ಶಾಲಾ ಮಕ್ಕಳ ಆರೋಗ್ಯ ತಪಾಸಣೆ | ಪರೀಕ್ಷಾ ಸಮಯದಲ್ಲಿ ಆರೋಗ್ಯ ರಕ್ಷಣೆಗೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಆರೋಗ್ಯ ಭಾಗ್ಯದ ಮುಂದೆ ಎಲ್ಲ ಭಾಗ್ಯಗಳು ನಗಣ್ಯ. ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತೇ ಸರ್ವಶ್ರೇಷ್ಠ ಸಂಪತ್ತು. ಬೇರೆ ಸಂಪತ್ತಿನ ವ್ಯಾಮೋಹದಲ್ಲಿ ಆರೋಗ್ಯವೆಂಬ ದಿವ್ಯತೆಯ ಆರೋಗ್ಯಕರ ಸಂಪತ್ತು ಕಳೆದುಕೊಳ್ಳದಿರಿ. ಈ ಅಮೂಲ್ಯ ಸಂಪತ್ತು ಬಹು ಎಚ್ಚರಿಕೆ, ಕಾಳಜಿಯಿಂದ ಸಂರಕ್ಷಿಸಿಕೊಂಡು ಬರಬೇಕು ಎಂದು ಜಮಖಂಡಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾಯಾ೯ಲಯದ ಡಾ.ಪ್ರಕಾಶ ಮುಚ್ಚಂಡಿ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೀಗ ಬೇಸಿಗೆ ಆರಂಭಗೊಂಡಿದೆ ಜೊತೆಗೆ ಪರೀಕ್ಷೆಗಳು ಶುರುವಾಗಿವೆ ಆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಆರೋಗ್ಯದ ಕಡೆಗೆ ಹೆಚ್ಚು ನಿಗಾ ವಹಿಸಬೇಕು ಎಂದರು.
ದೈನಂದಿನ ಜೀವನದಲ್ಲಿಂದು ಬಹುತೇಕ ಜನರು ಹತಾಶೆ,ನಿರಾಸೆ,ದುಗುಡ, ಆತಂಕದ ಛಾಯೆಯಲ್ಲಿ ನಲುಗುತ್ತಿರುವುದು ಹೆಚ್ಚಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಒತ್ತಡದ ಜೀವನದಿದ ಹಲ ಬಗೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆ ಕಾರಣ ಮೊದಲು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯ ಸರಿ ಇದ್ದರೆ ತಾನೆ ಮುಂದಿನ ಕೆಲಸ, ಕಾರ್ಯಗಳು, ಸಂತೃಪ್ತಿ ಬದುಕು ಎಂಬುದನ್ನು ಸೂಕ್ಷ್ಮವಾಗಿ ಎಲ್ಲರೂ ಅರಿಯಬೇಕು ಎಂದರು.
ಅದರಲ್ಲೂ ಇಂದಿನ ಯುವ ಜನತೆಗೆ ಮೊಬೈಲ್ ಹುಚ್ಚು ತಾಗಿದೆ. ಪ್ರೌಢಶಾಲಾ ಹಂತದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ದುಷ್ಟ ವ್ಯಸನ ಚಟಗಳ ಗೀಳಿನಿಂದ ಸುಂದರ ಭವಿಷ್ಯವನ್ನು ಮಂಕಾಗಿಸಿಕೊಂಡು ಜೀವನೋಲ್ಲಾಸಕ್ಕೆ ಇತಿಶ್ರೀ ಹೇಳುತ್ತಿರುವುದು ವಿಷಾಧನೀಯ. ದುಷ್ಚಟಗಳ ಮಾರಕವನ್ನು ಅರಿಯದ ಮುಗ್ದ ಮನಸ್ಸುಗಳು ಇಂಥ ದುರಾಭ್ಯಾಸದಿಂದ ಹೊರಬರಬೇಕು. ದೇವರು ಕರುಣಿಸಿದ ಜೀವಸತ್ವ ದೇಹವನ್ನು ಕಾಯಿಲೆಗಳ ಸರಮಾಲೆಯಲ್ಲಿ ಸಿಲುಕದಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿ ಮಗುವಿನ ಸರ್ವತೋಮುಖ ಬೆಳವಣಿಗೆ, ಅಭಿವೃದ್ಧಿಗೆ ಆರೋಗ್ಯ ಮಹತ್ತರ ಪಾತ್ರ ವಹಿಸುತ್ತದೆ. ಉತ್ತಮ ಗುಣಮಟ್ಟದ ಆಹಾರ ಸೇವನೆ, ಒಳ್ಳೆಯ ಹವ್ಯಾಸವನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಶರೀರ ಸ್ವಚ್ಚವಾಗಿಟ್ಟುಕೊಂಡು ಆರೋಗ್ಯದ ಗುಟ್ಟು ಕಾಪಾಡಿಕೊಳ್ಳಬೇಕು. ಮಕ್ಕಳು ಜಂಕ್ ಫುಡ್, ಚಾಕಲೇಟ್, ಅತಿ ಸಿಹಿ ಪದಾರ್ಥಗಳ ಸೇವನೆಯಿಂದ ದೂರ ಉಳಿಯಬೇಕು.ಇವುಗಳ ಸೇವನೆಯಿಂದ ದಂತ ಸಮಸ್ಯೆಗಳು ಉದ್ಭವಿಸುತ್ತದೆ. ಹಲ್ಲಿನ ಸಂದುಗಳಲ್ಲಿ ಹುಳ ಸೃಷ್ಟಿಯಾಗುತ್ತದೆ. ದಿನಕ್ಕೆರಡು ಬಾರಿ ಬೆಳಿಗ್ಗೆ, ರಾತ್ರಿ ಮಲಗವ ಮುನ್ನ ಸ್ವಚ್ಛವಾಗಿ ಹಲ್ಲು ಉಜ್ಜುವ ರೂಢಿ ಮಾಡಿಕೊಳ್ಳಲು ಮನಸ್ಸು ಮಾಡಿ, ಅತಿ ತಂಪು ಪಾನೀಯಗಳು,ಅತಿ ಬಿಸಿ ಆಹಾರವನ್ನು ಸೇವನೆ ಬೇಡ ಎಂದು ಸಲಹೆ ನೀಡಿದ ಅವರು, ದೇಶದ ಆಸ್ತಿಯಾಗಿರುವ ಯುವಜನತೆ ಸದಾ ಪಿಟ್ ಆಗಿರಬೇಕು ಎಂದರು.
ಪ್ರಭಾರಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕರಾದ ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಗುಲಾಬಚಂದ ಜಾಧವ, ಶ್ರೀಶೈಲ ಹುಣಶಿಕಟ್ಟಿ, ಗುರುಮಾತೆ ಸಹನಾ ಹತ್ತಳ್ಳಿ (ಕಲ್ಯಾಣಿ), ಪ್ರಮೀಳಾ ತೇಲಸಂಗ, ಶೃತಿ ಲಿಗಾಡೆ ಇತರರಿದ್ದರು.