ಕೋಲಾರ ಪಟ್ಟಣ ಪಂಚಾಯಿತಿ 2025-26ನೇ ಸಾಲಿನ ಸಾಮಾನ್ಯ ಸಭೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ನಿವಾಸಿಗಳು ಕಳೆದ ಸುಮಾರು 30 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡಿದ್ದಾರೆ. ಈಗ ಇ ಸ್ವತ್ತು ಉತಾರಿಗೆ ಕಟ್ಟಡ ಪರವಾನಿಗೆ ಕೇಳುತ್ತಿರುವುದು ಸಮಂಜಸವಲ್ಲ. ಮುಳುಗಡೆ ಗ್ರಾಮವಾಗಿರುವುದರಿಂದ ನಿರಾಶ್ರಿತರನ್ನು ಪರಿಗಣಿಸಿ ಅವರಿಗೆ ಇ ಸ್ವತ್ತು ಉತಾರಿಗೆ ಅವಕಾಶ ಮಾಡಿ ಕೊಡಬೇಕು ಎಂದು 7ನೇ ವಾರ್ಡ ಸದಸ್ಯ ವಿಜಯಮಹಾಂತೇಶ ಗಿಡ್ಡಪ್ಪಗೋಳ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಪಪಂ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ ನೆತೃತ್ವದಲ್ಲಿ 2025-26ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ತೌಸಿಪ ಗಿರಗಾವಿ ಮಾತನಾಡಿ ಜಾನುವಾರು ಸಂತೆಯಲಿ ದನಕರುಗಳಿಗೆ ನೀರಿನ ಪೈಪ್ಲೈನ್ ವ್ಯವಸ್ಥೆ ಇದ್ದರು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಅಲ್ಲಿ ನೀರು ಬಿಡುವುದಿಲ್ಲ, ಕೆಲ ವಾರ್ಡಿನಲ್ಲಿ ವಿದ್ಯುತ್ ಕಂಬಗಳಲ್ಲಿ ಬಲ್ಬ್ ಗಳು ಹತ್ತುವುದಿಲ್ಲ. ಸಮಸ್ಯೆ ಕುರಿತು ಪೋನ್ ಮಾಡಿದರೆ ಪೋನ್ ಎತ್ತುವುದಿಲ್ಲ ಎಂದರು.
ಪಟ್ಟಣ ಪಂಚಾಯಿತಿಗೆ ಸಮಯಕ್ಕೆ ಸರಿಯಾಗಿ ಪಂಚಾಯಿತಿ ಸಿಬ್ಬಂದಿಗಳು ಕೆಲಸಕ್ಕೆ ಬರದಿರುವ ಸಿಬ್ಬಂದಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡು ಸಭೆಯಲ್ಲಿ ಎಚ್ಚರಿಕೆ ನೀಡಿದರು. ಅದರಂತೆ ಪಟ್ಟಣದಲ್ಲಿ ರಸ್ತೆ ಮಧ್ಯದಲ್ಲೇ ಬೇಕಾಬಿಟ್ಟಿ ಬೈಕ್ ಸೇರಿದಂತೆ ನಾನಾ ರೀತಿಯ ವಾಹನಗಳು ರಸ್ತೆ ಮಧ್ಯದಲ್ಲೇ ಹಚ್ಚುತ್ತಿರುವುದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಮುಖ್ಯ ರಸ್ತೆಯ ಮೇಲೆ ಮಳಿಗೆದಾರರು ರಸ್ತೆ ಒತ್ತುವರಿ ಮಾಡಿಕೊಂಡಿರುವ ಆರೋಪಗಳು ಇವೆ. ಅಂತಹ ಮಳಿಗೆದಾರರ ವಿರುದ್ಧ ನೋಟಿಸ ಕೊಟ್ಟು ಶಿಸ್ತು ಕ್ರಮ ಕೈಗೊಳ್ಳಬೇಕು. ಕೆಲವು ವಾರ್ಡಿನಲ್ಲಿ ಸಾಕಷ್ಟು ಸಮಸ್ಯೆಗಗಳು ಇವೆ ಅಂತಹ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಎಲ್ಲ ಸದಸ್ಯರು ಹೇಳಿದರು.
ಸಭೆಯಲ್ಲಿ ಕಣ್ಣೀರು ಹಾಕಿದ ಸಿಬ್ಬಂದಿ: ಕಳೆದ ಎರಡು ವರ್ಷದಿಂದ ಪಟ್ಟಣ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಖಾಸಗಿ ಸಿಬ್ಬಂದಿ ಶಂಕ್ರಮ್ಮ ಚೌಡಪ್ಪಗೋಳ ಎಂಬ ಮಹಿಳೆಗೆ ಸಂಬಳ ನೀಡಿಲ್ಲ ಎಂದು ಸಭೆಯಲ್ಲಿ ಮಹಿಳೆ ಎಲ್ಲ ಸದಸ್ಯರ ಎದರು ಕಣ್ಣಿರು ಹಾಕಿದ ಪ್ರಸಂಗ ನಡೆಯಿತು.
ಸಭೆಯಲ್ಲಿ ಮಹಿಳೆ ಕಣ್ಣಿರು ಹಾಕುತ್ತಿದಂತೆ 11 ನೇ ವಾರ್ಡಿನ ಸದಸ್ಯ ಅಪ್ಪಾಶಿ ಮಟ್ಯಾಳ(ಗೂಳಗೊಂಡ) ಸೇರಿದಂತೆ ಹಲವು ಸದಸ್ಯರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ನಿಮಗೆ ಒಂದು ತಿಂಗಳ ಸಂಬಳ ತಡವಾದರೆ ನಿಮಗೆ ಸಹಿಸಿ ಕೊಳ್ಳುವ ಶಕ್ತಿ ಇಲ್ಲಾ ಆ ಮಹಿಳೆ ಎರಡು ವರ್ಷದಿಂದ ಸಂಬಳ ಕೊಟ್ಟಿಲ್ಲ ಮೊದಲು ಆ ಮಹಿಳೆಗೆ ಸಂಬಳ ಕೊಡಿಸುವ ಕೆಲಸ ಮಾಡಿ ಎಂದರು.
ಪತ್ರಕರ್ತರನ್ನು ಹೊರಗಿಟ್ಟು ಸಭೆ
ಸಭೆಗೆ ಬಂದ ಪತ್ರಕರ್ತರಿಗೆ ಪಟ್ಟಣ ಪಂಚಾಯಿತಿಯ 13 ನೇ ವಾರ್ಡಿನ ಸದಸ್ಯ ಶ್ರೀಶೈಲ ಮುಳವಾಡ ಪತ್ರಕರ್ತರನ್ನು ಹೊರಗೆ ಕಳುಹಿಸಿ ಇಲ್ಲದಿದ್ದರೆ ನೀವೇ ಸಭೆ ಮಾಡಿಕೊಳ್ಳಿ ಎಂದು ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರೊಂದಿಗೆ ಮಾತಿನ ಚಕಮುಕಿ ನಡೆಸಿದ ನಂತರ ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ ಪತ್ರಕರ್ತರನ್ನು ಹೊರಗೆ ಹೋಗಿ ಎಂದು ಪತ್ರಕರ್ತರಿಗೆ ತಿಳಿಸಿದರು. ಪತ್ರಕರ್ತರು ನಮಗೆ ಸಭೆಗೆ ಆಹ್ವಾನ ನೀಡಿ ಈ ತರ ಮಾಡುವುದು ಸರಿಯಾದ ಕ್ರಮವಲ್ಲಾ ಇದು ಕಾನೂನಿನ ಚೌಕಟ್ಟಿನಲ್ಲಿ ಎಷ್ಟರಮಟ್ಟಿಗೆ ಸರಿ ಇದೆ ಎಂದು ಪ್ರಶ್ನಿಸಿ ಪತ್ರಕರ್ತರು ಸಭೆಯಿಂದ ಹೊರನಡೆದರು. ಪತ್ರಕರ್ತರಿಗೆ ಆಹ್ವಾನ ನೀಡಿ ದಿಡೀರಾಗಿ ಕೆಲಕಾಲ ಪತ್ರಕರ್ತರನ್ನು ಹೊರಗೆ ಹಾಕಿ ಗೌಪ್ಯವಾಗಿ ಮಂಗಳವಾರ ಸಭೆ ನಡೆಸಿದ್ದು ಸಾರ್ವಜನಿಕರಿಗೆ ಸಂಶಯಕ್ಕೆ ಕಾರಣವಾಗಿದೆ.
ಸರ್ಕಾರದ ಆದೇಶ ಗಾಳಿಗೆ ತೂರಿದ ಪಪಂ ಮುಖ್ಯಾಧಿಕಾರಿ
ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿ ಕಾರ್ಡ್ ಧರಿಸಿರಲಿಲ್ಲ ಮತ್ತು ಅವರ ಕೆಲವು ಸಿಬ್ಬಂದಿಗಳು ಕೂಡಾ ಐಡಿ ಕಾರ್ಡ್ ಧರಿಸಿದೆ ಸಾಮಾನ್ಯ ಸಭೆಗೆ ಬಂದಿದ್ದರು ಸಭೆಯಲ್ಲಿ ವಾರ್ಡಿನ ಸದಸ್ಯರಿಗೆ ಪಪಂ ಸಿಬ್ಬಂದಿಗಳು ಯಾರು ಎಂಬುದೆ ತಿಳಿಯದಂತಾಗಿತ್ತು. ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರು ತಮ್ಮ ಐಡಿ ಕಾರ್ಡ್ ಕೊರಳಲ್ಲಿ ಹಾಕಿಕೊಂಡು ಸಭೆಗೆ ಆಗಮಿಸಿದ್ದು ವಿಶೇಷವಾಗಿತ್ತು.
“ಪತ್ರಕರ್ತರಿಗೆ ಸಾಮಾನ್ಯ ಸಭೆಗೆ ಅವಕಾಶ ಇದೆ. ಆದರೆ ಪಪಂ ಅಧ್ಯಕ್ಷರು ಪತ್ರಕರ್ತರನ್ನು ಹೊರಗೆ ಕಳಿಸಿ ಎಂದಿದ್ದಾರೆ.”
– ಉಮೇಶ ಚಲವಾದಿ
ಪಪಂ ಮುಖ್ಯಾಧಿಕಾರಿ
” ಪಪಂ ಸಾಮಾನ್ಯ ಸಭೆಗೆ ಪತ್ರಕರ್ತರಿಗೆ ಅವಕಾಶ ನೀಡಬೇಕು ನೀಡಬಾರದು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಪತ್ರಕರ್ತರನ್ನು ಹೊರಗೆ ಹಾಕಿ ಎಂದು ನಾನು ಮುಖ್ಯಾಧಿಕಾರಿಗೆ ಹೇಳಿಲ್ಲ.”
– ಚನ್ನಮಲ್ಲಪ್ಪ ಗಿಡ್ಡಪ್ಪಗೋಳ
ಪಪಂ ಅಧ್ಯಕ್ಷರು
“ಪತ್ರಕರ್ತರಿಗೆ ಸಭೆಗೆ ಆಹ್ವಾನ ನೀಡಿದ್ದರೆ ಅವಕಾಶ ಕೊಡಬೇಕು. ತಾವು ಇದರ ಕುರಿತು ನಮಗೆ ದೂರು ಸಲ್ಲಿಸಿದರೆ ಮುಖ್ಯಾಧಿಕಾರಿಗೆ ಸ್ಪಷ್ಟೀಕರಣ ಕೇಳುತ್ತೇವೆ.”
– ಬಿ.ಎ. ಸೌದಾಗರ
ಯೋಜನಾ ನಿರ್ದೇಶಕರು
ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯಪುರ.