ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಹೇಳಿಕೆ
ಬೆಂಗಳೂರು: ರಾಜ್ಯದಾದ್ಯಂತ ಶೇ.80.85ರಷ್ಟು ಎಣಿಕೆ ಫಾರಂಗಳನ್ನು ಈಗಾಗಲೇ ಮತದಾರರಿಗೆ ವಿತರಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಹೇಳಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರ ಪಟ್ಟಿಯ ಎಸ್‌ಐಆರ್ ಅಡಿಯಲ್ಲಿ ಮನೆ-ಮನೆಗೆ ತೆರಳಿ ಎಣಿಕೆ ಕಾರ್ಯ ಜೂನ್ 30ರಂದು ಪ್ರಾರಂಭವಾಗಿದ್ದು ಜುಲೈ 29ರವರೆಗೆ ಮುಂದುವರಿಯುತ್ತದೆ ಎಂದರು.
ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನ್ಬುಕುಮಾರ್, ನಾವು ಕರ್ನಾಟಕದ ಪ್ರತಿಯೊಂದು ಮನೆಗೆ, ಪ್ರತಿಯೊಬ್ಬ ಮತದಾರರಿಗೆ ಎಣಿಕೆ ಫಾರಂಗಳನ್ನು ವಿತರಿಸುತ್ತೇವೆ. ಆ ಪ್ರಕ್ರಿಯೆಯಲ್ಲಿ ಶೇ.80.85ರಷ್ಟು ಎಣಿಕೆ ಫಾರಂಗಳನ್ನು ಈಗಾಗಲೇ ಕರ್ನಾಟಕದ ಮತದಾರರಿಗೆ ವಿತರಿಸಲಾಗಿದೆ ಎಂದರು. 224 ವಿಧಾನಸಭಾ ಕ್ಷೇತ್ರಗಳ ಪೈಕಿ 112 ಕ್ಷೇತ್ರಗಳಲ್ಲಿ ಶೇಕಡ 90ಕ್ಕೂ ಹೆಚ್ಚು ಫಾರ್ಮ್‌ಗಳನ್ನು ವಿತರಿಸಲಾಗಿದೆ. ಆದರೆ 169 ಕ್ಷೇತ್ರಗಳಲ್ಲಿ ಶೇಕಡ 80ಕ್ಕೂ ಹೆಚ್ಚು ಫಾರ್ಮ್‌ಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದರು.
ಗಣತಿ ಫಾರಂಗಳನ್ನು ಮತದಾರರಿಗೆ ಸಕಾಲದಲ್ಲಿ ತಲುಪುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.
ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಿ ಫಾರ್ಮ್ ವಿತರಿಸಬೇಕು
ಮನೆ-ಮನೆಗೆ ಭೇಟಿ ನೀಡುವ ಬದಲು ಸಮುದಾಯ ಭವನಗಳಲ್ಲಿ ಫಾರ್ಮ್‌ಗಳನ್ನು ವಿತರಿಸಲಾಗುತ್ತಿದೆ ಎಂಬ ವರದಿಗಳಾಗಿದ್ದು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪಗಳ ನಡುವೆ, ಜುಲೈ 1 ರಂದು ಸ್ವೀಕರಿಸಿದ ಎಲ್ಲಾ ದೂರುಗಳನ್ನು ಪರಿಶೀಲಿಸಲಾಗಿದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ವರದಿಯನ್ನು ಸಲ್ಲಿಸಲಾಗಿದೆ ಎಂದ ಅವರು, ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡುವ ಮೂಲಕ ಫಾರ್ಮ್‌ಗಳನ್ನು ವಿತರಿಸಬೇಕು. ಮನೆ-ಮನೆ ವಿತರಣೆಯನ್ನು ಮಾತ್ರ ಕೈಗೊಳ್ಳಲು ಅವರಿಗೆ ನಿರ್ದೇಶಿಸಲಾಗಿದೆ ಎಂದರು.

