ಕವನ
– ಶಾಂತಿ ಕಾರಂತ್
ಉದಯರಶ್ಮಿ ದಿನಪತ್ರಿಕೆ
ನೀಲ ಮೇಘಗಳು ಮಧುರ ಮೈತ್ರಿಯಲಿ
ಭುವಿಯ ಸಾಂಗತ್ಯ ಬಯಸಿ ಧರೆಗಿಳಿದಂತಿತ್ತು
ವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿ
ಹಬ್ಬದ ವಾತಾವರಣ ಕಂಗಳ ತುಂಬಿತ್ತು
ಹೊರಟಿಹುದು ಮಿಂಚಿನುತ್ಸವ ಬಾನೂರಲಿ
ಹಸಿರುಡುಗೆಯಲಿ ಇಳೆ ಸಿಂಗರಿಸಿಕೊಂಡಂತಿತ್ತು,
ನಾಚಿಕೆಯ ಕೆಂಪು ಛಾಯೆಯ ಹೊಳಪು ಕೆನ್ನೆಯಲಿ.
ಮಳೆಬಿಲ್ಲು ಭೂರಮೆಯ ಶಿರವ ಅಲಂಕರಿಸಿತ್ತು.
ನಲ್ಲೆಯು ಬಸವಳಿದು ಕಾದಿಹಳು ವಿರಹದಲಿ
ಮನದ ಬಳ್ಳಿಯಲಿ ಪ್ರೀತಿಯ ಹೂ ಅರಳಿತ್ತು
ಇನಿಯನಾಗಮನಕೆ ಅವನಿ ತವಕಿಸಿಹಳಿಲ್ಲಿ,
ಪ್ರೇಮರಾಗ ಒಲಿದ ಹೃದಯಗಳ ಹಾಡಾಯಿತು.