ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಹೃದಯ ಭಾಗದಲ್ಲಿರುವ ಖಬರಸ್ಥಾನ ಜಾಗ ಖಬರಸ್ಥಾನಕ್ಕಾಗಿಯೇ ಉಳಿಯಬೇಕು ಎಂದು ಆಗ್ರಹಿಸಿ ಕಳೆದ ೧೭ ದಿನಗಳಿಂದ ದರಣಿ ಸತ್ಯಾಗ್ರಹ ನಡೆದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಎರಡು ಬಣದವರನ್ನು ಕರೆಯಿಸಿ ಮಾತುಕತೆ ನಡೆಸಿದ್ದಾರೆ ಎಂದು ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎ.ಖತೀಬ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಸುಮಾರು ವರ್ಷಗಳಿಂದ ಬಡ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು. ಅದಕ್ಕಾಗಿ ಎರಡು ಬಣದಿಂದ ಮೂರು ಜನ ಸದಸ್ಯರು ತೆಗೆದುಕೊಂಡು ಒಂದು ಸಮಿತಿಯನ್ನು ರಚಿಸಿ ಅಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಳ್ಳುವಂತೆ ಉಸ್ತುವಾರಿ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. ಪಟ್ಟಣದ ದುಡಿಯುವ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಶಾಸಕರಿಗೆ ಒತ್ತಾಯಿಸಲಾಗಿದೆ. ಈ ಕುರಿತು ಶಾಸಕರು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಮಾಧ್ಯಮದವರಿಗೆ ವಿವರಣೆ ನೀಡಿದ್ದಾರೆ.
ಈ ವೇಳೆ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ ಹಾಗೂ ಕರ್ನಾಟಕ ಮುಸ್ಲಿಂ ಅಸೋಷಿಯೇಷನ್ ತಾಲೂಕು ಘಟಕದ ವತಯಿಂದ ಅಲ್ಪಸಂಖ್ಯಾತರಿಗೆ ಸರಕಾರದಿಂದ ದೊರೆಯಬೇಕಾದ ಸವಲತ್ತುಗಳಾದ ಮುಸ್ಲಿಂ ಗುತ್ತಿಗೆದಾರರಿಗೆ ಶೇ.೪ರಷ್ಟು ಮೀಸಲಾತಿ, ಎನ್‌ಜಿಓಗಳಿಗೆ ಹೋಲಿಗೆ ತರಬೇತಿ, ಗಣಕಯಂತ್ರ ತರಬೇತಿ, ಉಚಿತ ಆರೋಗ್ಯ ಶಿಬಿರಗಳಿಗೆ ಅನುದಾನ ಬಿಡುಗಡೆಗೊಳಿಸುವುದು, ತಾಂತ್ರಿಕ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಶಿಶ್ಯವೇತನ ಕೊಡುವುದು ಸೇರಿದಂತೆ ಅನೇಕು ಬೇಡಿಕೆಗಳು ಈಡೇರಿಸಬೇಕು ಎಂದು ಕರ್ನಾಟಕ ಮುಸ್ಲಿಂ ಅಸೋಷಿಯೇಷನ್ ತಾಲೂಕು ಘಟಕದ ಅಧ್ಯಕ್ಷ ಡಾ.ಅಬೂಬಕರ್ ಮುಲ್ಲಾ ಆಗ್ರಹಿಸಿದರು.

