ಲೇಖನ
ಸುಮಗೌಡ
(’ಕಥಾ ಅರಮನೆ’ ಬರಹಗಾರರು)
ಉದಯರಶ್ಮಿ ದಿನಪತ್ರಿಕೆ
ಅತಿ ಮಾನುಷ ಶಕ್ತಿಗಳ ಬಗ್ಗೆ ಸಂಶೋಧನೆ ಮಾಡಿದಾಗ ಬಹಳಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿರುವ ಹಲವಾರು ಉದಾಹರಣೆಗಳು ಇವೆ.
ಸಾಮಾನ್ಯವಾಗಿ ನಾವೆಲ್ಲ ಕೇಳಿ ನೋಡುತ್ತಾ ಬಂದಂತೆ ನಾವು ಚಿಕ್ಕವರಿರುವಾಗ ಊಟ ಮಾಡಿಸುವಾಗ ಅಥವಾ ಹಠಮಾಡಿದಾಗ ನಮ್ಮನ್ನು ಹೆದರಿಸಲು ಅಮ್ಮ ಗುಮ್ಮನನ್ನು ಕರಿತೀನಿ ಊಟ ಮಾಡು ಅನ್ನುತ್ತಿದ್ದದ್ದು ಮಾತು ಕೇಳದೆ ಹಠ ಮಾಡಿದರೆ ಗೊಗ್ಗಯ್ಯ ಬಂದು ಹಿಡ್ಕೊಂಡು ಹೋಗ್ತಾನೆ ಎಂದು ಹೆದರಿಸಿ ಮಾತು ಕೇಳುವಂತೆ ಮಾಡುತ್ತಿದ್ದು ಅದೆಷ್ಟು ಭಯ ಹುಟ್ಟಿಸುತ್ತಿತ್ತು ಅಂದರೆ ಮನೆಯೊಳಗೆ ಸ್ವಲ್ಪ ಕತ್ತಲೆ ಇರುವ ಜಾಗಕ್ಕೆ ಹೋಗಲು ಸಹ ಭಯ ಆಗುತ್ತಿತ್ತು. ಇದೆಲ್ಲಾ ಅಮ್ಮ ಪ್ರೀತಿಯಿಂದ ಹೇಳುತ್ತಿದ್ದಳು ಅನ್ನೋದು ಗೊತ್ತೇ ಆಗ್ತಿರಲಿಲ್ಲ .
ಅತಿಮಾನುಷ ಶಕ್ತಿಗಳಲ್ಲಿ ಎಷ್ಟು ಸತ್ಯ ಹಾಗೂ ಪವಾಡಗಳು ತುಂಬಿರುತ್ತವೆ ಎಂಬುದಕ್ಕೆ ಒಂದು ಸತ್ಯ ಘಟನೆಯ ಸಾಕ್ಷಿ ಇದೆ. ನನ್ನ ಸೊಸೆಯ ಊರಿನಲ್ಲಿ ಅವರ ಕಾಫಿ ಎಸ್ಟೇಟ್ಗಳಲ್ಲಿ ಕಾಫಿ ಬೆಳೆ ಹಾಗೂ ಎಲ್ಲಾ ರೀತಿಯ ರಕ್ಷಣೆಗಳಿಗಾಗಿ ಚೌಡಮ್ಮನನ್ನು ಪೂಜಿಸುವ ಪದ್ಧತಿ ರೂಢಿಯಲ್ಲಿದೆ. ಅದಕ್ಕಾಗಿ ಒಂದು ಚೌಡಿ ಗುಡಿಯನ್ನು ಸಹ ಕಟ್ಟಿರುತ್ತಾರೆ, ಅದಕ್ಕೆ ವರ್ಷಕ್ಕೊಮ್ಮೆ ಪೂಜೆ ಮಾಡಿ ಬಲಿ ಕೊಡುವ ಪದ್ಧತಿಯು ಸಹ ಚಾಲ್ತಿಯಲ್ಲಿದೆ. ಈ ಚೌಡಿಯ ಕೃಪೆಯಿಂದ ಅವರೆಲ್ಲರೂ ಒಂಟಿ ಮನೆಗಳಲ್ಲಿ ಇದ್ದರೂ ಯಾವುದೇ ರೀತಿಯ ಆತಂಕವಿಲ್ಲದೆ ನಿರ್ಭಯವಾಗಿರುತ್ತಾರೆ.
ಆ ಚೌಡಿ ಗುಡಿಯ ಹಿಂಭಾಗ ಗುಡಿಗೆ ಅಂಟಿಕೊಂಡಂತಿರುವ ದೊಡ್ಡದೊಂದು ಆಲದ ಮರ ಇದೆ. ಒಮ್ಮೆ ಪಕ್ಕದ ಎಸ್ಟೇಟ್ ನ ಮಾಲೀಕರು ಈ ಮರ ದೊಡ್ಡದಾಗಿದೆ ಗಾಳಿ ಮಳೆಗೆ ಬಿದ್ರೆ ಗುಡಿಗೆ ತೊಂದರೆ ಆಗಬಹುದು ಎಂದು ಮರ ಕಡಿಸಲು ಆಳುಗಳಿಗೆ ಹೇಳಿದಾಗ ಅವರೆಲ್ಲ ಹೆದರಿ ಯಾರೂ ಮುಂದೆ ಬರಲಿಲ್ಲವಂತೆ, ಕಡೆಗೆ ಹೇಗೋ ಹೆದರಿಸಿ ಬೆದರಿಸಿ ಒಬ್ಬನನ್ನು ಮರ ಹತ್ತಿಸಿದರಂತೆ, ಅವನು ಇನ್ನೇನು ಮರ ಕಡಿಯಲು ಕೊಡಲಿ ಎತ್ತಿದ ಕೂಡಲೇ ಕೊಡಲಿ ಎರಡು ಭಾಗವಾಗಿ ಕೆಳಗೆ ಬಿತ್ತಂತೆ. ಅಂದಿನಿಂದ ಹೆದರಿ ಮತ್ತೆ ಯಾರು ಆ ಸಾಹಸ ಮಾಡಲಿಲ್ಲವಂತೆ. ಜೊತೆಗೆ ಅಲ್ಲಿ ಅವರು ಗದ್ದೆಗಳಲ್ಲಿ ಬೆಳೆದ ಭತ್ತದ ರಾಶಿಗಳನ್ನು ಕಣದಲ್ಲಿ ಹರಡಿ ರಾತ್ರಿ ಇಡೀ ಅಲ್ಲೇ ಬಿಟ್ಟಿದ್ದಾಗ ಬಿಳಿ ಸೀರೆಯುಟ್ಟು ಉದ್ದ ಕೂದಲು ಇಳಿ ಬಿಟ್ಟು ಗೆಜ್ಜೆ ಸದ್ದು ಮಾಡುತ್ತಾ ಚೌಡಿಯು ಕಾವಲು ಕಾಯುತ್ತದಂತೆ. ಇದನ್ನು ಪ್ರತ್ಯಕ್ಷವಾಗಿಯು ಸಹ ಕಂಡವರಿದ್ದಾರೆ.
ಹೀಗೆ ಕಾಣದ ಅಗೋಚರ ಶಕ್ತಿಯೊಂದು ಇದ್ದು ಅಲ್ಲಿಯ ಜನರನ್ನು ಹಾಗೂ ಬೆಳೆಗಳನ್ನು ಕಾಯುತ್ತಿರುವುದು ಒಂದು ಪವಾಡವೇ ಸರಿ.
