ಲೇಖನ
– ಮಮತಾ ಸತೀಶ್ ಹೆಗಡೆ
ಶಿರಸಿ
ಉದಯರಶ್ಮಿ ದಿನಪತ್ರಿಕೆ
ಮಾನವ ತನ್ನ ಜೀವನದಲ್ಲಿ ಸುಖವೆಂಬ ಮಾಯಾ ಮೋಹ ಜಾಲದಲ್ಲಿ ಸಿಲುಕಿ ಆಸೆಯ ಕುದುರೆ ಏರಿ ನಿರಂತರ ತನ್ನ ಜೀವಮಾನವೆಲ್ಲ ಹಣ ಸಂಗ್ರಹದ ಕಾಯಕದಲಿ ಹಗಲು ರಾತ್ರಿ ಹೆಣಗಾಡುತ್ತಿರುತ್ತಾನೆ. ಸುಖವೆಂಬ ಸಾಧನ ಕನ್ನಡಿಯೊಳಗನ ಗಂಟು ಅನ್ನುವುದನ್ನು ಮರೆತು ಮೂಢನಾಗಿ ದಿನಗಳೆಯುತ್ತಾನೆ. ಈ ಸಂಸಾರಸಾಗರದಲಿ ಸಂತೃಪ್ತಿ ಜೀವನವೇನೆಂಬುದನ್ನ ಅರಿಯದೆ ಸಿಗದ ಮರಿಚಿಕೆಯ ಹಿಂದೆ ನಾಗಾಲೋಟ ನಡೆಸುತ್ತಾನೆ. ಸಂತೃಪ್ತಿ ಹುಡುಕುವ ಭರದಲ್ಲಿ ತನ್ನ ಜೀವನದ ಆಯಸ್ಸನ್ನೆಲ್ಲ ಕಳೆದು ಮುಪ್ಪಾವರಿಸುವ ಹೊತ್ತಿಗೆ ತಾನು ಕಳೆದುಕೊಂಡ ಸಂತೃಪ್ತಿಯ ನೆನೆ ನೆನೆದು ದು:ಖಪಡುವಂತಾಗುತ್ತಿರುತ್ತಾನೆ. ಹೀಗೊಂದು ಘಟನೆ ನನ್ನ ಆಪ್ತ ಸ್ನೇಹಿತೆ ತಂದೆ ಆಗರ್ಭ ಶ್ರೀಮಂತರು ಆದರೂ ಇನ್ನು ಬೇಕು ಮತ್ತೂ ಬೇಕೆಂಬ ದುರಾಸೆ ಬೆನ್ನು ಹತ್ತಿ ತಾವು ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬಂದ ಫೆಕ್ಟರಿಯ ಆದಾಯವನ್ನೆಲ್ಲ ಒಂದೇ ಸಲ ದುಪ್ಪಟ್ಟಿನ ಆಸೆಗಾಗಿ ಶೇರ್ ವ್ಯವಹಾರದಲ್ಲಿ ತೊಡಗಿಸ ತೊಡಗಿದರು. ಮನುಜನ ಗ್ರಹಗತಿಗಳು ದೇವನಿರ್ಮಿತ ಒಳ್ಳೆಯಕಾಲಕ್ಕು ಕೆಡುಗಾಲಕ್ಕು ಅವನಲ್ಲವೆ ಸೂತ್ರಧಾರ ಹಾಗಿರುವಾಗ. ಅವರ ಆಸೆ ಕುದುರೆ ಈಗ ನಾಗಲೋಟಕ್ಕೆ ಅಣಿಯಾಗಹತ್ತಿತು. ಮನೆಯ ಮಕ್ಕಳು ಮಡದಿ ಯಾರ ಮಾತನ್ನು ಲೆಕ್ಕಿಸದೆ ತನ್ನ ಮನ ಬಂದಂತೆ ತೊಡಗಿಸ ತೊಡಗಿದರು.
ಮೊದ ಮೊದಲು ಲಾಭದಲಿ ಓಡುತ್ತಿದ್ದ ಶೇರ್ ಕುದುರೆ ದಿನಗಳೆದಂತೆ ಲಾಭದಿಂದ ತಿರುಗಿ ನಷ್ಟದ ದಾರಿಗಿಳಿಯ ಹತ್ತಿತು. ಹೆಚ್ಚಿನ ಹಣದಾಸೆಯಿಂದ ಹಣದಿಂದ ಸುಖವ ಪಡೆವೆನೆಂಬ ಆಸೆಯ ಆಶಯದಿಂದ ಈಗ ಹೈರಾಣಾಗ ಹತ್ತಿದರು ರಾಯರು. ದಿನೇ ದಿನೆ ಚಿಂತೆ ಅವರನ್ನ ಆವರಿಸಿ ಒಳಗೊಳಗೆ ಕೊಲ್ಲ ಹತ್ತಿತು. ಮನೆಯವರನ್ನೆಲ್ಲ ಮಾತು ಮಾತಿಗೆ ಸಿಡಿಮಿಡಿ ಮಾಡಹತ್ತಿದರು. ತನ್ನ ನಷ್ಟದ ವ್ಯವಹಾರದ ಕುರಿತಾಗಿ ಹೇಳಿಕೊಳ್ಳಲಾರದೆ ಒಳಗೊಳಗೆ ಕುಗ್ಗಿಹೋದರು. ಸಂತೃಪ್ತಿ ತಂದುಕೊಡುವುದೆಂದು ಬೆನ್ನು ಹತ್ತಿದ್ದ ಕಾಂಚಾಣ ಕುದುರೆ ಅವರನ್ನ ಕೈಚೆಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು. ಅವರ ಹಣದಾಹ ಮನೆಮಂದಿಯ ಸಂತೃಪ್ತಿಯನ್ನ ತಿಂದು ತೇಗಿತ್ತು. ಈಗ ಅವರಿಗೆ ಅರಿವಾಗತೊಡಗಿತು. ಮೊದಲಿದ್ದ ಐಶ್ವರ್ಯದಲ್ಲಿ ನೆಮ್ಮದಿ ಸಂತೃಪ್ತಿ ಎರಡು ಮನೆಯನಾವರಿಸಿತ್ತು. ಇಂದು ಎಲ್ಲವು ಕಳೆದು ಫೆಕ್ಟರಿ ಮಾರುವ ಹಂತಕ್ಕೆ ಬಂದು ನಿಂತುಬಿಟ್ಟಿತು. ಅಂದಿನ ತನ್ನ ವಹಿವಾಟುಗಳೆ ಸರಿದಾರಿಯಲ್ಲಿದ್ದವು ಅತಿ ಆಸೆಗಾಗಿ ಸಂತೃಪ್ತಿಯನ್ನೆಲ್ಲ ಕಳೆದುಕೊಂಡೆ ಎಂದು ಪರಿತಪಿಸತೊಡಗಿದರು . ಹೆಂಡತಿ ಮಕ್ಕಳಲ್ಲಿ ಕ್ಷಮೆ ಯಾಚಿಸತೊಡಗಿದರು.
ತಡವಾಗಿ ಆದರೂ ತಪ್ಪಿನ ಅರಿವಾಗಿದ್ದಕ್ಕೆ ಮತ್ತೆ ಸಂತೃಪ್ತಿಯ ನಿಟ್ಟುಸಿರುಬಿಟ್ಟರು. ಮತ್ತೆ ಛಲದಿಂದ ಫೇಕ್ಟರಿಯನ್ನ ಕಟ್ಟಿ ನಡೆಸತೊಡಗಿದರು. ಮನೆಯಲ್ಲಿ ಸಂತೃಪ್ತಿ ನೆಮ್ಮದಿ ಆಗಮಿಸತೊಡಗಿತು. ಹಾಗಾಗಿ ಸಂತೃಪ್ತಿ ಯೇ ಶ್ರೇಷ್ಟ ಸಂಪತ್ತು ಅನ್ನುವುದರಲ್ಲಿ ಎರಡು ಮಾತಿಲ್ಲ. ನಾವು ನಮ್ಮಿಷ್ಟದಂತೆ ಅತಿಯಾಸೆ ಮಾಡದೆ ಇದ್ದುದರಲ್ಲೆ ನೆಮ್ಮದಿಯನ್ನ ಪಡೆದುಕೊಳ್ಳುವುದನ್ನ ಕಲಿತು ನಡೆಸುವ ಜೀವನವೇ ಸಂತೃಪ್ತ ಜೀವನ ಶ್ರೇಷ್ಟ ಜೀವನ ಸಂತೃಪ್ತಿಯಿಲ್ಲದ ಐಶ್ವರ್ಯ ನರಕಕ್ಕೆ ಸಮಾನ. ಓಡಹುಟ್ಟಿದವರ ಸಹಕಾರ ಸಹನೆ ಹಿರಿಕಿರಿಯರ ಸ್ನೇಹಪರತೆಯ ಒಡನಾಟ ಮಮಕಾರ ಬಂಧನವೆ ಶ್ರೇಷ್ಟ ಸಂಪತ್ತು. ಕಷ್ಟನಷ್ಟಗಳಲಿ ಜೊತೆಯಾಗಿ ನಡೆವವರೆ ನಮ್ಮ ಹಿತೈಷಿಗಳು.ಇಲ್ಲದ ದಾಹಗಳಿಗೆ ಮಾರುಹೋಗದೆ ಸಂಗ ಜೀವನ ನಡೆಸಿ ಹಿಡಿತದ ಬದುಕೆ ಶ್ರೇಷ್ಟ ಸಂತೃಪ್ತ ಬದುಕು. ಸುಖವ ಹಂಚಿ ಬಾಳಿದರೆ ಜೀವನ ನಂದನವನ. ಅರಿತು ನಡೆವ ಬಾಳೆ ಸಂತೃಪ್ತ ಜೀವನ.
