ವಿಜಯಪುರದಲ್ಲಿ ಬನಶಂಕರಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಯತ್ನಾಳ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆಕಾಶವಾಣಿ ಕೇಂದ್ರದ ಎದುರಿನ ರಿಂಗ್ ರಸ್ತೆಗೆ ಬನಶಂಕರಿ ಸರ್ಕಲ್ ಎಂದು ನಾಮಕರಣ ಮಾಡುವ ಜತೆಗೆ ನೇಕಾರರು ಸಮುದಾಯ ಭವನ ನಿರ್ಮಿಸಲು ೧೧ ಲಕ್ಷ ರೂ., ಆರ್ಥಿಕ ನೆರವು ನೀಡುವುದಾಗಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಭರವಸೆ ನೀಡಿದರು.
ನಗರದ ವೇದಮಾತೆ ಗಾಯತ್ರಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಕಾಶವಾಣಿ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿದ ಬನಶಂಕರಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೇಕಾರರು ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಸಂಘಟಿತರಾದಾಗ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ. ಎಲ್ಲರೂ ತಮ್ಮಲ್ಲಿನ ಒಡಕು ಮನೋಭಾವ ತೊರೆದು ಸನಾತನ ಧರ್ಮ ಮತ್ತು ದೇಶದ ಉಳಿವಿಗಾಗಿ ದುಡಿಯಬೇಕು. ರಾಜಕಾರಣಿಗಳು ಮಾಡುವ ಸಾಮೂಹಿಕ ವಿವಾಹ ಬರೀ ಚುನಾವಣೆಗಳಿಗಷ್ಟೇ ಸೀಮಿತವಾಗಿರುತ್ತವೆ. ಅದನ್ನೇ ಮಠಾಧೀಶರು ಮುಂದೆ ನಿಂತು ಬಡ ಮಕ್ಕಳ ಸಾಮೂಹಿಕ ವಿವಾಹ ನೆರವೇರಿಸಿದರೆ ನಿರಂತರವಾಗಿ ಸಾಗುವ ಜತೆಗೆ ಧರ್ಮ ಕಾಯಕ ಮಾಡಿದಂತಾಗುತ್ತದೆ ಎಂದರು. ವಿಪ ಸದಸ್ಯ ಕೇಶವ ಪ್ರಸಾದ ಮಾತನಾಡಿ, ಪ್ರಯಾಗರಾಜ್‌ದಲ್ಲಿ ಮಹಾಕುಂಭಮೇಳ ನಡೆದು ಇಡೀ ಜಗತ್ತೇ ಜಾಗೃತಗೊಂಡ ಕಾಲಘಟ್ಟದಲ್ಲಿ ವಿಜಯಪುರದಲ್ಲಿ ಬನಶಂಕರಿ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಾವೂ ಸಹ ೫ ಲಕ್ಷ ರೂ., ನೆರವು ನೀಡುವುದಾಗಿ ಘೋಷಿಸಿದರು. ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ನೇಕಾರ ಸಮುದಾಯದ ತಾಯಂದಿರು ತಮ್ಮ ಮಕ್ಕಳಲ್ಲಿ ಹೆಣ್ಣು ಗಂಡೆಂಬ ಬೇಧಭಾವ ಮಾಡದೇ ಎಲ್ಲರಿಗೂ ಉನ್ನತ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಬೇಕೆಂದರು.
ಹಂಪಿ ಹೇಮಕೂಟ, ಗಾಯತ್ರಿಪೀಠ ಮಹಾಸಂಸ್ಥಾನದ ಪೀಠಾಧೀಶ ದಯಾನಂದಪುರಿ ಮಹಾಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ, ಮೈಂದರ್ಗಿ ಗೌರಿ ಕಟ್ಟಾ ಹಿರೇಮಠದ ಅಭಿನವ ರೇವಣಸಿದ್ದೇಶ್ವರ ಶ್ರೀ, ವಿರಕ್ತಮಠ ಸಿದ್ಧಾಶ್ರಮದ ಮೃತ್ಯುಂಜಯ ಶ್ರೀ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಎಸ್.ದಡ್ಡೇನವರ, ಪ್ರಧಾನ ಕಾರ್ಯದರ್ಶಿ ಧನರಾಜ್ ಅಳ್ಳಿಕಟ್ಟಿ ಮಾತನಾಡಿದರು.
ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಸಾನಿಧ್ಯ ವಹಿಸಿದ್ದರು.
ಬಿಜೆಪಿ ಧುರೀಣ ವಿಜುಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ, ಪ್ರಮುಖರಾದ ಎ.ಬಿ. ಅಂಕದ, ಎಸ್.ಜಿ.ಸುರಪುರ, ಬಸವರಾಜ ಚಿತ್ತರಗಿ, ಬಿ.ಎಂ. ನೂಲ್ವಿ, ಡಾ.ವಿ.ಜಿ. ತೊರವಿ, ಎನ್.ಎಂ. ಪ್ಯಾಟಿ, ಡಾ.ಎಸ್.ಆರ್.ಡೋಣಗಾಂವ, ಬಸವರಾಜ ಚಿಂಚೋಳಿ, ಅಶ್ವಿನಿಕುಮಾರ ಕೋಷ್ಠಿ, ಎನ್.ಎಸ್. ಬಾವಿಕಟ್ಟಿ, ಆನಂದ ಹುಲಮನಿ, ಈರಣ್ಣ ಕೊಪ್ಪಳ, ಡಾ.ಮನೋಹರ ಔರಸಂಗ ಮತ್ತಿತರರು ಇದ್ದರು.
ಡಾ.ಸಂಗಮೇಶ ಮೇತ್ರಿ ಸ್ವಾಗತಿಸಿದರು. ಚಂದ್ರಕಲಾ ಹಿಟ್ನಳ್ಳಿ, ಸಂತೋಷ ಬಂಡೆ ನಿರೂಪಿಸಿದರು. ಬಸವರಾಜ ಹುಬ್ಬಳ್ಳಿ ವಂದಿಸಿದರು.
“ವಿಜಯಪುರ ಬಹುದೊಡ್ಡ ನಗರವಾಗಿದ್ದರೂ ಕೂಡ ಒಂದು ಕುಲದೇವಿ ಬನಶಂಕರಿ ದೇವಸ್ಥಾನ ಇಲ್ಲಿ ಇಲ್ಲದೇ ಇರುವುದು ಜಿಲ್ಲೆಯ ನೇಕಾರರಿಗೆ ನೋವಿನ ಸಂಗತಿಯಾಗಿತ್ತು. ಇಂದು ಆ ಕನಸು ನನಸಾಗಿದೆ. ಭವಿಷ್ಯದಲ್ಲಿ ನಮ್ಮ ನೇಕಾರ ಜನಾಂಗ ಇನ್ನಷ್ಟು ಸಂಘಟಿತರಾಗಿ ಸದೃಡ ಸಮಾಜ ನಿರ್ಮಿಸಲು ಪಣ ತೊಡಬೇಕಿದೆ.”
– ದಯಾನಂದಪುರಿ ಮಹಾಸ್ವಾಮೀಜಿ
ದೇವಾಂಗ ಜಗದ್ಗುರು ಹಂಪಿ-ಹೇಮಕೂಟ ಗಾಯತ್ರಿ ಪೀಠ
ನೋಟೀಸ್‌ಗೆ ಗುರುವಾರ ಉತ್ತರ
ಬಿಜೆಪಿ ಕೇಂದ್ರ ವರಿಷ್ಠರು ಶಾಸಕ ಬಸನಗೌಡ ಪಾಟೀಲ (ಯತ್ನಾಳ) ರಿಗೆ ನೀಡಿದ ನೋಟೀಸಿಗೆ ಏನೆಂದು ಉತ್ತರಿಸಿದ್ದೀರಿ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ, ಟೈಮ್ ಇನ್ನೂ ಇದೆ. ವರಿಷ್ಠರಿಗೆ ಗುರುವಾರ ಉತ್ತರಿಸುವುದಾಗಿ ಚುಟುಕಾಗಿ ಹೇಳಿದರು.