ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಎಂ ಸಿದ್ದರಾಮಯ್ಯರವರು 2025ರ ಬಜೆಟ್ ನಿರಾಶಾದಾಯಕವಾಗಿ ಮಂಡಿಸಿದ್ದಾರೆ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಆರ್ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಮೀನುಗಾರರ ಕಾಲೇಜುಗಳ ಸಂಖ್ಯೆ ಹೆಚ್ಚಿಸುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ 3 ಲಕ್ಷ ರೂಪಾಯಿಗಳವರೆಗೆ 4 ಚಕ್ರದ ವಾಹನ ಖರೀದಿಸಲು ಆರ್ಥಿಕ ನೆರವು ನೀಡಿದ್ದಾರೆ. 15 ವರ್ಷಕ್ಕಿಂತ ಹಳೆಯ ದೋಣಿಗಳಿಗೆ ಹೊಸ ಎಂಜಿನ್ ಅಳವಡಿಸಲು 1 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ. ಮೈಸೂರಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಆಧುನಿಕ ಪ್ರದರ್ಶನ ಕೇಂದ್ರ ಸ್ಥಾಪನೆ ಮತ್ತು ಮಲ್ಪೆಯಲ್ಲಿ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆ ಹೊರತುಪಡಿಸಿ, ಮೀನುಗಾರರ ಮೂಲಭೂತ ಸೌಕರ್ಯಗಳು, ಸುರಕ್ಷತೆ ಮತ್ತು ಅವರ ಜೀವನೋಪಾಯಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಈ ಬಜೆಟ್ ಪೂರೈಸುವಲ್ಲಿ ವಿಫಲವಾಗಿದೆ. ಇದು ಒಟ್ಟಾರೆಯಾಗಿ ಮೀನುಗಾರ ಸಮುದಾಯಕ್ಕೆ ನಿರಾಶೆ ತಂದಿದೆ ಎಂದು ಡಾ ಗೌತಮ್ ಆರ್ ಚೌಧರಿ
ತಿಳಿಸಿದ್ದಾರೆ.

