ವಿಜಯಪುರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೀಲ್ ಬಾಗಮಾರೆ ನೇತೃತ್ವದ ನಿಯೋಗದಿಂದ ಜಿಲ್ಲಾಧಿಕಾರಿಗಳ ಭೇಟಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಭಾಷಣ, ಹೇಳಿಕೆ ನೀಡುವವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವಿಜಯಪುರ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿತು.
ಈ ವಿಷಯದ ಕುರಿತು ವಿವರಣೆ ನೀಡಿದ ಶಕೀಲ್ ಬಾಗಮಾರೆ, ಸಮಾಜದಲ್ಲಿ ಶಾಂತಿ ಬಹುಮುಖ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಶಾಂತಿ ಹಾಗೂ ಸಹೋದರತೆಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ, ತಮ್ಮ ಸ್ವಾರ್ಥಕ್ಕಾಗಿ ದ್ವೇಷ ಬಿತ್ತುತ್ತಿರುವುದು ಆಘಾತಕಾರಿ ಸಂಗತಿ. ವಿಜಯಪುರ ಶರಣರ, ಸೂಫಿಗಳ ಪವಿತ್ರ ತಪೋಭೂಮಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಡೆದಾಡಿದ ಪಾವನ ಭೂಮಿ. ಇಂತಹ ಪವಿತ್ರ ಭೂಮಿಯಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ,
ಧರ್ಮಗಳ ನಡುವೆ ವಿಭಜನೆ ಮೂಡಿಸಲು ಮತ್ತು ಸಮಾಜದಲ್ಲಿ ದ್ವೇಷ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಕೆಲ ರಾಜಕೀಯ ನಾಯಕರು ಮತ್ತು ಸಮಾಜ ವಿರೋಧಿ ಶಕ್ತಿಗಳು ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ಭಾಷೆ ಬಳಸುತ್ತಿದ್ದಾರೆ ಹಾಗೂ ಇತಿಹಾಸವನ್ನು ತಿರುಚಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ಕ್ರಿಯೆಗಳು ಒಂದು ಸಮುದಾಯದ ಭಾವನೆಗೆ ಧಕ್ಕೆ ತಲುಪಿಸುವುದಷ್ಟೇ ಅಲ್ಲ, ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆಯೂ ಇದೆ ಎಂದು ಬಾಗಮಾರೆ ಆತಂಕ ವ್ಯಕ್ತಪಡಿಸಿದರು.
ಇಂತಹ ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾಡಳಿತವು ಇಂತಹ ವ್ಯಕ್ತಿಗಳು ಹೇಳಿಕೆಗಳನ್ನು ಗಮನಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಿಸಿ ಮುಟ್ಟಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಜಯಪುರ ನೆಲದ ಭವ್ಯ ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ದ್ವೇಷ ಹರಡುವವರ ವಿರುದ್ಧ ದೂರು ಕೊಡುವುದರ ಕಾಯುವುದಕ್ಕಿಂತ, ಸಾಮಾಜಿಕ ಮಾಧ್ಯಮದಲ್ಲಿ ಭದ್ರತಾ ವಾತಾವರಣ ಹಾಳುಮಾಡಲು ಸುಳ್ಳು ಪ್ರಚಾರ ಮಾಡುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರ್ಮವನ್ನು ರಾಜಕೀಯಕ್ಕೆ ಬಳಸುವವರ ವಿರುದ್ಧ, ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಮತ್ತು ದ್ವೇಷಪೂರಿತ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ವಿನಂತಿಸಿದರು.
ಪ್ರಮುಖರಾದ
, ಮಹಾವೀರ ಜೈನ್ , ಪ್ರದೀಪ ಸಿಂಗ್ , ಡೆವೀಡ್ ಆಸೀಪ ಬಾಗವಾನ, ಮುನ್ನಾ ಬಕ್ಷಿ,
ಹಾಸ್ಮಿಂಪೀರ ಖಾದ್ರಿ, ಇಲಿಯಾಸ ಮುಲ್ಲಾ ನಿಯೋಗದಲ್ಲಿದ್ದರು.