ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇಶದ ರೈತ ಬಾಂಧವರ ಬದುಕನ್ನು ಹಸನಗೊಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಲು ರೈತ ಸಂಘಟನೆಗಳು ಇರಬೇಕೆ ಹೊರತು ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುವದಕ್ಕಲ್ಲ. ಇಂದು ಕೆಲ ಸಂಘಟನೆಗಳು ಉಪಜೀವನ ಮಾಡುವದಕ್ಕಾಗಿ ಹುಟ್ಟಿಕೊಳ್ಳುತ್ತಿರುವದು ವಿಷಾದಕರ ಸಂಗತಿ. ಇದರಿಂದಾಗಿ ಸಂಘಟನೆಗಳಿಗೆ ಬೆಲೆ ಸಿಗದಂತಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ತಾಲೂಕಿನ ಕಾನ್ನಾಳ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಬುಧವಾರ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ಅನ್ನದಾತರ ಪರಿಸ್ಥಿತಿ ಬಿಗಡಾಯಿಸಿದೆ. ಅನ್ನದಾತರ ನೆರವಿಗೆ ಇಂದಿನ ಸರ್ಕಾರಗಳು ನೆರವಿಗೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ರೈತ ಬಾಂಧವರು ಒಂದಾಗುವ ಅಗತ್ಯವಿದೆ. ರೈತರು ಒಂದಾದರೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ರೈತರು ಸಾಲದಿಂದ ಮುಕ್ತರಾಗಬೇಕು. ರೈತರ ಆತ್ಮಹತ್ಯೆಗಳು ನಿಲ್ಲುವಂತಾಗಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಗೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯ, ನಾರಾಯಣಪುರ ಜಲಾಶಯಗಳ ನೀರು ಮರು ಹಂಚಿಕೆ ಮಾಡಿ ಅವಳಿ ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸುವ ಅಗತ್ಯವಿದೆ ಎಂದರು.
ವಿಠ್ಠಲ ಬಿರಾದಾರ ಮಾತನಾಡಿ, ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ಜಿಲ್ಲೆಯ ಲಕ್ಷಾತಂರ ಎಕರೆ ಜಮೀನು ಹೋಗಿದೆ. ರೈತರು ತಮ್ಮ ಜಮೀನು, ಮನೆಗಳನ್ನು ಕಳೆದುಕೊಂಡಿದ್ದಾರೆ. ರೈತರ ತ್ಯಾಗ ಮರೆಯುವಂತಿಲ್ಲ. ತ್ಯಾಗ ಮಾಡಿದ ರೈತ ಬಾಂಧವರಿಗೆ ನೀರು ಸರ್ಕಾರ ನೀಡುವಂತಾಗಬೇಕೆಂದರು.
ಅಖಂಡ ಕರ್ನಾಟಕ ರೈತ ಸಂಘದ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ ಮಾತನಾಡಿದರು.
ವೇದಿಕೆಯಲ್ಲಿ ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಹಣಮಂತ್ರಾಯ ಗುಣಕಿ, ಮಲಿಗೆಪ್ಪ ಸಾಸನೂರ, ಲಾಲಸಾಬ ಹಳ್ಳೂರ, ಸಂಗಪ್ಪ ಬಳಿಗಾರ, ಶ್ರೀಶೈಲ ಸಾಸನೂರ, ಬಸವರಾಜ ನಾಗರೆಡ್ಡಿ, ಬಸನಗೌಡ ಪಾಟೀಲ, ಶಿವಶರಣ ನಾಗರೆಡ್ಡಿ, ಚಂದ್ರಶೇಖರ ಹೊಸೂರ, ಶಿವಶರಣ ಹೂಗಾರ, ಗುರಪ್ಪಗೌಡ ಪಾಟೀಲ, ಗುರುಲಿಂಗಯ್ಯ ತೆಗ್ಗಿನಮಠ, ಮಡಿವಾಳಪ್ಪ ನಾಗರೆಡ್ಡಿ, ಮಾರುತಿ ಮೇಲಿನಮನಿ, ಹಣಮಂತ ವಾಲೀಕಾರ ಇತರರು ಇದ್ದರು. ಹಣಮಂತ ಕಲಬುರ್ಕಿ ಸ್ವಾಗತಿಸಿ, ನಿರೂಪಿಸಿದರು.