ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದು ಜನಪದ ಕಲೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಹಲಗೆ ಬಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ಯುವಜನಾಂಗಕ್ಕೆ ಜನಪದ ಕಲೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ಹಳೆಸಂತೆಕಟ್ಟೆ ಆವರಣದಲ್ಲಿ ಬಸವೇಶ್ವರ ಸೇವಾ ಸಮಿತಿಯು ಬುಧವಾರ ಸಂಜೆ ಹೋಳಿ ಹಬ್ಬದಂಗವಾಗಿ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಹಲಗೆ ಬಾರಿಸುವ ಸ್ಪರ್ಧೆಯನ್ನು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಏಕತೆ, ಸಮತೆ ಕಾಪಾಡಲು ಇಂತಹ ಹಬ್ಬಗಳು ಸ್ಪೂರ್ತಿ. ಹಲಗಿ ಹಬ್ಬ ಏಕತೆಯ ಹಬ್ಬವಾಗಿದೆ. ಈ ಹಬ್ಬದಲ್ಲಿ ಎಲ್ಲ ವರ್ಗದ ಜನರು ಸೇರಿಕೊಳ್ಳುವದರಿಂದ ಇದೊಂದು ಸಂಭ್ರಮದ ಹಬ್ಬವಾಗಿದೆ. ಹೋಳಿ ಹಬ್ಬದಂದು ನಡೆಯುವ ಕಾಮದಹನ ಮಾಡುವದು ಮನುಷ್ಯನಲ್ಲಿರುವ ಕೆಟ್ಟ ಗುಣಗಳನ್ನು ಸುಟ್ಟು ಹಾಕುವ ಸಂಕೇತವಾಗಿದೆ ಎಂದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಮಾತನಾಡಿ, ಹಲಗೆ ಬಾರಿಸುವದು ಪಾರಂಪರಿಕ ಕಲೆಯಾಗಿದೆ. ಇಂತಹ ಕಲೆಯನ್ನು ಸಂರಕ್ಷಿಸುವದು ತುಂಬಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ. ಇಂದು ಡಿಜೆ ಸಂಸ್ಕ್ರತಿ ಹೆಚ್ಚಾಗುತ್ತಿರುವದು ವಿಷಾದನೀಯ. ಎಲ್ಲರೂ ಸೌಹಾರ್ಧತೆಯಿಂದ ಕೂಡಿಕೊಂಡು ಮಾ.೧೪,೧೯ ರಂದು ನಡೆಯುವ ಬಣ್ಣದ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಗಲಾಟೆಯಾದರೆ ಅವರ ಮೇಲೆ ಪೊಲೀಸ್ ಇಲಾಖೆಯು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪಟ್ಟಣದಲ್ಲಿ ಈಚೆಗೆ ಹೋಳಿ ಹಬ್ಬವು ತುಂಬಾ ಕಳೆಗುಂದುತ್ತಿದೆ. ಕಳೆಗುಂದಿದ್ದ ಹೋಳಿ ಹಬ್ಬಕ್ಕೆ ಮರುಜನ್ಮ ನೀಡುವ ಉದ್ದೇಶದಿಂದ ಈ ವರ್ಷದಿಂದ ಹಲಗೆ ಬಾರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ. ಹೋಳಿ ಹಬ್ಬದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು.
ವೇದಿಕೆಯಲ್ಲಿ ಲೋಕನಾಥ ಅಗರವಾಲ, ಶೇಖರ ಗೊಳಸಂಗಿ, ರಮೇಶ ಯಳಮೇಲಿ ಇತರರು ಇದ್ದರು. ಸಮಿತಿಯ ಕೋಶಾಧ್ಯಕ್ಷ ಎಂ.ಜಿ.ಆದಿಗೊಂಡ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಗಮೇಶ ಓಲೇಕಾರ ಸ್ವಾಗತಿಸಿದರು. ರವಿ ರಾಠೋಡ ನಿರೂಪಿಸಿದರು. ಸುರೇಶಗೌಡ ಪಾಟೀಲ ವಂದಿಸಿದರು.
ತೀರ್ಪುಗಾರರಾಗಿ ಗಂಗಾಧರ ಬಡಿಗೇರ, ಗುಂಡಪ್ಪ ಬಡಿಗೇರ, ಬಸವರಾಜ ಹಾರಿವಾಳ ಕಾರ್ಯನಿರ್ವಹಿಸಿದರು.
ಹಲಗೆ ಸ್ಪರ್ಧೆ ವಿಜೇತರು
ಹಲಗೆ ಸ್ಪರ್ಧೆ ವೈಯಕ್ತಿಕ ವಿಭಾಗದಲ್ಲಿ ಕೋರವಾರದ ಮಡಿವಾಳ ಕೋರವಾರ ಪ್ರಥಮ ಸ್ಥಾನ, ದೇವರಹಿಪ್ಪರಗಿಯ ನಿಜಪ್ಪ ಮಾದರ ದ್ವಿತೀಯ ಸ್ಥಾನ, ದೇವರಹಿಪ್ಪರಗಿಯ ಹಣಮಂತ ಮಾದರ ತೃತೀಯ ಸ್ಥಾನ, ತಂಡದ ವಿಭಾಗದಲ್ಲಿ ಕೊಂಡಗುಳಿಯ ಮಹಾಂತೇಶ ಕೊಂಡಗುಳಿ ಅವರ ತಂಡ ಪ್ರಥಮ ಸ್ಥಾನ, ಬಸವನಬಾಗೇವಾಡಿಯ ಮಲ್ಲು ಕಲ್ಯಾಣಿ ಅವರ ತಂಡ ದ್ವಿತೀಯ ಸ್ಥಾನ, ತಾಳಿಕೋಟಿಯ ರಾಜು ತಾಳಿಕೋಟಿ ಅವರ ತಂಡ ತೃತೀಯ ಸ್ಥಾನ ಪಡೆದುಕೊಂಡಿತ್ತು.