ಲೇಖನ:
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ,
ಪಟ್ರಮೆ ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಮನುಷ್ಯನ ದೇಹದಲ್ಲಿ ಹೃದಯವನ್ನು ಬಿಟ್ಟರೆ ಮೆದುಳು ಅತ್ಯಂತ ಭಾಗ. ಮೆದುಳನ್ನು ದೇಹದ ಅತ್ಯಂತ ಶಕ್ತಿಶಾಲಿ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ ಬಹುತೇಕ ಜನರು ತಮ್ಮ ಮೆದುಳನ್ನು ದೇಹದ ಪ್ರಮುಖ ಅಂಗವೆಂದು ಪರಿಗಣಿಸಿಲ್ಲ ಮತ್ತು ಹೆಚ್ಚಿನವರು ಯಾವತ್ತೂ ತಮ್ಮ ಮೆದುಳಿನ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದೇ ಇಲ್ಲ ಎನ್ನಬಹುದು. ಮೆದುಳು ಸ್ವಲ್ಪ ಆರೋಗ್ಯ ತಪ್ಪಿದರೆ ಮನುಷ್ಯ ಜೀವಂತ ಶವದಂತೆಯೇ ಸರಿ. ಹಾಗಾಗಿ ಮೆದುಳಿನ ಆರೋಗ್ಯ ಕಾಪಾಡಲು ಹೆಚ್ಚಿನ ಗಮನವನ್ನು ಹರಿಸಬೇಕು. ಪ್ರಾತಃಕಾಲದಲ್ಲೇ ಏಳುವುದು, ಸೂರ್ಯ ಸ್ನಾನ ಮಾಡುವುದು, ನಿತ್ಯವೂ ನಿಯಮಿತ ಧ್ಯಾನ ಮಾಡುವುದು, ಆರೋಗ್ಯ ಹಾಗೂ ತೂಕ ನಿಯಂತ್ರಣ ಮತ್ತು ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಮೆದುಳಿನ ಆರೋಗ್ಯ ಕಾಪಾಡಬಹುದು. ನಮ್ಮ ಮೆದುಳಿನ ಆರೋಗ್ಯದ ಮೇಲೆ ನಮಗೆ ಅರಿವಿಲ್ಲದಂತೆ ನಮ್ಮ ಅಭ್ಯಾಸಗಳೇ ಪರಿಣಾಮ ಬೀರುತ್ತವೆ. ಮೆದುಳಿನ ಆರೋಗ್ಯವನ್ನು ಕಾಪಾಡುವ ಅಂಶಗಳೆಂದರೆ,
ಸಾಕಷ್ಟು ನಿದ್ರೆ ಮಾಡುವುದು ಪ್ರತಿಯೊಬ್ಬ ಮನುಷ್ಯನಿಗೂ ಆತನ ವಯಸ್ಸಿಗೆ ಅನುಗುಣವಾಗಿ ಇಂತಿಷ್ಟು ಗಂಟೆಗಳ ನಿದ್ರೆ ಬೇಕು ಎಂದು ಆರೋಗ್ಯಶಾಸ್ತ್ರ ಹೇಳುತ್ತದೆ. ಹಾಗಾಗಿ ನಿಯಮಿತವಾಗಿ ಸಾಕಷ್ಟು ನಿದ್ರೆ ಮಾಡದಿದ್ದರೆ ಮೆದುಳಿನ ಕ್ಷಮತೆಯು ಕಡಿಮೆಯಾಗಿ ಇದು ಜ್ಞಾಪಕಶಕ್ತಿ, ಏಕಾಗ್ರತೆ ಮತ್ತು ಶೀಘ್ರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಆತಂಕ ಮತ್ತು ಖಿನ್ನತೆ ಮುಂತಾದ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಸಕ್ಕರೆ ಬಳಕೆ ಕಡಿಮೆ ಮಾಡುವುದು
ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಸೇವಿಸಿದರೆ ಮನುಷ್ಯನ ಅರ್ಥೈಸಿಕೊಳ್ಳುವ ಕ್ಷಮತೆಯು ಕಡಿಮೆ ಆಗಿ ಸ್ಮರಣ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ನ್ಯೂರೋ ಡಿಜೆನೆರಟಿವ್ ಕಾಯಿಲೆ ಕಾಣಿಸಿಕೊಳ್ಳಬಹುದು. ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳ ನಿರಂತರ ಸೇವನೆ ಮೆದುಳಿನಲ್ಲಿ ಉರಿಯೂತ ಉಂಟುಮಾಡಿ ಮೆದುಳಿಗೆ ಆಳವಾದ ಹಾನಿ ಮಾಡುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಮರೆಗುಳಿತನಕ್ಕೂ ಕಾರಣವಾಗುತ್ತದೆ. ಆದ್ದರಿಂದ ಆದಷ್ಟು ಆಹಾರದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡಿ ಬೆಲ್ಲ ಮತ್ತು ಜೇನುತುಪ್ಪ ಸೇವನ ಉತ್ತಮ.
ಉತ್ತಮ ಜೀವನಶೈಲಿ
ಜೀವನದಲ್ಲಿ ಮನುಷ್ಯನು ಹೆಚ್ಚು ಕ್ರಿಯಾಶೀಲನಾಗಿದ್ದರೆ ಆತನ ಮೆದುಳಿನ ಕ್ಷಮತೆಯೂ ಉನ್ನತ ಮಟ್ಟದಲ್ಲಿ ಇರುತ್ತದೆ. ಜಡತ್ವ ಅಥವಾ ದೈಹಿಕ ಚಟುವಟಿಕೆಯ ಕೊರತೆಯು ದುರ್ಬಲ ಮೆದುಳಿನ ಆರೋಗ್ಯವನ್ನೂ ಹಾಳು ಮಾಡುತ್ತದೆ. ಕ್ರಿಯಾಶೀಲ ಜೀವನಶೈಲಿ ಇದ್ದಾಗ ಮೆದುಳಿಗೆ ಸಾಕಷ್ಟು ಪ್ರಮಾಣದ ರಕ್ತದ ಹರಿವು ಆಗಿ ತಿಳಿಯುವ ಸಾಮರ್ಥ್ಯ, ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಮೆದುಳಿನ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ.
ಒಮೆಗಾ-೩ ಆಹಾರ ಸೇವನೆ
ಒಮೆಗಾ-೩ ಕೊಬ್ಬಿನ ಆಮ್ಲಗಳು ಮನುಷ್ಯನ ಮೆದುಳಿಗೆ ಹೆಚ್ಚು ಪ್ರಯೋಜನಕಾರಿ. ಈ ಅಂಶವು ಹುಣಸೇ ಹಣ್ಣಿನಲ್ಲಿ ಯಥೇಚ್ಛವಾಗಿ ಇದ್ದು, ಈ ಆಮ್ಲವು ಮನುಷ್ಯನ ಮೆದುಳಿಗೆ ಪೋಷಕಾಂಶದ ರೀತಿ ಕಾರ್ಯನಿರ್ವಹಿಸುತ್ತದೆ. ಈ ಪೋಷಕಾಂಶಗಳು ಮೆದುಳಿನ ಮತ್ತು ಮೆದುಳಿನ ಜೀವಕೋಶಗಳ ಬೆಳವಣಿತನ್ನು ಉತ್ತೇಜಿಸಿ, ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒಮೆಗಾ-೩ ಅಂಶವಿರುವ ಪದಾರ್ಥ ಸೇವನೆಯಿಂದ ಮೆದುಳಿನ ಸ್ವಸ್ಥತೆ ಹೆಚ್ಚುತ್ತದೆ.
ಹಿತವಾದ ಸಂಗೀತ ಕೇಳಿರಿ
ಭಕ್ತಿ ಗೀತೆ, ಇಂಪಾದ ಸಂಗೀತ ಕೇಳುತ್ತಾ ನಮ್ಮ ದಿನವನ್ನು ಆರಂಭಿಸಬೇಕು. ಸಂಗೀತವನ್ನು ಕೇಳುತ್ತಾ ಬೆಳಗ್ಗೆ ಏಳುವುದರಿಂದ ದಿನಪೂರ್ತಿ ಕಡಿಮೆ ಒತ್ತಡದ ಜೀವನ ನಡೆಸಬಹುದು. ಸಂಗೀತಕ್ಕೆ ಒತ್ತಡವನ್ನು ನಿಯಂತ್ರಿಸುವ ಗುಣವಿದ್ದು, ಸಂಗೀತವು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಯಾರು ಹೆಚ್ಚು ಸಂಗೀತ ಕೇಳುತ್ತಾರೋ ಅವರು ಇತರರಿಗಿಂತ ವೇಗವಾಗಿ ಮತ್ತು ಉತ್ತಮವಾಗಿ ವಿಚಾರಗಳನ್ನು ಕಲಿತು ದೀರ್ಘ ಅವಧಿಯವರೆಗೆ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.
ಸೂರ್ಯ ಸ್ನಾನ ಮಾಡಿ
ಪ್ರತಿದಿನ ಬೆಳಗ್ಗೆ ಅಥವಾ ಸಂಜೆಯ ಸೂರ್ಯನ ಎಳೆ ಬಿಸಿಲಿನಲ್ಲಿ ಮೈಯೊಡ್ಡಿದರೆ ಮನಸ್ಸು ಉಲ್ಲಸಿತವಾಗಿ ಹೆಚ್ಚು ಆರೋಗ್ಯವಾಗಿ ಇರುತ್ತೇವೆ. ಎಳೆಬಿಸಿಲಿನಲ್ಲಿ ಸೂರ್ಯಸ್ನಾನ ಮಾಡಿದಾಗ ಮೆದುಳಿನಲ್ಲಿ ಡೋಪಮೈನ್ ಹಾರ್ಮೋನ್ ಮಟ್ಟವು ನಿಯಂತ್ರಿತವಾಗಿ ಉಳಿಯುತ್ತದೆ. ಈ ಹಾರ್ಮೋನ್ ಮನುಷ್ಯನ ಮನಸ್ಸನ್ನು ಶಾಂತವಾಗಿರಿಸಿ, ಮನಸ್ಥಿತಿಯನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ೫ ರಿಂದ ೧೦ ನಿಮಿಷ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವ ಅಭ್ಯಾಸ ಉತ್ತಮ.
ಹೇರಳ ನೀರನ್ನು ಕುಡಿಯಿರಿ
ದೀರ್ಘಕಾಲದ ನಿರ್ಜಲೀಕರಣವು ಮೆದುಳಿನ ಕಾರ್ಯ ಮತ್ತು ಅರಿವಿನ ಸಾಮರ್ಥ್ಯಗಳನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಅಂಶವನ್ನು ನೀಡುತ್ತಾ ಇರಬೇಕು. ಇದರಿಂದ ಮೆದುಳು ಆರೋಗ್ಯವಾಗಿ ಇರುತ್ತದೆ.
ಒತ್ತಡ ರಹಿತ ಜೀವನ
ಮನುಷ್ಯನ ಮೆದುಳು ದೀರ್ಘಕಾಲದಿಂದ ಒತ್ತಡ ಹೆಚಿಸುವ ಹಾರ್ಮೋನುಗಳಿಗೆ ಒಳಗಾಗುತ್ತಾ ಇದ್ದರೆ ಮೆದುಳಿನ ಹಿಪೊಕ್ಯಾಂಪಸ್ ಹಾನಿಗೆ ಒಳಗಾಗಬಹುದು. ಹಿಪೋಕ್ಯಾಂಪಸ್ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಮತ್ತು ವಿಚಾರಗಳ ಕಲಿಕೆಗೆ ಕಾರಣವಾಗುವ ಮೆದುಳಿನ ಪ್ರದೇಶವಾಗಿದ್ದು, ದೀರ್ಘಕಾಲಿಕ ಒತ್ತಡವು ಆತಂಕ, ಖಿನ್ನತೆ ಮತ್ತು ಅರಿವಿನ ಕುಸಿತಕ್ಕೆ ಕಾರಣ ಆಗಬಹುದು.
ದುಶ್ಚಟ ರಹಿತ ಜೀವನ
ಅತಿಯಾದ ಮದ್ಯಪಾನ, ಧೂಮಪಾನ ಮತ್ತು ಮಾದಕವಸ್ತುಗಳ ವ್ಯಸನವು ಮೆದುಳನ್ನು ಹಾನಿ ಮಾಡಿ ಮನನ ಮಾಡುವ ಶಕ್ತಿಯನ್ನು ಕುಂದಿಸುತ್ತದೆ. ಈ ದುಶ್ಚಟಗಳು ಮೆದುಳಿನ ಕೋಶಗಳನ್ನು ಹಾನಿಗೊಳಿಸಿ, ಇದು ನೆನಪಿನ ಶಕ್ತಿಯನ್ನು ಕಂದಿಸುತ್ತದೆ. ಅಷ್ಟೇ ಅಲ್ಲದೇ ಇಂತಹ ಅಭ್ಯಾಸಗಳು ಆತ್ಮಮರ್ ಮುಂತಾದ ನರ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಡಿಜಿಟಲ್ ಡಿವೈಸ್‌ಗಳಿಂದ ದೂರವಿರಿ
ತಡರಾತ್ರಿಯವರೆಗೆ ಅತಿಯಾಗಿ ಮೊಬೈಲ್, ಟಿ.ವಿ, ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ ಮುಂತಾದ ಡಿಜಟಲ್ ಉಪಕರಣಗಳನ್ನು ಬಳಸುವುದು, ನೋಡುವುದು ಮತ್ತು ಅವುಗಳ ಪರದೆಯ ಮುಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಾ ಇರುವುದು ಮನುಷ್ಯನ ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ರಾತ್ರಿ ಹತ್ತು ಗಂಟೆಯ ನಂತರ ಇಂತಹ ಡಿಜಿಟಲ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಬೇಕು.
ಮೆದುಳು ಮನುಷ್ಯನ ದೇಹದ ಬಹುಮುಖ್ಯ ಅಂಗವಾದ್ದರಿಂದ, ದೇಹದ ಪೂರ್ತಿ ಅಂಗಾಂಗಗಳಿಗೆ ಸಂದೇಶ ಹೋಗುವುದು ಮೆದುಳಿನಿಂದಲೇ. ಆದ್ದರಿಂದ ಮೆದುಳಿನ ಆರೋಗ್ಯ ರಕ್ಷಣೆ ಅತ್ಯಂತ ಅವಶ್ಯಕ. ಆ ಕಾರಣಕ್ಕೆ ಮೆದುಳಿನ ಆರೋಗ್ಯ ಹಾಗೂ ನರರೋಗ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಕೆಲಸವನ್ನು ನಾವೆಲ್ಲರೂ ಮಾಡಿ, ಈ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಅವಶ್ಯಕತೆಯೂ ಇದೆ. ಮೆದುಳಿನ ಅನಾರೋಗ್ಯವನ್ನು ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಹಾಗೂ ಈ ಸಮಸ್ಯೆಯಿಂದ ಶೀಘ್ರವಾಗಿ ಚೇತರಿಸಿಕೊಳ್ಳಬಹುದು. ಮೆದುಳಿನ ಸಮಸ್ಯೆ ಇರುವವರಿಗೆ ತಜ್ಞರ ಆರೈಕೆ, ಚಿಕಿತ್ಸೆ, ಪುನರ್ವಸತಿ ಹಾಗೂ ತಂತ್ರಜ್ಞಾನ ಇಂದು ಲಭ್ಯವಿದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
