ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದಂತೆ ಕೊಲ್ಹಾರ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ (ಸಿ.ಎಚ್.ಸಿ)ವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸರಕಾರದ ಆದೇಶ ಸಂಖ್ಯೆ ಆಕೂಕ ೩೮೭ ಸಿಜೆಎಮ್ ೨೦೨೫, ದಿನಾಂಕ ೦೪-೦೭-೨೦೨೬ರ ಪ್ರಕಾರ ಇಂದಿನಿಂದ ಇದು ಸಮುದಾಯ ಆರೋಗ್ಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಶಾಸಕ ಶಿವಾನಂದ ಪಾಟೀಲರ ಆಪ್ತ ಸಹಾಯಕ ಈರಣ್ಣ ಕೊಪ್ಪಳ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಡಿ ಕೊಲ್ಹಾರದಲ್ಲಿನ ಕೇಂದ್ರವನ್ನು ೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.
ಈ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ, ಒಪಿಡಿ, ಒಬಿಜಿ ಸೇವೆಗಳು, ಔಷಧ ವಿತರಣೆ, ಅಲ್ಟ್ರಾಸೌಂಡ್, ಎಕ್ಸರೇ, ದಂತ ಚಿಕಿತ್ಸಾ ಘಟಕ, ನವಜಾತ ಶಿಶು ಆರೈಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಪುರುಷ ಮತ್ತು ಮಹಿಳಾ ವಾರ್ಡುಗಳು, ಸಣ್ಣ ಆಪರೇಷನ್ ಥಿಯೇಟರ್, ಆಡಳಿತ ಕಚೇರಿ ಮತ್ತು ಬಹುಉದ್ದೇಶ ಸಭಾಂಗಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತದೆ.
ಈ ಯೋಜನೆಗೆ ಒಟ್ಟು ೫ ಕೋಟಿ ೭೫ ಲಕ್ಷ ರೂಪಾಯಿ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಿರುವುದು ಹಾಗೂ ತಾಯಿ-ಮಕ್ಕಳ ಎಂಸಿಎಚ್ ಆಸ್ಪತ್ರೆ ಮಂಜೂರಿಗೆ ಶಾಸಕ ಶಿವಾನಂದ ಪಾಟೀಲರ ಪ್ರಯತ್ನಕ್ಕೆ ಪಟ್ಟಣ ಹಾಗೂ ತಾಲೂಕಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.
