ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಇತ್ತೀಚೆಗೆ ನಿವೃತ್ತಿಯಾಗಿ ಸಂತಸದ ನಿವೃತ್ತಿ ಜೀವನವನ್ನು ಕಳೆಯುತ್ತಿರುವ ಚಿಕ್ಕಮ್ಮನಂತಿರುವ ಹಿರಿಯ ಸ್ನೇಹಿತರಿಗೆ ಕರೆ ಮಾಡಿ ಹೇಗಿದೆ ನಿವೃತ್ತಿಯ ಜೀವನ? ಎಂದು ಕೇಳಿದೆ.
ಇದುವರೆಗೂ ತಂದೆ ತಾಯಿಗಾಗಿ, ಒಡಹುಟ್ಟಿದವರಿಗಾಗಿ, ಗಂಡನಿಗಾಗಿ,ಮಕ್ಕಳಿಗಾಗಿ ಮತ್ತು ಸ್ನೇಹಿತರಿಗಾಗಿ ನನ್ನ ಬದುಕನ್ನು ಮುಡುಪಾಗಿಟ್ಟ ನಾನು ಪ್ರಯತ್ನಪೂರ್ವಕವಾಗಿ ನನ್ನನ್ನು ಪ್ರೀತಿಸಲು ಆರಂಭಿಸಿರುವೆ. ಕುಟುಂಬದ ಸದಸ್ಯರೆಲ್ಲರ ಬೇಕು ಬೇಡಗಳ ಹೊರೆಯನ್ನು ನನ್ನ ಹೆಗಲ ಮೇಲೆ ಹೊರಲು
ನಾನೇನು ಗೋವರ್ಧನಧಾರಿಯೇ? ಎಂಬ ಅರಿವು ನನಗೆ ಇತ್ತೀಚೆಗೆ ಆಗಿದೆ.
ಹೇಳಿದ್ದನ್ನೇ ಪದೇ ಪದೇ ಹೇಳುವ ಅಪ್ಪ, ಅಮ್ಮ, ಅತ್ತೆಯರಿಗೆ ಈ ಕಥೆಯನ್ನು ಈ ಮೊದಲೇ ಹೇಳಿದ್ರಿ ಎಂದು ಹೇಳಿ ಅವರ ನೆನಪುಗಳ ಮೆರವಣಿಗೆಗೆ ರಸಭಂಗ ಮಾಡುವುದಿಲ್ಲ.. ಇಷ್ಟು ವಯಸ್ಸಾದರೂ ನನ್ನೊಂದಿಗೆ ಅವರು ಇದ್ದಾರಲ್ಲ ಎಂಬ ತೃಪ್ತಿಯೇ ಸಾಕು ನನಗೆ. ಅವರ ನೆನಪಿನ ಕೋಣೆಯೊಳಗೆ ಇನ್ನೆಷ್ಟು ಮುತ್ತು ರತ್ನಗಳು ಇವೆಯೋ ಎಂಬುದು ನನಗೆ ಗೊತ್ತಿಲ್ಲ.. ಧಾವಂತದಿಂದ ಓಡಿ ಹೋಗಲು ನನಗೇನು ಆಫೀಸು ಕಾದು ಕುಳಿತಿಲ್ಲ ಅಲ್ಲವೇ!?
ಮನೆಯ ಮುಂದೆ ತರಕಾರಿ, ಹಣ್ಣು ಮತ್ತಿತರ ದಿನಬಳಕೆಯ ಅಗತ್ಯದ ವಸ್ತುಗಳನ್ನು ಮಾರಲು ಬರುವವರೊಂದಿಗೆ ನಾನು ಚೌಕಾಶಿ ಮಾಡುವುದನ್ನು ಬಿಟ್ಟುಬಿಟ್ಟಿದ್ದೇನೆ.. ಮನೆಯ ಎಲ್ಲಾ ಸದಸ್ಯರಿಗೂ ನಿಶ್ಚಿತ ವರಮಾನವಿದ್ದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ.ದುಡಿದರೆ ಮಾತ್ರ ಆ ದಿನ ನಡೆಯುತ್ತದೆ ಎಂಬ ಬದುಕನ್ನು ಬದುಕುತ್ತಿರುವವರೊಂದಿಗೆ ಚೌಕಾಸಿ ಮಾಡಿ ನಾನೇನು ಉಳಿಸಿ ಗುಡ್ಡೆ ಹಾಕಬೇಕಾಗಿದೆ ಎಂಬ ಅರಿವು ನನ್ನ ತಲೆಗೆ ಬಡಿದಿದೆ.
ಹೋಟೆಲ್ಗಳಿಗೆ ಹೋದಾಗ ನಮಗೆ ಸಪ್ಲೈ ಮಾಡುವವರಿಗೆ ತುಸು ಹೆಚ್ಚಿನ ಹಣವನ್ನು ತಟ್ಟೆಯಲ್ಲಿಯೇ ಟಿಪ್ ಎಂದು ಬಿಟ್ಟು ಬರುವಾಗ ಆ ಪರಿಚಾರಕನ ಮೊಗದಲ್ಲಿ ಮೂಡುವ ಸಂತಸದ ಮುಗುಳ್ನಗೆಯನ್ನು ನೆನೆದು ಮನ ಮುದಗೊಳ್ಳುತ್ತದೆ.
ನನ್ನ ಒಂದು ಪುಟ್ಟ ಮೊತ್ತದ ನೋಟು ಆತನಿಗೆ ಖುಷಿಯನ್ನು ನೀಡುತ್ತದೆ ಎಂಬ ತೃಪ್ತಿಯೇ ಸಾಕು ನನಗೆ.
ಯಾರಾದರೂ ತೀರ ಅನಿವಾರ್ಯ ಪರಿಸ್ಥಿತಿಯಲ್ಲಿರುವವರು ಕೈಯೊಡ್ಡಿ ಬೇಡಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದರೆ ತಪ್ಪೇನು? ನಾನೇನು ಆತನಿಗೆ ಮನೆ ಕಟ್ಟುವಷ್ಟು ಕೊಡುವುದಿಲ್ಲ ಅಲ್ವೇ?
ಬೇರೆಯವರ ತಪ್ಪುಗಳು ಢಾಳಾಗಿ ಕಣ್ಣಿಗೆ ರಾಚುವಂತಿದ್ದರೂ ನಾನು ಅವರಿಗೆ ಅವರ ತಪ್ಪನ್ನು ಎತ್ತಿ ತೋರಿಸುವುದಿಲ್ಲ. ಎಲ್ಲರೂ ಪರಿಪೂರ್ಣರಲ್ಲ ಮತ್ತು ಎಲ್ಲರನ್ನೂ ಪರಿಪೂರ್ಣರಾಗಿಸುವ ಜವಾಬ್ದಾರಿಯನ್ನು ನಾನೇನು ತೆಗೆದುಕೊಂಡಿಲ್ಲ ಮತ್ತು
ನನಗೆ ಸರಿ ಕಾಣಿಸಿದ ಎಲ್ಲವೂ ಎಲ್ಲರಿಗೂ ಸರಿಯಾಗಿರಬೇಕೆಂದೇನಿಲ್ಲ. ಪ್ರತಿಯೊಬ್ಬರಿಗೂ ಬದುಕಿನ ಕುರಿತು ಅವರವರದೇ ಆದ ದೃಷ್ಟಿಕೋನಗಳು ಇರುತ್ತವೆ.. ಅದನ್ನು ತಪ್ಪು ಎಂದು ನಾನೇಕೆ ಹೇಳಬೇಕು ಎಂಬ ಭಾವ ನನ್ನಲ್ಲಿ ಸದಾ ಜಾಗೃತವಾಗಿರುವ ಕಾರಣ ಅನವಶ್ಯಕ ಗೊಂದಲಗಳಿಗೆ ನಾನು ಈಡಾಗುವುದಿಲ್ಲ.
ಅತ್ಯಂತ ಉದಾರವಾಗಿ ಮತ್ತು ಮುಕ್ತವಾಗಿ ನಾನು ಬೇರೆಯವರನ್ನು ಪ್ರಶಂಶಿಸುತ್ತೇನೆ.. ಈ ರೀತಿಯ ಪ್ರಶಂಸೆಗಳು ಅವರಲ್ಲಿ ಮಾತ್ರವಲ್ಲ ನನ್ನಲ್ಲೂ ಕೂಡ ಆತ್ಮವಿಶ್ವಾಸವನ್ನು ತುಂಬುತ್ತವೆ.
ಪತಿಯ ಅಂಗಿಯ ಮೇಲಿನ ಕಲೆಗೆ ಚಿಂತಿಸುವುದನ್ನು ನಾನು ಬಿಟ್ಟು ಬಿಟ್ಟಿದ್ದೇನೆ. ವ್ಯಕ್ತಿತ್ವ ನಮ್ಮ ಬಾಹ್ಯಾಡಂಬರಕ್ಕಿಂತ ಹೆಚ್ಚು ಜೋರಾಗಿ ಸದ್ದು ಮಾಡುತ್ತದೆ. ಸರಳತೆಯೇ ಜೀವನದ ಪ್ರಮುಖ ಧ್ಯೇಯವಾಗಿದ್ದ ಗಾಂಧೀಜಿಯವರು ಎಂದೂ ಸೂಟು ಬೂಟನ್ನು ಧರಿಸಿರಲಿಲ್ಲ ಆದರೆ ಅರೆ ನಗ್ನರಾದ ಅವರ ಒಂದು ಪುಟ್ಟ ಕಿವಿ ಮಾತಿಗೆ ಇಡೀ ದೇಶ ತಲೆಬಾಗುತ್ತಿತ್ತು ಮತ್ತು ಬ್ರಿಟಿಷ್ ಅರಸೊತ್ತಿಗೆಗೆ ನಡುಕ ಹುಟ್ಟಿಸುತ್ತಿತ್ತು ಎಂಬುದನ್ನು ನೆನೆದರೆ ಸರಳತೆಯಲ್ಲಿ ಶಕ್ತಿ ಇದೆ. ಸ್ವಚ್ಛವಾಗಿ ಒಗೆದು ಒಣಗಿಸಿ ಮಡಚಿ ಇಟ್ಟ ಬಟ್ಟೆಗಳು, ಶಿಸ್ತಿನ ಜೀವನ ಶೈಲಿ, ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದೇ ಬದುಕಿನ ನಿಜವಾದ ಶ್ರೀಮಂತಿಕೆ ಎಂಬುದನ್ನು ಅರಿತು ಅನುಭವಿಸುತ್ತಿದ್ದೇನೆ.
ನನ್ನನ್ನು ಕಡೆಗಣಿಸುವ ಜನರಿಂದ ನಾನು ದೂರ ಸರಿಯುತ್ತೇನೆ. ಅವರಿಗೆ ನನ್ನ ಮೌಲ್ಯ ತಿಳಿಯದಿರಬಹುದು.. ಆದರೆ ನಾನೇನು ಎಂಬುದು ನನಗೆ ಗೊತ್ತು.
ನಾನು ಯಾರೊಂದಿಗೂ ಸ್ಪರ್ಧೆಗೆ ಇಳಿದಿಲ್ಲ.. ನನ್ನ ಸ್ಪರ್ಧೆ ಕೇವಲ ನನ್ನ ವ್ಯಕ್ತಿತ್ವವನ್ನು ಉತ್ತಮಗೊಳಿಸುವುದು ಮಾತ್ರ. ಈ ಮೊದಲಿನಂತೆ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನಾನು ಹಿಂಜರಿಯುವುದಿಲ್ಲ.. ನನ್ನಲ್ಲಿರುವ ಭಾವನೆಗಳು ನನ್ನನ್ನು ಒಬ್ಬ ಮನುಷ್ಯಳನ್ನಾಗಿ ಮಾಡಿವೆ.. ಅಲ್ಲವೇ?
ಸಂಬಂಧಗಳನ್ನು ಮುರಿದುಕೊಳ್ಳುವುದಕ್ಕಿಂತ ನಮ್ಮ ಅಹಂ ಅನ್ನು ದೂರವಿಡುವುದು ಒಳ್ಳೆಯದು ಎಂದು ನಾನು ಕಲಿತಿರುವೆ. ನನ್ನ ಅಹಮ್ಮಿನ ಕೋಟೆಯೊಳಗೆ ನಾನು ಬಂಧಿಯಾಗಿ ಒಂಟಿಯಾಗಿರುವುದಕ್ಕಿಂತ ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ಇರಲು ಬಯಸುವೆ.
ಈ ಹಿಂದಿನಂತೆ ಪ್ರತಿಯೊಂದಕ್ಕೂ ಆತಂಕ ಪಡದೆ.. ಜೀವನವನ್ನು ಅದು ಬಂದಂತೆ ಸ್ವೀಕರಿಸುವ ಮನಸ್ಥಿತಿ ನನ್ನದಾಗಿಸಿಕೊಂಡಿದ್ದೇನೆ.. ‘ಜಿಯೋ.. ಜೀ ಭರ್ ಕೇ’ ಎಂಬಂತೆ ಮನದುಂಬಿ ಜೀವಿಸುವುದರಲ್ಲಿನ ಆನಂದವನ್ನು ಅರಿತಿದ್ದೇನೆ.
ನನ್ನ ಸಂತೋಷಕ್ಕೆ ನಾನು ಮಾತ್ರ ಜವಾಬ್ದಾರಳು ಎನ್ನುವುದನ್ನು ಅರಿತಿದ್ದು, ನನಗೆ ಸಂತೋಷವಾಗುವ ಎಲ್ಲಾ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೇನೆ. ಸಂತೋಷ ಒಂದು ಆಯ್ಕೆ.. ನೀವು ಯಾವಾಗ ಬೇಕಿದ್ದರೂ ಸಂತೋಷವಾಗಿ ಇರುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ಅಂಧಕಾರವನ್ನು ಬೆಳಕಿನ ಕಿರಣ ಹಿಂಬಾಲಿಸಿ ಬರುವಂತೆ ಪ್ರತಿ ನೋವು, ನಿರಾಸೆ ಮತ್ತು ತೊಂದರೆಗಳನ್ನು ಸಂತೋಷ ಹಿಂಬಾಲಿಸಿ ಬರುತ್ತದೆ ಎಂಬ ಸಕಾರಾತ್ಮಕ ನಂಬಿಕೆಯನ್ನು ನಾನು ಹೊಂದಿದ್ದೇನೆ.
ಅರವತ್ತಕ್ಕೆ ಅರಳು ಮರಳು ಎಂಬ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ.. 60ರ ನಂತರ ಮರಳಿ ಅರಳಬೇಕೆನ್ನುವ ನನ್ನ ಆಶಯ ನನಗೆ ಬದುಕುವ ಹೊಸ ಹುಮ್ಮಸ್ಸನ್ನು ನೀಡಿದೆ..
ಹೀಗೆ ತನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡ ಚಿಕ್ಕಮ್ಮನ ಮಾತು ನಿಜ ಅಲ್ಲವೇ?
ಹುಟ್ಟಿದ ಪ್ರತಿಯೊಬ್ಬ ಜೀವಿಯು ಬದುಕಿನ ನಾಗಾಲೋಟದಲ್ಲಿ ಸತತವಾಗಿ ಓಡುತ್ತಿರುತ್ತಾನೆ.. ವಿದ್ಯೆ, ಓದು, ನೌಕರಿ, ವಿವಾಹ, ಮಕ್ಕಳು,ಶಿಕ್ಷಣ, ಮನೆ, ಮಕ್ಕಳ ಜವಾಬ್ದಾರಿಗಳು ಹೀಗೆ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಾ ಬದುಕುವ ನಾವುಗಳು ಜೀವಿತದ ಕೊನೆಯಲ್ಲಿ ನಮ್ಮ ಕಳೆದು ಹೋದ ಬದುಕನ್ನು ನೆನೆಸುತ್ತಾ ಹೀಗೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹಲುಬುವ ಬದಲು ಆಯಾ ಸಮಯದಲ್ಲಿ ನಮಗೆ ಖುಷಿ ಕೊಡುವ ಸಂಗತಿಗಳನ್ನು ಬದುಕಿನಲ್ಲಿ ಅನುಭವಿಸಬೇಕು ಏನಂತೀರಾ?
![1000945691 1](https://udayarashminews.com/wp-content/uploads/2025/01/1000945691-1.jpg)