ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪುರಸಭೆಯ ಸರಹದ್ದಿನಲ್ಲಿ ಸುಮಾರು ವರ್ಷಗಳಿಂದ ಅನಧಿಕೃತವಾಗಿ ಅಂಗಡಿಗಳನ್ನು ಕಟ್ಟಿ ಅವುಗಳಿಂದ ಬಾಡಿಗೆ ಪಡೆಯುತ್ತಿದ್ದು, ಅಂತಹ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಉತಾರಿಗಳನ್ನು ಸೃಷ್ಠಿಸಿಕೊಂಡು ಪ್ರತಿ ತಿಂಗಳು ಹತ್ತಾರು ಸಾವಿರ ಬಾಡಿಗೆ ಪಡೆಯುತ್ತಿರುವುದರಿಂದ ಪುರಸಭೆಗೆ ಬರಬೇಕಾದ ಆದಾಯಕ್ಕೆ ಕೊಕ್ಕೆ ಬೀಳುತ್ತಿದ್ದು, ಅಂತಹ ಅಂಗಡಿಗಳಿಗೆ ಪುರಸಭೆಗೆ ಹಸ್ತಾಂತರ ಮಾಡಿಕೊಂಡು ಟೆಂಡರ್ ಮೂಲಕ ಬಾಡಿಗೆಯನ್ನು ನಿರ್ಧರಿಸಲಾಗುವುದು. ಒಂದು ವೇಳೆ ಪ್ರಸ್ತುತ ಅಂಗಡಿಕಾರರು ಒಪ್ಪದೇ ಇದ್ದ ಪಕ್ಷದಲ್ಲಿ ಅಂತಹ ಅಂಗಡಿಗಳನ್ನು ನೆಲಸಮ ಮಾಡಿ ಪುರಸಭೆಯಿಂದ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ಕೊಡಲಾಗುವುದು ಎಂದರು.
ಈ ವೇಳೆ ಪೌರ ಕಾರ್ಮಿಕರಿಗೆ ನಿವೇಶನಗಳ ಹಕ್ಕು ಪತ್ರವನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ನಬಿರಸೂಲ್ ಉಸ್ತಾದ, ಸಿದ್ದು ಅಂಗಡಿ, ಅಬ್ಬಾಸಲಿ ಖಾಕಂಡಕಿ, ಅಭಿಯಂತರ ಸಚಿನ ಮೋರಟಗಿ ಸೇರಿದಂತೆ ಅನೇಕರು ಇದ್ದರು.

