುರಿ ನಿಗದಿ ಪಡಿಸಲಾಗಿದೆ. ಅದರಂತೆ ವಿಜಯಪುರ ತಾಲೂಕಿನ 17 ಗ್ರಾ. ಪಂ ಗಳಲ್ಲಿ 2461, ಬಬಲೇಶ್ವರ ತಾಲೂಕಿನ 15 ಗ್ರಾ. ಪಂ ಗಳಲ್ಲಿ 2229, ತಿಕೋಟಾ ತಾಲೂಕಿನ 14 ಗ್ರಾ. ಪಂ ಗಳಲ್ಲಿ 2483, ಚಡಚಣ ತಾಲೂಕಿನ 13 ಗ್ರಾ. ಪಂ ಗಳಲ್ಲಿ 2083, ನಿಡಗುಂದಿ ತಾಲೂಕಿನ 11 ಗ್ರಾ. ಪಂ ಗಳಲ್ಲಿ 1094, ಇಂಡಿ ತಾಲೂಕಿನ 39 ಗ್ರಾ. ಪಂ ಗಳಲ್ಲಿ 5728, ಬಸವನ ಬಾಗೇವಾಡಿ ತಾಲೂಕಿನ 18 ಗ್ರಾ. ಪಂ ಗಳಲ್ಲಿ 2758, ಸಿಂದಗಿ ತಾಲೂಕಿನ 18 ಗ್ರಾ. ಪಂ ಗಳಲ್ಲಿ 1997, ದೇವರ ಹಿಪ್ಪರಗಿ ತಾಲೂಕಿನ 14 ಗ್ರಾ. ಪಂ ಗಳಲ್ಲಿ 2446, ಮುದ್ದೇಬಿಹಾಳ ತಾಲೂಕಿನ 22 ಗ್ರಾ. ಪಂ ಗಳಲ್ಲಿ 3921, ತಾಳಿಕೋಟಿ ತಾಲೂಕಿನ 14 ಗ್ರಾ. ಪಂ ಗಳಲ್ಲಿ 2372, ಆಲಮೇಲ ತಾಲೂಕಿನ 13 ಗ್ರಾ. ಪಂ ಗಳಲ್ಲಿ 1842, ಕೊಲ್ಹಾರ ತಾಲೂಕಿನ 11 ಗ್ರಾ. ಪಂ ಗಳಲ್ಲಿ 1702 ಗುರಿ ನಿಗದಿ ಪಡಿಸಲಾಗಿದೆ.
ಪಿ.ಡಿ.ಓ ಗಳಿಗೆ ನಿರ್ದೇಶನ ನೀಡಿ ಕೂಡಲೇ ಜಿಲ್ಲೆಯ ಎಲ್ಲ ಗ್ರಾ. ಪಂ ಗಳ ವ್ಯಾಪ್ತಿಯಲ್ಲಿ ಜಿ.ಪಿ.ಎಸ್ ನಡೆಸಿ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದ ಪ್ರತಿಯನ್ನು ವಿಧಾನ ಪರಿಷತ್ ಶಾಸಕರ ಕಚೇರಿಗೆ ಸಲ್ಲಿಸುವಂತೆ ಸುನೀಲಗೌಡ ಬಿ. ಪಾಟೀಲ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ(ಸಿ.ಇ.ಓ) ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.