ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮೂಲಭೂತ ಸೌಲಭ್ಯ ಕಲ್ಪಿಸುವದು, ವೇತನ ಶ್ರೇಣಿ ನಿಗಧಿಪಡಿಸುವದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವದು ಸೇರಿದಂತೆ ವಿವಿಧ ಒಟ್ಟು ೨೩ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರಾರಂಭಿಸಿದ ೨ನೇ ಹಂತದ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡು ದಿನಗಳನ್ನು ಪೂರೈಸಿ ಮೂರನೇ ದಿನಕ್ಕೆ ಕಾಲಿರಿಸಿದೆ.
ಮಂಗಳವಾರ ತಮ್ಮ ಬೇಡಿಕೆಗಳು ತಮಗೆ ಏಕೆ ಅವಶ್ಯಕ ಎನ್ನುವದನ್ನು ವಿವರಿಸುತ್ತ, ಘೋಷಣೆಗಳನ್ನು ಕೂಗಿದರು. ಧರಣಿ ಸ್ಥಳದಲ್ಲಿಯೇ ಊಟ ಮಾಡಿ ತಮ್ಮ ಆಕ್ರೋಷವನ್ನು ಹೊರಹಾಕಿದರು.
ಈ ವೇಳೆ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಮಾತನಾಡಿ, ಕಂದಾಯ ಇಲಾಖೆಯ ನೌಕರರು ೫ವರ್ಷ ಸೇವೆ ಸಲ್ಲಿಸಿದರೆ ಪದೋನ್ನತಿಗೆ ಯೋಗ್ಯತೆ ಹೊಂದುತ್ತಾರೆ. ಆದರೆ ನಾವು ೧೮ ರಿಂದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಇನ್ನೂ ಪದೋನ್ನತಿ ಇಲ್ಲ. ಹೀಗೆ ಹಲವು ವಿಷಯಗಳಲ್ಲಿ ನಮ್ಮನ್ನು ಕಡೆಗಣಿಸಿದ್ದು ಸೂಕ್ತವಾದ ಮತ್ತು ನ್ಯಾಯಯುತವಾದ ಬೇಡಿಕೆಗಳನ್ನು ಮುಂದಿಟ್ಟು ಸೋಮುವಾರ ಬೆಳಿಗ್ಗೆ ೧೦ರಿಂದ ಸಂಜೆ ೬ ರವರೆಗೆ ರಾಜ್ಯದಾದ್ಯಂತ ಧರಣಿ ೨ನೇ ಹಂತದ ಹೋರಾಟವನ್ನು ಆರಂಭಿಸಲಾಗಿದೆ. ಎರಡನೇ ದಿನದ ಮುಷ್ಕರ ಮುಕ್ತಾಯವಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತದ್ದರೂ ಸರ್ಕಾರವಾಗಲೀ ಅಥವಾ ಸಂಬಂಧಿಸಿದ ಮಂತ್ರಿಗಳು ಯಾವುದೇ ಪ್ರತಿಕ್ರೀಯೆ ನೀಡಿಲ್ಲ. ಕೂಡಲೇ ನ್ಯಾಯಯುತವಾದ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಉಗ್ರವಾಗಲಿದೆ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ, ತಾಳಿಕೋಟೆ ತಾಲೂಕಾಧ್ಯಕ್ಷ ಶಬ್ಬೀರ ಮುಲ್ಲಾ, ಕಾರ್ಯದರ್ಶಿ ಶಿವಾನಂದ ಅಂಗಡಿ ಮಾತನಾಡಿ, ನಮ್ಮ ಬೇಡಿಕೆಗಳು ಸರ್ಕಾರಕ್ಕೆ ಹೊರೆಯಾಗುವಂತಹ ಬೇಡಿಕೆಗಳೆನೂ ಅಲ್ಲ. ಕಚೇರಿ, ಪೀಠೋಪಕರಣ ಸೇರಿದಂತೆ ಮೂಲಭೂತ ಸೌಕರ್ಯಗಳು ನಮ್ಮ ಬೇಡಿಕೆಗಳಾಗಿವೆ. ಇವುಗಳನ್ನು ನೀಡಲು ಸರ್ಕಾರ ಮೀನ ಮೇಶ ಎಣಿಸುತ್ತಿರೋದು ನಮ್ಮನ್ನು ಕಡೆಗಣಿಸಿದಂತೆ ಭಾಸವಾಗುತ್ತಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿದಿದ್ದಲ್ಲಿ ಈ ಬಾರಿ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಈ ವೇಳೆ ಈ ವೇಳೆ ಮನೋಜ ರಾಠೋಡ, ಸುನೀಲ ಚೌವ್ಹಾಣ, ಎ.ಎಸ್.ಬಾಬಾನಗರ, ಶ್ರೀನಿವಾಸ ಹುನಗುಂದ, ಹರ್ಷಿತ್.ಎಚ್, ಸಚೀನ ಗೌಡರ, ದೇವರಾಜ ಗುರಿಕಾರ, ರಫೀಕ ಮುಲ್ಲಾ, ಬಿ.ಕೆ.ನಂದಗೊಂಡ, ಎಚ್.ಸಿ.ಕೊರಗು, ಆರತಿ ಬಳವಾಟ, ಅನುಪಮಾ ಪೂಜಾರ, ಗಂಗಮ್ಮ ಕುಂಬಾರ, ಕಾವ್ಯಾ ಮುಲ್ಲಾಳ, ಶಿವಾನಂದ ಅಂಗಡಿ, ಕಿಶೋರ ಹಜೇರಿ, ಶೈಲಶ್ರೀ ಕಂಚಾಣಿ, ಜಯರಾಮ ಚೌವ್ಹಾಣ, ಈರಪ್ಪ ಪತ್ತಾರ, ಪವನ ಬೆಂಕಿ, ಶೃತಿ ಡಂಬಳ, ಫಕಿರಪ್ಪ ಮಾದಣ್ಣವರ, ಶಾಂತಪ್ಪಗೌಡ ಬಿರಾದಾರ, ಪ್ರಶಾಂತ ಶಾಂತಗೇರಿ, ಮಂಜುನಾಥ ಇಬ್ರಾಹಿಂಪೂರ, ಶಿವಶರಣ ಕುಂಬಾರ, ಉಮಾಪತಿ ಟಿ, ಅನೀಲ ಚೌವ್ಹಾಣ, ಸೇರಿದಂತೆ ಮತ್ತೀತರರು ಇದ್ದರು.