ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶಾರದಾ ಮಾತೆಯನ್ನು ನಂಬಿ ಅಧ್ಯಯನಿಸಿದವರಿಗೆ ಖಂಡಿತವಾಗಿ ಜ್ಞಾನಪ್ರಾಪ್ತಿಯಾಗುತ್ತದೆ ಎಂದು ಸಾಹಿತಿ ಸಂಗಮೇಶ ಕರೆಪ್ಪಗೋಳ್ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದ ಶ್ರೀಸೋಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಎಸ್ ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯೆ ಯಾರಪ್ಪನ ಸ್ವತ್ತು ಅಲ್ಲ ಶ್ರಮ ಪಟ್ಟು ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ ಅಭ್ಯಾಸದ ಜೊತೆಗೆ ನೈತಿಕ ಮೌಲ್ಯಗಳನ್ನು ಆಭರಣವಾಗಿ ಸ್ವೀಕರಿಸಬೇಕು ಆಗ ಬದುಕೇ ಬಂಗಾರವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಮಾತನಾಡಿ, ಶಾಲೆಗೆ ಬೇಕಾಗಿರುವ ಪೂರಕ ಸಾಮಗ್ರಿಗಳನ್ನು ಹಾಗೂ ಮೂಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಲಾಗುತ್ತದೆ ಎಂದರು,
ಗ್ರಾಮದ ಪಂಚವಟಿ ಆಶ್ರಮದ ಕಾಶೀನಾಥ ಶ್ರೀಗಳು ಆಶೀರ್ವಚನ ನೀಡಿದರು. ಶಿಕ್ಷಕ ಬಿ. ವೈ. ಭಂಟನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕರಾದ ಬಿ.ಆರ್.ಪಾಟೀಲ್, ಎ.ಡಿ.ನಾಗರಾಳ, ಮುಖ್ಯಶಿಕ್ಷಕ ಕೆ.ಆಯ್. ಹೊಸಮನಿ, ಉಪನ್ಯಾಸಕ ಎಚ್.ಕೆ. ಕರಡಿ, ಶಿಕ್ಷಕ ಶಿವರಾಜ್ ನಾಗರಹಳ್ಳಿ, ಅನಿತಾ ಕೊಟಾರಗಸ್ತಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನೀಯರು, ಪಾಲಕರು ಇದ್ದರು.

