ವಿಶೇಷ ತಂಡದ ಕಾರ್ಯಾಚರಣೆ ಚುರುಕುಗೊಳಿಸಿ ನಕಲಿ ವೈದ್ಯರ ವಿರುದ್ಧವೂ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯು ಗಡಿ ಜಿಲ್ಲೆಯಾಗಿರುವುದರಿಂದ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಡೆಯದಂತೆ ಕಣ್ಗಾವಲು ಇರಿಸಲು ಈ ಕಾಯ್ದೆಯಡಿ ರಚಿತವಾದ ತಂಡ ನಿಯಮಿತವಾಗಿ ತಪಾಸಣೆ ಮತ್ತು ದಿಢೀರ ಕಾರ್ಯಾಚರಣೆಯನ್ನು ಕೈಗೊಂಡು ಇಂತಹ ಪ್ರಕರಣ ಜಿಲ್ಲೆಯಲ್ಲಿ ನಡೆಯದಂತೆ ನೋಡಿಕೊಳ್ಳಬೇಕು. ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಕೇಂದ್ರಗಳ ಪರಿಶೀಲನೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕೆಪಿಎಂಇ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲ ಗರ್ಭಿಣಿಯರು ಕಂಡು ಬಂದರೆ ಅಂಥವರ ಮಾಹಿತಿಯನ್ನು ಸಹಾಯವಾಣಿ ೧೦೯೮ ಗೆ ಕರೆ ಮಾಡಲು ತಿಳಿಸಿ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಪ್ರವೃತವಾಗಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
ವಿಜಯಪುರ ತಾಲೂಕಿನಲ್ಲಿ ೭೪೨ ಖಾಸಗಿ ಆರೋಗ್ಯ ಸಂಸ್ಥೆಗಳು ಜಿಲ್ಲಾ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಆಗಿರುತ್ತದೆ. ಬ.ಬಾಗೇವಾಡಿ ತಾಲೂಕಿನಲ್ಲಿ ೧೦೯, ಮುದ್ದೇಬಿಹಾಳ ತಾಲೂಕಿನಲ್ಲಿ ೧೧೫, ಇಂಡಿ ತಾಲೂಕಿನಲ್ಲಿ ೧೫೨. ಸಿಂದಗಿ ತಾಲೂಕಿನಲ್ಲಿ ೧೫೭, ಒಟ್ಟು ೧೨೭೫ ಖಾಸಗಿ ಆಸ್ಪತ್ರೆಗಳು ನೋಂದಣಿ ಆಗಿರುತ್ತವೆ. ಜಿಲ್ಲೆಯಲ್ಲಿ ನೋಂದಣಿಗೊಂಡ ಪ್ರತಿಯೊಂದು ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ನಿರ್ದಿಷ್ಟಪಡಿಸಿದ ವೈದ್ಯಕೀಯ ಚಿಕಿತ್ಸಾ ಪದ್ಧತಿ, ಸಂಸ್ಥೆಯ ಹೆಸರು, ಮಾಲಿಕರು, ನೋಂದಣಿ ಸಂಖ್ಯೆಗಳ ಬಣ್ಣದ ಫಲಕವನ್ನು ಪ್ರದರ್ಶಿಸುವಂತೆ ಸಭೆಯಲ್ಲಿ ಹಾಜರಿದ್ದ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಇನ್ನು ಮುಂದೆ ಜಿಲ್ಲೆಯಲ್ಲಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ನಿರ್ದಿಷ್ಟಪಡಿಸಿದ ಬಣ್ಣದ ಫಲಕ ಅಳವಡಿಸಿದರೆ ಮಾತ್ರ ಕೆ.ಪಿ.ಎಂ.ಇ ಅಡಿ ಅನುಮೋದನೆ ನೀಡುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ನಕಲಿ ವೈದ್ಯರ ವಿರುದ್ಧವೂ ಕ್ರಮಕ್ಕೆ ಸೂಚನೆ
ನಕಲಿ ವೈದ್ಯರ ವಿರುದ್ಧ ಕ್ರಮ ಜರುಗಿಸಲು ವಿಶೇಷ ಕಾರ್ಯಪಡೆ ತಂಡವು ಪ್ರತಿ ವಾರ ಒಂದು ತಾಲೂಕಿಗೆ ಅನಿರೀಕ್ಷಿತ ಭೇಟಿ ನೀಡಿ ನಕಲಿ ವೈದ್ಯರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಿ ವರದಿ ಸಲ್ಲಿಸಲು ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಾಗಿ ಸೂಚಿಸಿದರು.
ಜಿಲ್ಲೆಯಲ್ಲಿ ನಕಲಿ ವೈದ್ಯರ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ನೇರವಾಗಿ ಸಂಬಂಧಪಟ್ಟ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ವಿವರವಾದ ಮಾಹಿತಿ ನೀಡಲು ಮನವಿ ಮಾಡಿದರು.

