ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ವಿಕಲಚೇತನರನ್ನು ಕಡೆಗಣಿಸಲಾಗಿರುವದನ್ನು ಖಂಡಿಸಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದಿಂದ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಬೆಂಗಳೂರವರೆಗೂ ಬೈಕ್ ರ್‍ಯಾಲಿ ಹಮ್ಮಿಕೊಂಡಿದೆ. ಮಾ.೧೯ರಂದು ಬಸವನಬಾಗೇವಾಡಿಯಿಂದ ಬೈಕ್ ರ್‍ಯಾಲಿ ಆರಂಭವಾಗಲಿದೆ. ಬೆಂಗಳೂರಿಗೆ ತಲುಪಿದ ನಂತರ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವದು ಎಂದು ವಿಕಲಚೇತನ ಒಕ್ಕೂಟದ ಪ್ರಮುಖ ಮಲ್ಲಿಕಾರ್ಜುನ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕಲಚೇತನರಿಗೆ ಏಕರೂಪ ಮಾಶಾಸನ ನೀಡಬೇಕು. ವಿಕಲಚೇತನರಿಗೆ ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕು. ವಿಕಲಚೇತನರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ವಿಕಲಚೇತನರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಅಂಗವಿಕಲಕರು ಎಸ್‌ಸಿ., ಎಸ್‌ಟಿಗೆ ಸಮಾನರು ಎಂದು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಮ್ಮ ಪ್ರತಿಭಟನೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ನಾಗು ಕರಭಂಟನಾಳ, ಬಸವರಾಜ ಶಂಕ್ರೆಪ್ಪಗೋಳ, ನಾಗೇಶ ಗಬ್ಬೂರ, ಸುರೇಶ ಪವಾರ, ಪ್ರಕಾಶ ಸುಂಕದ, ರಾಜು ಹಾರಿವಾಳ ಇತರರು ಇದ್ದರು.