ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಸ್ ಐಆರ್ ಗೆ ಸಂಬಂಧಿಸಿದಂತೆ ಇತ್ತೀಚಿಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಮತಕ್ಷೇತ್ರದಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದರೂ ಎಸ್ ಐಆರ್ ಫಾರ್ಮನಲ್ಲಿ ಈ ಹಿಂದೆ ವಾಸವಿದ್ದ ತಮ್ಮ ಮೂಲ ಹಳೆಯ ಓಣಿಯ ವಿಳಾಸ ತುಂಬುವಂತೆ ತಿಳಿಸಿ ಪೋಸ್ಟ್ ಮಾಡಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ಅಂತಹ ವ್ಯಕ್ತಿಗಳನ್ನು ಕಠಿಣ ಶಿಕ್ಷೆಗೊಳಪಡಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಜಾ ಪ್ರಾತಿನಿಧ್ಯ ಕಾಯ್ದೆ ೧೯೫೦ ರ ಕಲಂ ೧೭ ರಂತೆ ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಇರಬಾರದು. ಕಲಂ ೧೮ ರಂತೆ ಅರ್ಹತೆ ಇಲ್ಲದಿದ್ದರೂ ಅಥವಾ ತಪ್ಪು ಮಾಹಿತಿಯನ್ನು ನೀಡಿ ನೋಂದಣಿ ನಿಷೇಧಿಸಲಾಗಿದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಅಥವಾ ಸುಳ್ಳು ಮಾಹಿತಿ ನೀಡಿದರೆ ಸೆಕ್ಷನ್ ೩೧ ರಡಿ ಗರಿಷ್ಠ ೧ ವರ್ಷ ಶಿಕ್ಷೆ ಅಥವಾ ದಂಡ ಎರಡನ್ನೂ ವಿಧಿಸಲಾಗುವುದು ಎಂದವರು ತಿಳಿಸಿದ್ದಾರೆ. ಜೂ. ೩೦ ರಿಂದ ಜು. ೨೯ ರವರೆಗೆ ಮನೆ ಮನೆಗೆ ಗಣತಿ ನಮೂನೆ ವಿತರಿಸುವ ಸಂದರ್ಭದಲ್ಲಿ ತಾವು ಗಣತಿ ನಮೂನೆಯಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ಹೆಸರು ಬೇರೆ ಯಾವುದೇ ಇತರೆ ವಿಧಾನ ಸಭಾ ಕ್ಷೇತ್ರ ಅಥವಾ ಸಂಸದೀಯ ಮತದಾರರ ಪಟ್ಟಿಯಲ್ಲಿ ಸೇರಿರುವುದಿಲ್ಲವೆಂದು ಭರ್ತಿ ಮಾಡಿ ಸಲ್ಲಿಸಬೇಕಾಗಿರುತ್ತದೆ. ಆದ್ದರಿಂದ ತಾವು ತಪ್ಪು ಮಾಹಿತಿ ನೀಡಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದು ಕಂಡುಬಂದಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ ೧೯೫೦ರ (೧೯೫೦ರ ೪೩ನೇ ಕಾಯ್ದೆ) ಕಲಂ ೩೧ ರಂತೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ನಗರ ಮತಕ್ಷೇತ್ರದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಅವರು ದ್ವಿಪ್ರತಿಗಳಲ್ಲಿ ನೀಡುವ ಗಣತಿ ನಮೂನೆಗಳನ್ನು ಪ್ರತಿಯೊಬ್ಬ ಮತದಾರರು ಪಡೆದು, ಅವುಗಳನ್ನು ತಮ್ಮ ಸಹಿಯೊಂದಿಗೆ ಭರ್ತಿ ಮಾಡಿ, ಒಂದು ಪ್ರತಿಯನ್ನು ಬಿಎಲ್ ಒ ಅವರಿಗೆ ಕಡ್ಡಾಯವಾಗಿ ಹಿಂದಿರುಗಿಸಿ, ಇನ್ನೊಂದು ಪ್ರತಿಯನ್ನು ಅವರಿಂದ ಸ್ವೀಕೃತಿ ಪಡೆದು ಮತದಾರರು ತಮ್ಮ ಬಳಿ ಇಟ್ಟುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೈರು ಹಾಜರಾದವರು, ಸ್ಥಳಾಂತರಗೊಂಡವರು, ನಿಧನರಾದವರು ಮತ್ತು ಸಂಭವನೀಯ ನಕಲು ಮತದಾರರನ್ನು ಗುರುತಿಸುವುದು ಹಾಗೂ ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಹೆಸರು ಉಳಿಸುವ ಪ್ರಕ್ರಿಯೆ ಇದಾಗಿದೆ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು ಮತ್ತು ಅನರ್ಹ ಮತದಾರರನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಗೆ ಸೇರಬಾರದು ಎಂಬುದೇ ಈ ಪ್ರಕ್ರಿಯೆಯ ಮೂಲ ಉದ್ದೇಶವಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

