ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ನಿರಾಶೆ ಮಾಡಿದ್ದು ನಿರೀಕ್ಷೆಗಳಿಗೆ ಸಂಪೂರ್ಣ ತಣ್ಣೀರೆಚಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಈ ಕುರಿತು ಪತ್ರಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಜಯಪುರ ಜಿಲ್ಲೆಗೆ ದೊಡ್ಡ ಅನ್ಯಾಯವಾಗುತ್ತಲೇ ಇದೆ, ಅವಳಿ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಅನುದಾನವಂತೂ ಮರೀಚಿಕೆಯಾಗಿದೆ, ಈ ಹಿಂದೆ ಕೃಷ್ಣೆಯ ಸನ್ನಿಧಿಯಲ್ಲಿ ೧೦ ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಒಂದೇ ಒಂದು ರೂ. ಬಿಡುಗಡೆ ಮಾಡಿಲ್ಲ, ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ, ಈ ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಅಂತಿಮ ಸ್ಪರ್ಶ ನೀಡಲಾಗಿತ್ತು, ಕೇವಲ ಲೋಕಾರ್ಪಣೆ ಕಾಮಗಾರಿ ಮಾಡಲು ಸಹ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ಶೀಘ್ರ ಪೂರ್ಣ ಎಂಬಷ್ಟೇ ಘೋಷಣೆಗೆ ಸೀಮಿತ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಬಗ್ಗೆ ಕಾಂಗ್ರೆಸ ಸರ್ಕಾರ ಅಸಡ್ಡೆ ನೀತಿ ಪುನರಾವರ್ತನೆಯಾಗುತ್ತಲೇ ಇದೆ.
ಮುಖ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಬೇಡಿಕೆ ಈಡೇರಿಕೆಯಾಗುತ್ತಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಪೂರಕ ಜಾಗೆ, ಸೌಲಭ್ಯ ಇದ್ದರೂ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ.
ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆಯ ಸ್ಪಷ್ಟತೆ ಸಹ ಇಲ್ಲದಂತಾಗಿದೆ. ಕೇವಲ ಘೋಷಣೆ ಪ್ರಧಾನವಾಗಿದ್ದು, ಅನುಷ್ಠಾನ ಗೌಣವಾಗಿದೆ ಎಂದು ಉಮೇಶ ಕಾರಜೋಳ ಅವರು ಹೇಳಿದ್ದಾರೆ.

