ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗೆ ಯಾವುದೇ ಬೆಲೆ ಕೊಡದೇ ಗ್ರಾಮ ಲೆಕ್ಕಾಧಿಕಾರಿಗಳನ್ನು ಬೇಕಾ ಬಿಟ್ಟಿಯಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರ ಇನ್ನಾದರು ಎಚ್ಚೆತ್ತುಕೊಂಡು ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಛೇರಿ, ಪಿಠೋಪಕರಣ ಹಾಗೂ ಇತರೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಎಮ್.ಎನ್ ಪಾಟೀಲ ಆಗ್ರಹಿಸಿದ್ದಾರೆ.
ನಗರದ ತಾಲೂಕ ದಂಡಾಧಿಕಾರಿಗಳ ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಕೈಗೊಂಡ ೨ನೇ ಹಂತದ ಮುಷ್ಕರಕ್ಕೆ ಜೆಡಿಎಸ್ ಪಕ್ಷದ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳು ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ತಂತ್ರಾಂಶಗಳನ್ನು ನಿರ್ವಹಿಸಲು ಗೂಗಲ್ ಕ್ರೋಮ್/ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕಾö್ಯನರ್‌ಗಳನ್ನು ಪೂರೈಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲ ಮಾಡಿಕೊಡಬೇಕು ಎಂದರು.
ಈ ವೇಳೆ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಿರೇಕುರುಬರ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳನ್ನು ತಾಂತ್ರಿಕ ಹುದ್ದೆಗಳ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕೆ ತಕ್ಕಂತೆ ತಾಂತ್ರಿಕ ಹುದ್ದೆಗಳಿಗೆ ನಿಗದಿಪಡಿಸಿದಂತೆ ಇವರಿಗೂ ವೇತನ ನೀಡಬೇಕು. ಮತ್ತು ಗ್ರಾಮ ಆಡಳಿತ ಅಧಿಕಾರಿಗಳನ್ನು ಎಲ್ಲಾ ಸರ್ಕಾರಿ ನೌಕರರಂತೆ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಬೇಕು. ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆಗಳಿಗೆ ನಡೆಸುತ್ತಿರುವ ಈ ಮುಷ್ಕರಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಿದರು ನಮ್ಮ ಪಕ್ಷ ನಿಮ್ಮ ಜೊತೆ ನಿಲ್ಲುತ್ತದೆ ಎಂದು ಪ್ರತಿಭಟನೆ ನಿರತ ಗ್ರಾಮ ಆಡಳಿತಾಧಿಕಾರಿಗಳಿಗೆ ಬೆಂಬಲ ಸೂಚಿಸಿ ಧೈರ್ಯ ನೀಡಿದರು.
ಪಕ್ಷದ ತಾಲೂಕಾ ಎಸ್.ಸಿ ಘಟಕದ ಕಾರ್ಯದರ್ಶಿ ಭೀಮಾಶಂಕರ ರತ್ನಾಕರ್, ಎಸ್‌ಟಿ ಘಟಕದ ಅಧ್ಯಕ್ಷ ಶಾಂತಕುಮಾರ ನಾಟೀಕಾರ, ಸಿದ್ದು ತಮದೊಡ್ಡಿ, ನಿಂಗಣ್ಣ ತಳವಾರ, ರವಿ ಶಿರವಾರ, ಖಾನಗೌಡ ಪಟೇಲ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.