ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯಲು ಶಿಕ್ಷಕರ ಭೋದನೆಗಳನ್ನು ಸರಿಯಾದ ರೀತಿಯಲ್ಲಿ ಕೇಳಿಸಿಕೊಂಡು, ಅವುಗಳನ್ನು ಸರಿಯಾಗಿ ಪಾಲಿಸಬೇಕೆಂದು ರಬಕವಿ-ಬನಹಟ್ಟಿ ತಾಲುಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಹೇಳಿದರು.
ಸಮೀಪದ ಯರಗಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಯಲು ರಂಗಮAದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವ್ಯಸನ ವಿರೋಧಿ ದಿನಾಚರಣೆ ಹಾಗೂ ಶಾಲಾ ಕ್ರೀಢಾ ಮತ್ತು ಸಾಂಸ್ಕೃತಿಕ ಚಟುವಟಿಕೆ, ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳು ಕೇವಲ ಅಂಕಗಳ ಬೆನ್ನಟ್ಟದೆ ಗುಣಾತ್ಮಕ ಹಾಗೂ ಪ್ರಾಯೋಗಿಕ ಶಿಕ್ಷಣ ಪಡೆಯಬೇಕು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಢೆಗಳಲ್ಲಿ ಭಾಗವಹಿಸಬೇಕು, ಶಾಲೆಯಲ್ಲಿ ಲಭ್ಯವಿರುವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬನಹಟ್ಟಿ ಪೋಲಿಸ ಠಾಣಾಧಿಕಾರಿ ಶಿವರಾಜ ಧರಿಗೋಣ ಮಾತನಾಡಿ ಮಾದಕ ವಸ್ತುಗಳ ದುರ್ಬಳಕೆ ಹಾಗೂ ಕಳ್ಳಸಾಗಣೆಯಿಂದ ಸಮಾಜಕ್ಕೆ ಉಂಟಾಗುವ ಹಾನಿಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಉತ್ತಮಕುಮಾರ ಮಗದುಮ್ ಪ್ರಾಸ್ತಾವಿಕವಾಗಿ ಮಾತನಾಡಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಸಮಾಜದ ಸ್ವಾಸ್ಥವನ್ನು ಹಾಳು ಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಮಹಾದೇವ ಸನದಿ ವಹಿಸಿದ್ದರು, ಬಸಪ್ಪ ಕಂಕಣವಾಡಿ, ಪ್ರಭಾರಿ ಮುಖ್ಯೋಪಾದ್ಯಾಯ ಐ.ಡಿ. ನದಾಫ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಎಂ.ಪಿ. ಮೇಗಾಡಿ ಸ್ವಾಗತಿಸಿದರು. ಡಾ. ರಾಜು ಕೊಕ್ಕನವರ, ಮಹಾಂತೇಶ ಸೋರಗಾವಿ ಕಾರ್ಯಕ್ರಮ ನಿರೂಪಿಸಿದರು, ಭರತೇಶ ಲೋಕಾಪೂರ ವಂದಿಸಿದರು.

