ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಿಶ್ಚಿತ ಪಿಂಚಣಿ (OPS) ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಗಳಿಗೆ ಪತ್ರ
ರಾಜ್ಯ ಸರ್ಕಾರಿ NPS ನೌಕರರ ಸಂಘ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ನೀಡುವಂತೆ ಆಗ್ರಹಿಸಿ ತಾಲೂಕಿನ ನೌಕರರು ಮುಖ್ಯ ಮಂತ್ರಿಗಳಿಗೆ ಪತ್ರ ಚಳುವಳಿ ಪ್ರಾರಂಭಿಸಿದ್ದಾರೆ.
ಈ ವೇಳೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಓಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಎರಡೂ ವರ್ಷಗಳು ಕಳೆದರೂ ಇನ್ನೂ ಕೊಟ್ಟ ಮಾತಿನಂತೆ ನಡೇದಕೊಳ್ಳದ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಇಡೀ ರಾಜ್ಯಾದ್ಯಂತ ಓಪಿಎಸ್ ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರಗಳನ್ನು ಹಾಕುವುದರ ಮುಖಾಂತರ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬರುವ ಫೆಬ್ರುವರಿ ೭ ರಂದು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಅಂದು ಉಪವಾಸ ನಿರತ ನೌಕರರಿಗೆ ಸಾವು ನೋವುಗಳು ಉಂಟಾದರೆ ನೇರವಾಗಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ತಾಲೂಕು ಅಧ್ಯಕ್ಷರು ಬುಳ್ಳಪ್ಪ ಡಿ.ಪ್ರಧಾನ ಕಾರ್ಯದರ್ಶಿ ಶಿವಲಿಂಗ ಉಮ್ಮರಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕರು ಎ.ಎಮ್.ಗಜಾಕೋಶ, ನೌಕರರಾದ ಇಮ್ರಾನ್ ಮಕಾನದಾರ ಜೆ.ಎಸ್.ಸೌದಾಗಾರ, ಎಸ್.ಎ.ಅರಳಿಮಟ್ಟಿ, ದೇವೆಂದ್ರ ನಾಯಕೊಡಿ, ಸತೀಶ ಹೂವಿನ ಹಳ್ಳಿ, ಸಿದ್ದಮ್ಮ ಗೊಟಗುಣಕಿ , ನೀಲಮ್ಮ ನಾಗಾವಿ, ಅಶೋಕ ರಾಠೋಡ, ಮಹೇಶ ಎಮ್, ಮುಖೇಶ್ ಲೋಣಿ, ಸುಭಾಷ್ ರಾಠೋಡ, ರಾಜೀವ್ ಭೈರಿ, ಪರಮಾನಂದ ಮಾಳೆಗಾರ, ರಾಮನಗೌಡ ಮಸಳಿ ಮುಂತಾದವರು ಉಪಸ್ಥಿತರಿದ್ದರು.

