ದರೋಡೆಕೋರರ ಹಲ್ಲೆಯಿಂದ ಮೃತಪಟ್ಟ ಸಂತೋಷ ಕನ್ನಾಳ ಕುಟುಂಬಕ್ಕೆ ಸರ್ಕಾರ ಕೂಡಲೇ ಸ್ಪಂದಿಸಲು ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ : ಕಳ್ಳರ ಹಾವಳಿಯಿಂದ ಗಂಬೀರ ಗಾಯಗೊಡಿದ್ದ ವಿಜಯಪುರ ನಗರದ ಜೈನಾಪೂರ ಲೇಔಟ ನಿವಾಸಿ ಸಂತೋಷ ಕನ್ನಾಳ, (ದಿಂಡವಾರ) ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿದ್ದು, ನೋವಿನ ಸಂಗತಿ ಕೂಡಲೇ ಸರ್ಕಾರ ಮೃತ ಸಂತೋಷನ ಕುಟಂಬಕ್ಕೆ ಪರಿಹಾರ ಒದಗಿಸಬೇಕೆಂದು ನ್ಯಾಯವಾದಿ ಶ್ರೀಶೈಲ ಮುಳಜಿ ಒತ್ತಾಯಿಸಿದರು.
ಅವರು ಮಂಗಳವಾರ ವಿವಿಧ ಸಂಘಟನೆಗಳಿಂದ ವಿಜಯಪುರದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಘಟನೆ ಸಂಭವಿಸಿ ತಿಂಗಳು ಕಳೆಯಲು ಬಂದರು ಜಿಲ್ಲಾಡಳಿತ ಹಾಗೂ ಸರ್ಕಾರ ಮೃತ ಸಂತೋಷನ ಕುಟುಂಬಕ್ಕೆ ಪರಿಹಾರ ನೀಡಲು ವಿಫಲವಾಗಿದೆ ಕೂಡಲೇ ಸೂಕ್ತ ಪರಿಹಾರ ನೀಡಿ ಮೃತ ಸಂತೋಷನ ಕುಟುಂಬಕ್ಕೆ ನ್ಯಾಯ ಒದಗಿಸಬೆಕೆಂದು ಆಗ್ರಹಿಸಿದರು.
ಇನ್ನೋರ್ವ ಮುಖಂಡ ನ್ಯಾಯವಾದಿ ದಾನೇಶ ಅವಟಿಯವರು ಮಾತನಾಡಿ, ದರೋಡೆ ಪ್ರಕರಣದಲ್ಲಿ ಅನ್ಯಾಯವಾಗಿ ಮೃತ ಪಟ್ಟ ಸಂತೋಷ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಕೂಡಲೇ ಸರ್ಕಾರದಿಂದ ೨೫ ಲಕ್ಷ ರೂ ಗಳ ಪರಿಹಾರ ಹಾಗೂ ಮೃತನ ಪತ್ನಿಗೆ ಸರ್ಕಾರಿ ನೌಕರಿ ಮಗುವಿಗೆ ಶೈಕ್ಷಣಿಕ ಖರ್ಚು ವೆಚ್ಚ ನೀಡಿ ಅನುಕೂಲ ಮಾಡಿಕೊಡಬೇಕು. ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದ ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಜನತೆ ಕಳ್ಳ ಕಾಕರ ಹಾವಳಿಯಿಂದ ಭಯಭೀತರಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ತಪ್ಪಿತಸ್ಥ ಕಳ್ಳರಿಗೆ ಉಗ್ರ ಶಿಕ್ಷೆ ನೀಡಿ, ಜಿಲ್ಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿ ವ್ಹಿ.ಎನ್. ಪಾಟೀಲ (ಟಕ್ಕೆ) ಅವರು ಮಾತನಾಡಿ, ಸರ್ಕಾರದಿಂದ ಪರಿಹಾರ ನೀಡಲು ವಿಳಂಬವಾದರೆ ಸಾರ್ವಜನಿಕರೆಲ್ಲರೂ ಸೇರಿಕೋಂಡು ಸಂಘ ಸಂಸ್ಥೆಗಳ ಮೂಲಕ ದೇಣಿಗೆ ಸಂಗ್ರಹಿಸಿ ಮೃತನ ಸಂತೋಷನ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಿ.ಎಮ್. ಅಂಗಡಿ, ಸಿದ್ದನಗೌಡ ಪೊಲೀಸ್‌ಪಾಟೀಲ, ಪ್ರವೀಣ ಹುಡೇದಾಳ, ಶಿವಾನಂದ ಬಗಲಿ, ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ, ತನು ಪೌಂಡೇಶನ್ ಅಧ್ಯಕ್ಷ ವಿಜಯಕುಮಾರ ಕಾಳಶೆಟ್ಟಿ, ಯುವ ಮುಖಂಡ ಷಣ್ಮುಖ ರಾಮತೀರ್ಥ, ಸಿದ್ಧಾರೂಢ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.