ಕಲುಷಿತ ನೀರಿನೊಂದಿಗೆ ಸಭೆಗೆ ಬಂದ ಕೆಸರಟ್ಟಿ ಮಹಿಳೆಯರು | ಅಧಿಕಾರಿಗಳ ಪ್ರತಿ ಹೇಳಿಕೆಗೆ ಕೆಡಿಪಿ ನೂತನ ಸದಸ್ಯರಿಂದ ಆಕ್ಷೇಪ | ಅಧಿಕಾರಿಗಳ ರಕ್ಷಣೆಗೆ ನಿಂತ ಶಾಸಕರು
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಿಸಿದ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಜರುಗಿದ ೨೦೨೪-೨೫ನೇ ಸಾಲಿನ ಒಂದನೇ ತ್ರೆöÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಶಾಸಕರಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಒಂದು ಮೋಟಾರು ರಿಪೇರಿಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರೆ ನನಗೆ ಕರೆ ಮಾಡಿದರೆ ಹೇಗೆ? ೧೫ ನೇ ಹಣಕಾಸು ಅನುದಾನ ಬಳಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಸಭೆಯಲ್ಲಿ ಶಿಸ್ತಿನಿಂದ ವರ್ತಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಳಿಗ್ಗೆ ಒಂದು ಗಂಟೆ ವಿಳಂಬವಾಗಿ ಆರಂಭಗೊಂಡ ಸಭೆಗೆ ಕೆಡಿಪಿ ನೂತನ ಸದಸ್ಯರಿಗೆ ಗುರುತಿನ ಪತ್ರ ನೀಡುವುದರೊಂದಿಗೆ ಚಾಲನೆ ನೀಡಲಾಯಿತು. ನಂತರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಹವಾಮಾನ ವೈಪರಿತ್ಯದಿಂದ ಆದ ಕಡಿಮೆ ಇಳುವರಿ ಹಾಗೂ ಬೆಳೆ ವಿಮೆಯ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಅಧಿಕಾರಿ ತಾಳೆ ಮರ ಬೆಳವಣಿಗೆ, ನಿರ್ವಹಣೆ ಕುರಿತು ನೀಡಿದಾಗ ಶಾಸಕರು ತಾಳೆ ಮರ ಬೆಳೆದ ಮತಕ್ಷೇತ್ರದ ರೈತರ ಕುರಿತು ಮಾಹಿತಿ ನೀಡಲು ಸೂಚಿಸಿದರು.
ತಾಲ್ಲೂಕಿನ ಶೌಚಾಲಯಗಳ ಚರ್ಚೆ ಆರಂಭವಾದಾಗ ಕೆಡಿಪಿ ಸದಸ್ಯ ಪ್ರಕಾಶ ಗುಡಿಮನಿ ಆಕ್ಷೇಪ ವ್ಯಕ್ತಪಡಿಸಿ, ಶೌಚಾಲಯದ ವಿಷಯದಲ್ಲಿ ಪರಿಶಿಷ್ಟ ಜಾತಿಯನ್ನು ಕಡೆಗಣಿಸಲಾಗುತ್ತಿದೆ . ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಾರ್ಯಯೋಜನೆ ರೂಪಿಸುತ್ತಾರೆ. ಇದರ ಕುರಿತು ಸ್ಪಷ್ಟಿಕರಣ ನೀಡುವಂತೆ ಪಟ್ಟು ಹಿಡಿದರು ನಂತರ ಜಿ.ಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಇಓ ಮಧ್ಯೆ ಪ್ರವೇಶಿಸಿ ಸಮಜಾಯಿಷಿ ನೀಡಿ ಸಮಾಧಾನ ಪಡಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಕುರಿತು ಮಾಹಿತಿ ನೀಡುವ ಸಂದರ್ಭದಲ್ಲಿ ಸಭೆಗೆ ಕಲುಷಿತ ನೀರಿನ ಬಾಟಲಿಯೊಂದಿಗೆ ಆಗಮಿಸಿದ ಕೆಸರಟ್ಟಿ ಗ್ರಾಮಸ್ಥರು ಗ್ರಾಮದಲ್ಲಿ ನೀರು ಸಿಗುತಿಲ್ಲ, ಪಿಡಿಓ ಸ್ಪಂದಿಸುತ್ತಿಲ್ಲ ಎಂದೂ ಶಾಸಕರಿಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತಗೆದುಕೊಂಡರು. ನಂತರ ಜೆಜೆಎಮ್ ಕಾಮಗಾರಿಗಳ ಕುರಿತು ಎಇಇ ತಾರಾನಾಥ ರಾಥೋಡ ಮಾಹಿತಿ ನೀಡುತಿದ್ದಂತೆಯೇ ಹಲವು ಗ್ರಾಮಗಳಲ್ಲಿ ಜೆಜೆಎಮ್ ಕಾಮಗಾರಿ ತೃಪ್ತಿಕರವಾಗಿಲ್ಲ ಈ ಬಗ್ಗೆ ದೂರುಗಳು ಬರುತ್ತಿವೆ ಎಂದು ಶಾಸಕರೇ ಹೇಳುವಂತಾಯಿತು.
ನಂತರ ಸಭೆಯಲ್ಲಿ ಅಂಗನವಾಡಿ ಸ್ವಂತ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಲಭ್ಯವಿರುವ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ದೇವರಹಿಪ್ಪರಗಿ ತಹಶೀಲ್ದಾರ ಪ್ರಕಾಶ ಸಿಂದಗಿ, ಬಸವನ ಬಾಗೇವಾಡಿ ತಹಶೀಲ್ದಾರ ವೈ.ಎಸ್.ಸೋಮನಕಟ್ಟಿ, ದೇವರಹಿಪ್ಪರಗಿ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಬ.ಬಾಗೇವಾಡಿ ಇಓ ಪ್ರಶಾಂತ ದೇಸಾಯಿ ನಿಡಗುಂದಿ ಇಒ ವೆಂಕಟೇಶ. ವ್ಹಿ ತಾಳಿಕೋಟಿ ಇಓ ನಿಂಗಪ್ಪ ಮಸಳಿ, ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಸೇರಿದಂತೆ ನಾಲ್ಕು ತಾಲ್ಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು, ಕೆಡಿಪಿ ಸದಸ್ಯರು ಇದ್ದರು.