ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಬಿ ಎಲ್ ಡಿ ಇ ಸಂಸ್ಥೆಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಸಾವಿನ ಕುರಿತು ರಾಜಕೀಯ ಲೇಪಿತ ಹೇಳಿಕೆ ನೀಡುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಬಾಲ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಾರ ನಗರದ ಲಾಲಾಬಹುದ್ದೂರ ಶಾಸ್ತ್ರಿ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರು ನಡೆಸುವ ಬಾರ್ ನಲ್ಲಿ ನೀರು ಎಂದು ಕೊಟ್ಟಿದ್ದ ಆ್ಯಸಿಡ್ ನ್ನು ಕುಡಿದು ವ್ಯಕ್ತಿಯೊರ್ವ ಮೃತಪಟ್ಟಿದ್ದು, ಆ ಕುರಿತಂತೆ ಈಗಾಗಲೇ ಎಫ್ ಐ ಆರ್ ಆಗಿದೆ.
ಬಿ.ಎಲ್.ಡಿ. ಇ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿನಿಯ ಸಾವು ಆತ್ಮಹತ್ಯೆಯಿಂದ ಉಂಟಾಗಿದೆ. ಇದರಲ್ಲಿ ಯಾರೆ ತಪ್ಪಿತಸ್ಥರು ಇದ್ದಲ್ಲಿ ಅವರಿಗೆ ಶಿಕ್ಷೆ ಆಗಲಿದೆ. ಇದರಲ್ಲಿ ಯಾವುದೇ ಮುಲಾಜೆ ಇಲ್ಲ. ಆಕೆಯ ಆತ್ಮಹತ್ಯೆ ಹಿಂದಿನ ವಿವಿಧ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ನೀರು ಎಂದು ಹೇಳಿ, ತಾವು ಆ್ಯಸಿಡ್ ಕುಡಿಸಿ, ಬಡಪಾಯಿಯನ್ನು ಸಾಯಿಸಿ ನೇರ ಹೊಣೆಗಾರರಾಗಿರುವ ವಿಜುಗೌಡ ಪಾಟೀಲ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇದೀಗ ವಿಷಯಾಂತರ ಮಾಡುತ್ತಿದ್ದಾರೆ ಎಂದರು.
ಗುಡ್ಡಾಪುರ ದಾನಮ್ಮ ಹೆಸರಿನ ಮಹಾತಾಯಿಯ ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿ ಕಾವಿ ಬಟ್ಟೆ ಹಾಕಿ, ರುದ್ರಾಕ್ಷಿ ಮಾಲೆ ಜಪ ಮಾಡುವ ವಿಜುಗೌಡ ಸಾರಾಯಿ ಮಾರಾಟ ಮಾಡಿ ಬಡವರನ್ನು ನಿತ್ಯವೂ ಸಾಯಿಸುತ್ತಿದ್ದಾರೆ. ಮತ್ತೆ ಬೇರೆಯವರಿಗೆ ನೀತಿ ಪಾಠ ಹೇಳಲು ಹೊರಟಿರುವುದು ಹಾಸ್ಯಾಸ್ಪದ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.
ವಿಜುಗೌಡ ಪಾಟೀಲ ಅವರ ನಿಜಬಣ್ಣ ಎಲ್ಲರಿಗೂ ಗೊತ್ತಿದ್ದು, ಯಾರೂ ಇವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆಗಾಗ ಇಂತಹ ನಾಟಕವಾಡುತ್ತಿರುತ್ತಾರೆ ಎಂದು ಸಂಗಮೇಶ ಬಬಲೇಶ್ವರ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.