ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಆಸ್ತಿ ನಂ.೧೦೨೯ರ ಖವರಸ್ಥಾನ ಜಾಗೆಯಲ್ಲಿ ವಕ್ಫ್ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡ ೧೭ನೆಯ ದಿನದ ದರಣಿ ಸತ್ಯಾಗ್ರಹಕ್ಕೆ ಆಗಮಿಸಿದ್ದ ನ್ಯಾಯವಾದಿ ಎಸ್.ಎ.ಖಾದ್ರಿ ಪ್ರತಿಭಟನಾಕಾರರ ಮನವೊಲಿಸಿ ಸತ್ಯಾಗ್ರಹವನ್ನು ಕೊನೆಗೊಳಿಸುವಲ್ಲಿ ಸಫಲರಾದರು.
ಪಟ್ಟಣದ ಆಸ್ತಿ ನಂ.೧೦೨೯ರ ಖವರಸ್ಥಾನ ಜಾಗೆಯಲ್ಲಿ ವಕ್ಫ್ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡ ದರಣಿ ಸತ್ಯಾಗ್ರಹಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ಸದರಿ ಆಸ್ತಿ ನಂ. ಜಾಗೆಯು ಖಬರಸ್ಥಾನ ಜಾಗೆಯಾಗಿದ್ದು, ಅದು ಇಂದು ಮುಂದು ಎಂದೆಂದು ಖಬರಸ್ಥಾನ ಮೀಸಲಾದ ಜಾಗೆ ಇರುತ್ತದೆ. ಇದು ಅಧಿಕೃತ ಸರಕಾರದ ಘೋಷಣೆ ಎಂದೇ ಸಿಂದಗಿ ನಗರದ ಸಮಸ್ತ ಮುಸ್ಲಿಂ ನಾಗರಿಕರು ಬರೆದಿಟ್ಟುಕೊಳ್ಳಬೇಕೆಂದು ಹೇಳಿದ ಅವರು, ಸದರಿ ಆಸ್ತಿಗೆ ಸಂಬಂಧಿಸಿದ ಒಂದು ಇಂಚು ಜಾಗವು ಸಮಸ್ತ ಸಿಂದಗಿ ನಾಗರಿಕರ ಒಪ್ಪಿಗೆ ಇಲ್ಲದೇ ಯಾರೋಬ್ಬ ವ್ಯಕ್ತಿಯಾಗಲಿ, ಯಾವುದೇ ಕಮಿಟಿಗಳಾಗಲಿ ಪರಭಾರೆ ಅಥವಾ ಉಪಭೋಗ ಮಾಡುವಂತಿಲ್ಲ ಎಂಬುದು ಸರಕಾರದ ಸ್ಪಷ್ಟ ನಿಲುವಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಅನಧಿಕೃತ ಖಬರಸ್ಥಾನ ಕಮಿಟಿಯ ಸತ್ಯಾಸತ್ಯತೆಯನ್ನು ಪರಿಗಣಿಸಿ ಆದಷ್ಟು ಅದರ ರದ್ದತಿಗೆ ಕ್ರಮವಹಿಸಿಲು ವಕ್ಫ್ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು. ಈ ತಿಂಗಳೊಳಗಾಗಿ ಕರ್ನಾಟಕ ವಕ್ಫ್ ಬೋರ್ಡ್ ಕಮಿಟಿ ಸಂರಚನೆ ಮಾಡಲಾಗುವುದು. ೫ವರ್ಷಗಳವರೆಗೆ ಪೂರ್ಣಾವಧಿಗೆ ಅಧ್ಯಕ್ಷರನ್ನು ನೇಮಿಸಿ ಈ ಜಾಗೆಯ ಸಂಪೂರ್ಣ ಉಸ್ತುವಾರಿಯನ್ನು ಅವರಿಗೆ ವಹಿಸಲಾಗುವುದು.
ವಕ್ಫ್ ಬೋರ್ಡ್ ಅಧೀನದಲ್ಲಿರುವ ಆಸ್ತಿಯ ಕುರಿತಾಗಿ ಮುಸ್ಲಿಂ ಬಾಂಧವರು ಯಾವುದೇ ರಾಜಕೀಯ ವ್ಯಕ್ತಿಗಳ ಮತ್ತು ಅಧಿಕಾರಿಗಳ ಎದುರು ಕೈಮುಗಿದು ನಿಲ್ಲುವ ಅವಶ್ಯಕತೆ ಇಲ್ಲ. ಈ ವಕ್ಫ್ ಆಸ್ತಿಯ ಸಂಬಂಧಿತವಾಗಿ ೧೮ವರ್ಷ ತುಂಬಿದ ಯಾವುದೇ ವ್ಯಕ್ತಿಯು ಬೋರ್ಡಿನ್ ಕಾರ್ಯವೈಖರಿಯ ಕುರಿತು ಪ್ರಶ್ನಿಶಿಸುವ ಅಧಿಕಾರವಿದೆ. ಈ ಜಾಗೆಯ ೫ಎ ೧೯ಗುಂಟೆ ಜಾಗೆಗೆ ಯಾವುದೇ ಮುಸ್ಲಿಂ ವ್ಯಕ್ತಿಯು ಸ್ವಯಂ ಪ್ರೇರಿತವಾಗಿ ತಂತಿ ಬೇಲಿಯನ್ನು ಹಾಕಲು ತಯ್ಯಾರಿದ್ದರೆ ನಾಳೆಯೇ ಎಲ್ಲರ ಸಮ್ಮುಖದಲ್ಲಿ ಈ ಕಾರ್ಯವನ್ನು ಮಾಡಬೇಕು. ಒಂದು ವೇಳೆ ಆಗದಿದ್ದರೆ ವಕ್ಫ್ ಬೋರ್ಡ್ ಮೂಲಕ ತಂತಿ ಬೇಲಿ ಹಾಕುವವರೆಗೆ ಕಾಯಬೇಕು ಎಂದರು.

