ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಜೆಟ್ ಎಂಬುದು ಬರೀ ಹಾಳೆಗಳ ಮೇಲಿನ ಲೆಕ್ಕವಲ್ಲ, ಅದು ರಾಜ್ಯದ ಜನತೆಯ ಭವಿಷ್ಯ ರೂಪಿಸುವ ಕೈಪಿಡಿ ಎಂಬ ನಂಬಿಕೆಯನ್ನು ಮತ್ತೊಮ್ಮೆ ಮಾನ್ಯ ಸಿದ್ಧರಾಮಯ್ಯನವರು ಸಾಬೀತು ಪಡಿಸಿದ್ದಾರೆ ಎಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಡಾಕ್ಟರ್ ಸೆಲ್ ಅಧ್ಯಕ್ಷ ಡಾ.ಸಮೀರ ಹಾದಿಮನಿ ತಿಳಿಸಿದ್ದಾರೆ.
ದಶಕಗಳ ನಿರೀಕ್ಷೆಯಾಗಿದ್ದ ವಿಜಯಪುರ ವಿಮಾನ ನಿಲ್ದಾಣ 2026 ರಲ್ಲಿ ಪ್ರಾರಂಭಗೊಳಿಸಲು ಹಸಿರು ನಿಶಾನೆ ದೊರೆತಿದ್ದು ಸಂತಸತಂದಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡಿದ್ದು ರೈತರಿಗೆ ಅನುಕೂಲವಾಗಲಿದೆ. ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣದಿಂದ ಕಲ್ಯಾಣಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಸ್ಥಾಪನೆ ಮತ್ತು ಕೆಐಎಡಿಬಿ ಜಾಗೆ ಹಂಚಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 20% ಪ್ರತಿಶತ ಮೀಸಲು ನೀಡಿದ್ದು, ಸಮುದಾಯದ ಸರಳ ವಿವಾಹಗಳಿಗೆ 50 ಸಾವಿರ ಸಹಾಯ ಧನ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, 169 ಹಾಸ್ಟೆಲ್ ಗಳು ಅಲ್ಲದೆ ಸಿಕ್, ಬೌದ್ಧ, ಜೈನ ಸಮುದಾಯದ ಅಭಿವೃದ್ಧಿಗೆ ಅನುದಾನ ಘೋಷಣೆಯ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಕಾಳಜಿ ಪ್ರಶ್ನಾತೀತವಾಗಿದೆ.
51,034 ಕೋಟಿ ರೂ ಪಂಚಗ್ಯಾರಂಟಿಗಳಿಗೆ ಮೀಸಲಿಡುವುದರ ಜೊತೆಗೆ, ಅರೋಗ್ಯ ಇಲಾಖೆಗೆ 17,473 ಕೋಟಿ, ಲೋಕೋಪಯೋಗಿ ಇಲಾಖೆಗೆ 11,841, ಸಮಾಜಕಲ್ಯಾಣ ಇಲಾಖೆಗೆ 16,955 ಹೀಗೆ ಇಲ್ಲ ಇಲಾಖೆಗಳಿಗೂ ಯೋಜನೆಗಳನ್ನು ಘೋಷಿಸುವುದರ ಮೂಲಕ “ಡಬಲ್ ಗ್ಯಾರಂಟಿ ಬಜೆಟ್” ಮಂಡಿಸಿದ್ದಾರೆ ಡಾ.ಸಮೀರ ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

