ಲೇಖನ
✍️ ಅರ್ಚನಾ ಮಂಜುನಾಥ್ (ಅಚ್ಚು )
ಉದಯರಶ್ಮಿ ದಿನಪತ್ರಿಕೆ
” ಸಂಬಂಧಗಳಲ್ಲಿ ಹೊಂದಾಣಿಕೆ” ಈ ಸಾಲುಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಹೊಂದಾಣಿಕೆ ಇಲ್ಲದೆ ಮಾನವನ ಜೀವನ ನಡೆಯಲು ಸಾಧ್ಯವೇ ಇಲ್ಲ.
ಹುಟ್ಟಿನಿಂದ ಸಾಯುವವರೆಗೂ ಒಂದಲ್ಲ ಒಂದು ವಿಷಯಕ್ಕೆ, ವ್ಯಕ್ತಿಗೆ, ಸಮಯಕ್ಕೆ, ಸವಾಲಿಗೆ, ನಿರ್ಧಾರಗಳಿಗೆ, ಅಭಿರುಚಿಗಳಿಗೆ, ಸ್ಥಳಗಳಿಗೆ, ಉಡುಗೆ ತೊಡುಗೆಗಳಿಗೆ ಹೀಗೆ ಇನ್ನೂ ಹಲವಾರು ವಿಚಾರಗಳಿಗೆ
ನಮ್ಮನ್ನು ನಾವು ಹೊಂದಿಸಿಕೊಂಡು ಬದುಕಬೇಕಾಗುತ್ತದೆ.
![1000952986](https://udayarashminews.com/wp-content/uploads/2025/01/1000952986.jpg)
“ಸರಸವೇ ಜನನ,ವಿರಸವೇ ಮರಣ, ಸಮರಸವೇ ಜೀವನ “ಎಂಬ ನಾಣ್ಣುಡಿಯಂತೆ ಸಮರಸ ಅಂದರೆ ಹೊಂದಾಣಿಕೆಯ ಜೀವನವೇ ಬದುಕಿಗೆ ನೆಮ್ಮದಿಯ ನೆಲೆಯನ್ನು ಒದಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೊಂದಾಣಿಕೆ ಎಂಬುದು ಹುಟ್ಟಿನಿಂದಲೇ ಬಂದು ಬಿಟ್ಟಿರುತ್ತದೆ. ಅದರಲ್ಲೂ ಕೂಡು ಕುಟುಂಬದಲ್ಲಿ ಆಕೆ ತಂದೆ ತಾಯಿಯ, ಅಜ್ಜಿ ತಾತ,ಅಣ್ಣ ತಮ್ಮ ,ಅಕ್ಕ ತಂಗಿ, ದೊಡ್ಡಪ್ಪ ಚಿಕ್ಕಪ್ಪ, ದೊಡ್ಡಮ್ಮ ಚಿಕ್ಕಮ್ಮ, ಅತ್ತೆ ಮಾವ ಹೀಗೆ ಹಲವಾರು ಸಂಬಂಧಗಳ ಜೊತೆ ಹೊಂದಿಕೊಂಡು ಬಾಳಲೇ ಬೇಕಾಗಿರುತ್ತದೆ. ಹೊಂದಿಕೊಳ್ಳದಿದ್ದ ಪಕ್ಷದಲ್ಲಿ ಅವರು ಮನೆಯಲ್ಲಿ ಈ ರೀತಿ ಹೊಂದಿಕೊಳ್ಳದಿದ್ದರೆ ಗಂಡನ ಮನೆಯಲ್ಲಿ ನಿನ್ನ ಗತಿ ಏನು ಎಂಬ ಪ್ರಶ್ನೆಗಳ ಸುರಿಮಳೆ ಆಕೆಗೆ ಸುರಿಯುತ್ತದೆ. ಹಾಗಾಗಿ ಆಕೆಗೆ ಇಷ್ಟವಿರಲಿ ಇಲ್ಲದಿರಲಿ ಎಲ್ಲರನ್ನೂ ಸಹಿಸುತ್ತಾ ಸಹನೆಯಿಂದ ಹೊಂದಿಕೊಂಡು ಬಾಳುವುದನ್ನು ಆಕೆ ಚಿಕ್ಕವಳಿಂದಲೇ ಕಲಿತು ಬಿಟ್ಟಿರುತ್ತಾಳೆ.
ಗಂಡನ ಮನೆಗೆ ಹೋದ ಹೆಣ್ಣಿಗೆ ಎಲ್ಲವೂ ಹೊಸದು. ಹೊಸ ಜಾಗ, ಹೊಸ ಊರು ಹೊಸ ಜನ ಊಟ ತಿಂಡಿ ಎಲ್ಲಿ ವ್ಯತ್ಯಾಸ , ಮಾತುಕತೆಗಳಲ್ಲಿ ವ್ಯತ್ಯಾಸ, ಉಡುವ ತೊಡುವ ವಿಚಾರಗಳಲ್ಲೂ ವ್ಯತ್ಯಾಸ, ಹೇಗೆ ಹಲವಾರು ವ್ಯತ್ಯಾಸ ಹಾಗೂ ಹೊಸತುಗಳ ನಡುವೆ ಆಕೆ ತನ್ನನ್ನು ತಾನು ಹೊಂದಿಸಿಕೊಂಡು ತವರ ಹೆಸರನ್ನು ಹೆಚ್ಚಿಸುತ್ತಾ ಆ ಮನೆಯನ್ನು ಮರೆತು ಈ ಮನೆಯವಳಾಗಿ ತನ್ನ ಸರ್ವಸ್ವವನ್ನು ಧಾರೆ ಎರೆಯುತ್ತಾಳೆ. ಇದೆಲ್ಲಕ್ಕೂ ಮುಖ್ಯ ಕಾರಣ ಆಕೆ ತನ್ನಲ್ಲಿ ಮೈಗೂಡಿಸಿಕೊಂಡಿರುವ ಹೊಂದಾಣಿಕೆಯ ಸ್ವಭಾವವೇ ವಿನಃ ಮತ್ತೇನು ಅಲ್ಲ ಎಂಬುದು ನನ್ನ ಅನಿಸಿಕೆ. ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಸೊಸೆಯಾಗಿ, ಅಕ್ಕನಾಗಿ, ತಂಗಿಯಾಗಿ, ಗೆಳತಿಯಾಗಿ, ಪ್ರೇಯಸಿಯಾಗಿ ಆಕೆ ಬಾಳಬೇಕೆಂದರೆ ಹೊಂದಾಣಿಕೆ ಎಂಬುದು ಅವಳ ಮೂಲ ಮಂತ್ರವಾಗಿರುತ್ತದೆ.
ಹೊಂದಾಣಿಕೆ ಇಲ್ಲದೆ ಯಾರ ಜೀವನವೂ ಅಥವಾ ಯಾರ ಸಂಸಾರವೂ ಕೂಡ ಸುಖ ಕಾಣಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ನಾವು ನೋಡುವ ವಿಭಕ್ತ ಕುಟುಂಬಗಳು, ವಿವಾಹ ವಿಚ್ಛೇದನಗಳು, ಆತ್ಮಹತ್ಯೆಗಳು, ಒಬ್ಬರಿಗೆ ಮತ್ತೊಬ್ಬರಲ್ಲಿರುವ ದ್ವೇಷ ಅಸೂಯಗಳು, ಇವೆಲ್ಲಕ್ಕೂ ಮುಖ್ಯ ಕಾರಣ ಜನರಲ್ಲಿ ಹೊಂದಾಣಿಕೆ ಕಡಿಮೆಯಾಗುತ್ತಿರುವುದು.
ಹೊಂದಾಣಿಕೆ ಎಂಬುದು ಜಗತ್ತಿನ ಮೂಲ ಮಂತ್ರವಾಗದೆ, ಜನರ ಮೂಲ ಮಂತ್ರವಾದರೆ ಜಗತ್ತಿನ ಸರ್ವ ಜನರು ಕೂಡ ಹೊಂದಾಣಿಕೆಯಿಂದ ಸುಖವಾಗಿ ಬಾಳುವುದರಲ್ಲಿ ಸಂಶಯವೇ ಇಲ್ಲ.
ಹುಟ್ಟು ಸಾವಿನ ನಡುವೆ ಹೊಂದಿಕೊಂಡು ಬಾಳಿರೋ
ಅದರ ಸವಿಯ ನೀವು ಸವಿದು ಇತರರಿಗೂ ಹಂಚಿರೋ.
![1000952992](https://udayarashminews.com/wp-content/uploads/2025/01/1000952992.jpg)