– ✍️ ವಿಜಯಾ ನಾಯ್ಕ
ಉದಯರಶ್ಮಿ ದಿನಪತ್ರಿಕೆ
ನೀನಿರದ ಮನೆಯಲ್ಲಿ ದೀಪದ ಬೆಳಕಿಲ್ಲ
ಮುಡಿದ ಮಲ್ಲಿಗೆ ಹೂ ಬಾಡುತಿದೆ ನಲ್ಲ
ಬೆಳಗಿಗೂ ಬೈಗಿಗೂ ಅಂತರವೆ ನನಗಿಲ್ಲ
ಹೆಜ್ಜೆ ಸದ್ದಿನ ಗುಂಗಿನಲಿ ಮೈಮರೆತೆನಲ್ಲ
ಮನೆ ಮನಗಳಲಿ ಏಕಾಂತ ಬಿಗು ಮೌನ
ಬೀಸೋ ತಂಗಾಳಿಗೆ ಸ್ವಲ್ಪವೇ ತುಂಟತನ
ಮುಂಗುರುಳ ಸವರಿ ನೇವರಿಸಿ ಕದಪು
ಕ್ಷಣ ಕ್ಷಣಕ್ಕೂ ತಂದಿದೆ ನಿನ್ನ ಸಿಹಿ ನೆನಪು
ಮನದ ಹೊಸ್ತಿಲಲಿ ಹಾಕಿರುವೆ ರಂಗೋಲಿ
ಸಿಂಗರಿಸಿ ಕಾದಿರುವೆ ಒಲವ ಹೂಗಳ ಚೆಲ್ಲಿ
ಒಲವೇ ಹೀಗೇಕೆ ನನ್ನಲ್ಲಿ ನಿನ್ನೀ ಬಿಗುಮಾನ
ಮುನಿಸು ತರವೇ, ಬಂದು ಬಿಡು ಇನ್ನೇಕೆ ಮೌನ