ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ತಾಲೂಕು ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಗುರುವಾರದಂದು ‘ವಿಶೇಷ ಚೇತನರ’ ಕುಂದು ಕೊರತೆ ಸಭೆಯನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಅವರು ವಿಶೇಷ ಚೇತನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಆಯೋಜಿಸುವಂತೆ ಸೂಚಿಸಿದರು.
ವಿಶೇಷ ಚೇತನರ ಅಧಿನಿಯಮ ೧೯೯೫ರ ಕಾಯಿದೆಯಡಿ ವಿಶೇಷ ಚೇತನರಿಗೆ ನೀಡಬೇಕಾದ ಸೌಲಭ್ಯಗಳು, ಅನುದಾನ ಮೀಸಲು ಬಳಕೆ, ಸಬಲೀಕರಣಕ್ಕೆ ತಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟವಾಗಿ ತಿಳಿಸಿದೆ. ಆದರೆ, ಕಾಯಿದೆ ಕುರಿತು ಬಹುತೇಕ ಎಲ್ಲ ಅಧಿಕಾರಿಗಳಿಗೆ ಅರಿವಿಲ್ಲದಿರುವುದು ಕಂಡು ಬಂದಿದೆ. ಅನುದಾನದಲ್ಲಿ ಶೇ ೫ರಷ್ಟನ್ನು ವಿಶೇಷ ಚೇತನರ ಸಬಲೀಕರಣಕ್ಕೆ ಮೀಸಲಿಡಬೇಕು. ಕ್ರಿಯಾ ಯೋಜನೆ ರೂಪಿಸಿ ಅನುದಾನವನ್ನು ಸದ್ಬಳಕೆ ಮಾಡಿಕೊಡಬೇಕು ಎಂದು ಎಂಆರ್‌ಡಬ್ಲೂ ಚಂದ್ರಕಾಂತ ಸೂರ್ಯಗಾಂವರವರು ಹೇಳಿದರು.
ಬೇಡಿಕೆಗಳು: ಸಭೆಯಲ್ಲಿ ವಿಶೇಷ ಚೇತನರು ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದು ತಾವು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಅಳಲು ತೋಡಿಕೊಂಡರು.
ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ವಿಶೇಷ ಚೇತನರ ಕುಂದು ಕೊರತೆ ಸಭೆ ಆಯೀಜಿಸಬೇಕು. ವಿಶೇಷ ಚೇತನರ ಯುಡಿಐಡಿ ಕಾರ್ಡ ಕ್ಯಾಂಪ ತಿಂಗಳಿಗೊಮ್ಮೆಯಾದರೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಬೇಕು. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಅವಶ್ಯಕತೆ ಇರುವ ಅರ್ಹರಿಗೆ ಮಾತ್ರ ನೀಡಬೇಕು. ಸರಕಾರಿ ಕಟ್ಟಡಗಳಲ್ಲಿ ರಾರಯಂಪ್ ಅಳವಡಿಸಬೇಕು. ಅಂಗವಿಕಲರಿಗೆ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಬೇಕು. ನಮ್ಮವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಪಡಿತರ ವಿತರಣೆಯಲ್ಲಿ ನಮಗೆ ಮೊದಲ ಆದ್ಯತೆ ನೀಡಬೇಕು. ಬಸ್‌ಗಳಲ್ಲಿ ವಿಶೇಷ ಚೇತನರಿಗೆ ಮೀಸಲಿರುವ ಆಸನಗಳನ್ನು ವಿಶೇಷ ಚೇತನರಿಗೆ ಒದಗಿಸಲು ನಿರ್ವಾಹಕರು ನೆರವಾಗಬೇಕು. ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಶೇಷ ಚೇತನರ ಸ್ಕಾಲರ್ ಸೀಪ್ ಒದಗಿಸಬೇಕು. ಕಂದಾಯ, ಹೆಸ್ಕಾಂ, ಸಹಕಾರಿ ಸಂಘಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಚೇತನರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು, ಎಂಆರ್‌ಡಬ್ಲೂ, ವಿಆರ್‌ಡಬ್ಲೂ, ವಿಶೇಷ ಚೇತನರು ಸೇರಿದಂತೆ ಇತರರು ಉಪಸ್ಥಿತರಿದ್ದರು.

