ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ನೈತಿಕ ಶಿಕ್ಷಣವನ್ನು ನೀಡಲು ಎಲ್ಲ ಪಾಲಕರು ಮುಂದಾಗಬೇಕು ಎಂದು ಹೋರಾಟಗಾರ ಬಸವರಾಜ ನಂದಿಕೇಶ್ವರಮಠ ಹೇಳಿದರು.
ಪಟ್ಟಣದ ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯ ೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಮ್ಮಲ್ಲಿ ಮಕ್ಕಳಿಗೆ ಶಿಕ್ಷಣದ ಕೊರತೆ ಇಲ್ಲ. ಆದರೆ ನೈತಿಕ ಶಿಕ್ಷಣದ ಕೊರತೆ ಸಾಕಷ್ಟು ಕಾಣುತ್ತಿದೆ. ಅದಕ್ಕೆ ಹೊಣೆಗಾರರು ಪಾಲಕರು. ನಮ್ಮ ಮಕ್ಕಳು ಡಾಕ್ಟರ್, ಇಂಜಿನೀಯರ್ ಆಗಬೇಕು ಎಂದು ಬರೀ ಓದಿನತ್ತ ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ ಹೊರತು ನಮ್ಮ ಮಗ ಜಗ ಬೆಳಗುವ ವ್ಯಕ್ತಿಯಾಗಲಿ ಎಂದು ಭಾವಿಸುವದಿಲ್ಲ. ಜಗ ಬೆಳಬೇಕಾದ ಮನುಷ್ಯನಿಗೆ ಮೊದಲು ಮಾನವೀಯತೆ ಬೇಕು. ನೈತಿಕತೆ ಬೇಕು. ಮತ್ತೊಬ್ಬರಿಗೆ ಸಹಾಯ ಮಾಡುವ ಒಳ್ಳೆಯ ಗುಣಗಳು ಬೇಕು. ಅದೆಲ್ಲವನ್ನು ಕಲಿಸಿಕೊಡಲು ಪಾಲಕರಿಂದ ಮಾತ್ರ ಸಾಧ್ಯ ಎಂದರು. ಇಂದಿನಿಂದಲೇ ಎಲ್ಲ ಪಾಲಕರು ನಿಮ್ಮ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಮುಂದಗಿ ಎಂದರು.
ಪಾಲಕರ ಪ್ರತಿನಿಧಿ, ಶಿಕ್ಷಕ ರೇವಣಸಿದ್ದಪ್ಪ ವಡಗೇರಿ ಮಾತನಾಡಿ ಸಧ್ಯದ ಸಿನಮಾನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಣದ ವಸೂಲಿಗಾಗಿ ನಿಂತಿವೆ. ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ. ಬಡ ಮಕ್ಕಳನ್ನು ಪ್ರೋತ್ಸಾಹಿಸಲು ಸರ್ಕಾರ ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.
ಪ್ರಮುಖರಾದ ಸುರೇಶಗೌಡ ಹಿರೇಮಠ, ಪುಂಡಲಿಕ ಮುರಾಳ ಮಾತನಾಡಿದರು. ವಿವಿಧ ಕ್ರೀಡೆಯಲ್ಲಿ ತರಗತಿಗನುಗುಣವಾಗಿ ಪ್ರಥಮ, ದ್ವಿತಿಯ, ತ್ರತೀಯವಾಗಿ ಆಯ್ಕೆಯಾದ ಮಕ್ಕಳಿಗೆ ಸಂಸ್ಥೆಯಿಂದ ಪ್ರಶಸ್ತಿ ಹಾಗೂ ಫಲಕ ನೀಡಿ ಗೌರವಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಆಶ್ರಮದ ಡಾ. ಲಾಲಲಿಂಗೇಶ್ವರ ಶರಣರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಚನ್ನಪ್ಪಗೌಡ ಪಾಟೀಲ, ಚನ್ನಬಸಪ್ಪ ಪಡದಾಳಿ, ಚಂದ್ರಶೇಖರ ಬಿರಾದಾರ, ಆರ್.ಎಸ್. ವಡಗೇರಿ, ಸಂಸ್ಥೆಯ ಕಾರ್ಯಾದ್ಯಕ್ಷ ವೀರೇಶ ಗುರುಮಠ, ಬಸವರಾಜ ಕತ್ತಿ, ಮುಖ್ಯಗುರುಮಾತೆ ಭಾವನಾ ಕತ್ತಿ ಸೇರಿದಂತೆ ಮತ್ತೀತರರು ಇದ್ದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.

