ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಅಸಂಖ್ಯಾತ ಭಕ್ತರ ತಾಣ ಚಂದ್ರಗಿರಿ ಚಂದ್ರಮ್ಮಾ ದೇವಿ ಜಾತ್ರೆ ಇದೇ ಮಾ.೬ ರಿಂದ ಆರಂಭಗೊಳ್ಳಲಿದ್ದು, ಜಾತ್ರೆಗೆ ದೂರದಿಂದ ಬರುವ ಭಕ್ತಾದಿಗಳ ದಂಡು ಆರಂಭಗೊAಡಿದ್ದು, ದೇವಸ್ಥಾನ ಸುತ್ತಮುತ್ತ ಭಕ್ತರ ಕಲರವ ಹೆಚ್ಚಾಗಿದೆ.
ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ ಪ್ರಥಮ ಗ್ರಾಮ ಚಂದ್ರಗಿರಿ. ಇಲ್ಲಿಯ ಧರ್ಮರ ಮಠ ಹಲವು ಭಕ್ತರ ಆಶ್ರಯ ತಾಣ. ದೇವತೆಗಳ ಅವತಾರಗಳಲ್ಲಿ ಒಂದಾಗಿರುವ ಚಂದ್ರಮ್ಮಾ ದೇವಿ ಸಹಸ್ರಾರು ಭಕ್ತರ ಆರಾಧ್ಯ ದೈವ.
ವಿಜಯಪುರ, ಬಾಗಲಕೋಟೆ ಜಿಲ್ಲೆಯ ನಾನಾ ಕಡೆಯಿರುವ ವಿವಿಧ ಚಂದ್ರಮ್ಮ ದೇವಿಯ ದೇವಸ್ಥಾನಗಳಿಗೆ ಮೂಲ ಇಲ್ಲಿಯ ಚಂದ್ರಗಿರಿ. ಚಂದ್ರಗಿರಿಯ ಚಂದ್ರಮ್ಮಾ ದೇವಿ ದೇವಸ್ಥಾನ, ಮಠ ಕೃಷಾ ನದಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಆಲಮಟ್ಟಿ ನೌಕರರ ವಸಾಹತು ಬಳಿ ಕೃಷಾ ನದಿ ತೀರದಲ್ಲಿ ಸ್ಥಳಾಂತರಿಸಿ ಮಠ, ದೇವಸ್ಥಾನ ಕಟ್ಟಲಾಗಿದೆ. ಅಲ್ಲಿ ಇದೇ ೬ ರಿಂದ ಮೂರು ದಿನಗಳ ಕಾಲ ಜಾತ್ರೆ ಸಂಭ್ರಮದಿಂದ ಜರುಗಲಿದೆ. ನಿತ್ಯ ಬೆಳಿಗ್ಗೆ ದೀಡ ನಮಸ್ಕಾರ ಹಾಕುವವರ ಸಂಖ್ಯೆಯೂ ಅಪಾರ. ಮಾ.೬ ರಂದು ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಜಾತ್ರೆಗೆ ಬಂದ ಭಕ್ತಾದಿಗಳಿಗೆ ವಿವಿಧ ಅಡುಗೆ ಪಾತ್ರೆಗಳನ್ನು ನೀಡಲಾಗುತ್ತಿದ್ದು, ವಸತಿ ಸೇರಿದಂತೆ ವಿವಿಧ ವ್ಯವಸ್ಥೆ ಮಾಡಲಾಗಿದೆ, ನದಿ ತೀರವನ್ನು ಸ್ವಚ್ಛಗೊಳಿಸಲಾಗಿದ್ದು, ಮೂರು ದಿನಗಳಲ್ಲಿ ಐವತ್ತು ಸಹಸ್ರಕ್ಕೂ ಅಧಿಕ ಜನ ಭೇಟಿ ನೀಡಲಿದ್ದಾರೆ ಎಂದು ಚಂದ್ರಗಿರಿ ಧರ್ಮರ ಮಠದ ಧರ್ಮಾಧಿಕಾರಿ ಚಂದ್ರಕಾಂತ ದೇಸಾಯಿ ತಿಳಿಸಿದರು.

