ವೀಣಾಂತರಂಗ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ – ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಈ ಜಗತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಅವರು ಯಾರು, ಅವರು ಹೇಗಿರಬೇಕು, ಅವರು ಹೇಗೆ ಬದುಕಬೇಕು ಎಂಬುದನ್ನು ನಿರಂತರವಾಗಿ ಭೋದಿಸಲಾಗುತ್ತದೆ. ಹೆಣ್ಣು ಮಕ್ಕಳನ್ನು ಅವರಿರುವಂತೆಯೇ ಸ್ವೀಕರಿಸುವ ಮನಸ್ಥಿತಿಯನ್ನು ನಮ್ಮ ಸಮಾಜ ಬೆಳೆಸಿಕೊಳ್ಳಬೇಕು. ಮನೋ ದೈಹಿಕವಾಗಿ ಹೆಣ್ಣುಮಕ್ಕಳನ್ನು ಗಟ್ಟಿಗಿತ್ತಿಯರನ್ನಾಗಿ ಬೆಳೆಸುವ, ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದುವಂತೆ ಪ್ರಸ್ತುತ ದಿನಮಾನದ ಅವಶ್ಯಕತೆಯಾಗಿದೆ.
ಬದ್ಧತೆಯ ಜೊತೆ ಜೊತೆಗೆ ಧೈರ್ಯ, ಆತ್ಮವಿಶ್ವಾಸ ಭಾವನಾತ್ಮಕ ಜಾಣ್ಮೆ, ತಾಳ್ಮೆ ಮತ್ತು ತಮ್ಮ ನಿರ್ಧಾರಗಳಲ್ಲಿ ಸ್ಪಷ್ಟತೆಯನ್ನು ಹೊಂದಿದ್ದು ಜಗತ್ತನ್ನು ಎದುರಿಸುವ ಛಾತಿಯನ್ನು ಹೆಣ್ಣು ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಪ್ರಾಚೀನ ಕಾಲದಿಂದಲೂ ಹೆಣ್ಣು ಮಕ್ಕಳು ತಾಳ್ಮೆ, ಕೌಟುಂಬಿಕ ಪ್ರೀತಿ, ಶ್ರದ್ಧೆಯನ್ನು ಹೊಂದಿದ್ದು ಸಮಯ ಬಂದಾಗ ಧೈರ್ಯ, ಸಾಹಸ ಮತ್ತು ದಿಟ್ಟತನದ ಪ್ರತೀಕವಾಗಿ ಬೆಳೆದಿದ್ದಾರೆ.
ಹೆಣ್ಣುಮಕ್ಕಳನ್ನು ಕುಟುಂಬದ ಮರ್ಯಾದೆಯನ್ನು ಕಾಪಾಡುವ ಹೆಸರಿನಲ್ಲಿ ಹತ್ತಿಕ್ಕಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿಯ ಉಳಿಯುವಿಕೆಗೆ ಅಗತ್ಯವಾದ ಮೌಲ್ಯಗಳು ಮತ್ತು ಸಾಮಾಜಿಕ ಸಂಬಂಧಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕಾದ ಅವಶ್ಯಕತೆ ಇದೆ.
21ನೇ ಶತಮಾನದಲ್ಲಿನ ಯುವತಿಯರು ಎದುರಿಸುತ್ತಿರುವ ವಿವಿಧ ರೀತಿಯ ತೊಂದರೆಗಳಿಗೆ ಕಾರಣ ಅವರ ಬದುಕಿನ ಎಲ್ಲಾ ನಿರ್ಣಯಗಳನ್ನು ಪಾಲಕರೇ ತೆಗೆದುಕೊಳ್ಳುತ್ತಿರುವುದು ಒಂದೆಡೆಯಾದರೆ,ಎಲ್ಲರನ್ನೂ ಧಿಕ್ಕರಿಸಿ ನಾನೇ ನನ್ನ ಬದುಕಿನ ನಿರ್ಣಯಗಳನ್ನು ಕೈಗೊಳ್ಳಬಲ್ಲೆ ಎಂದು ಬದುಕಿನಲ್ಲಿ ತೊಂದರೆಗಳನ್ನು ಅನುಭವಿಸುವ ಹೆಣ್ಣು ಮಕ್ಕಳು ಮತ್ತೊಂದು ಕಡೆ. ಅನುಭವ, ಸೂಕ್ತ ಸಲಹೆ ಮತ್ತು ಸಹಕಾರಗಳ ಬೆಂಬಲದೊಂದಿಗೆ ಬೆಳೆದ ಹೆಣ್ಣು ಮಕ್ಕಳು ತಮ್ಮ ಬದುಕಿನ ಚುಕ್ಕಾಣಿಯನ್ನು ತಾವೇ ಹಿಡಿದು ಸಮರ್ಥವಾಗಿ ನಿಭಾಯಿಸುತ್ತಾರೆ.
ಅಂತಹ ಹೆಣ್ಣು ಮಕ್ಕಳನ್ನು ಬೆಳೆಸಲು ಕೆಲವು ಸಲಹೆಗಳು ಇಂತಿವೆ.
- ಪಾಲಕರು ಮತ್ತು ಹೆಣ್ಣು ಮಕ್ಕಳ ನಡುವೆ ಒಳ್ಳೆಯ ಭಾವನಾತ್ಮಕ ಬಾಂಧವ್ಯವನ್ನು ಹೊಂದಿರಬೇಕು. ಕುಟುಂಬದ ಸದಸ್ಯರೊಂದಿಗೆ ತನ್ನ ಮನದ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಬೇಕು. ತಮ್ಮ ಒಳ ಮನದ ಯೋಚನೆಗಳು, ತಾಕಲಾಟಗಳನ್ನು ಹೇಳಿಕೊಳ್ಳುವ ಹೆಣ್ಣು ಮಕ್ಕಳು ಪಾಲಕರೊಂದಿಗೆ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದು ನಂಬಿಕೆ ಮತ್ತು ಪರಸ್ಪರ ಗೌರವ ಭಾವನೆಯನ್ನು ತಾಳುತ್ತಾರೆ.
- ಪಾಲಕರು ತಮ್ಮ ಹೆಣ್ಣು ಮಕ್ಕಳಲ್ಲಿ ದೃಢತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಬೇಕು. ಸಶಕ್ತತೆ ಮತ್ತು ಸಕಾರಾತ್ಮಕತೆಯನ್ನು ಹೊಂದಿರುವ ಹೆಣ್ಣುಮಕ್ಕಳು ವೈಯುಕ್ತಿಕ ಮೌಲ್ಯವನ್ನು ಕಾಪಾಡಿಕೊಳ್ಳುವರು. ಆಕೆಯ ಆತ್ಮವಿಶ್ವಾಸದ ಮೂಲ ಸೆಲೆ ಪಾಲಕರ ನಂಬಿಕೆ ಮತ್ತು ವಿಶ್ವಾಸಗಳಾಗಿರಬೇಕು. ತಮ್ಮ ಹೆಣ್ಣು ಮಕ್ಕಳಲ್ಲಿರುವ ವಿಶಿಷ್ಟ ಗುಣಗಳು,ಮೌಲ್ಯಗಳನ್ನು ಸಕಾರಾತ್ಮಕ ಪ್ರಶಂಸೆಯ ಮೂಲಕ ಉತ್ತೇಜಿಸಬೇಕು. ಇದು ಹೆಣ್ಣುಮಕ್ಕಳಲ್ಲಿ ಬದುಕಿನಲ್ಲಿ ಬರುವ ಯಾವುದೇ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಆತ್ಮವಿಶ್ವಾಸವನ್ನು, ಸ್ಥೈರ್ಯವನ್ನು ಬೆಳೆಸುತ್ತದೆ.
- ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಮಾದರಿಯಾಗುವ ರೋಲ್ ಮಾಡೆಲ್ ಗಳ ಅವಶ್ಯಕತೆಯಿದೆ. ನಿಮ್ಮ ಬದುಕನ್ನು ಪ್ರಭಾವಿಸುವ ಬೇರೆ ವ್ಯಕ್ತಿಗಳಂತೆ ನೀವು ನಿಮ್ಮ ಮಕ್ಕಳಿಗೆ ಮತ್ತು ಇತರರಿಗೆ ಸ್ಪೂರ್ತಿಯಾಗುವಂತೆ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ. ಇನ್ನಿತರ ಹೆಣ್ಣು ಮಕ್ಕಳು ಜೀವನದಲ್ಲಿ ಮುಂದೆ ಬರಲು ಸರ್ವ ರೀತಿಯ ಸಹಾಯ ಸಹಕಾರಗಳನ್ನು, ಮಾನಸಿಕ ಬೆಂಬಲವನ್ನು
ನೀಡಿ. - ಪಾಲಕರಾಗಿ ನಿಮ್ಮ ಮಕ್ಕಳ ಬೆಳವಣಿಗೆಯಲ್ಲಿ ನಿಮ್ಮ ದಾಂಪತ್ಯ ಜೀವನ ಹೆಚ್ಚು ಪ್ರಭಾವ ಬೀರುತ್ತದೆ. ದಂಪತಿಗಳಿಬ್ಬರೂ ಪರಸ್ಪರ ಗೌರವ, ನಂಬಿಕೆ, ಸಹಕಾರ ಮನೋಭಾವವನ್ನು ಹೊಂದಿರಬೇಕು.
- ಎಷ್ಟೋ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಅವಾಸ್ತವಿಕ ಸಂಗತಿಗಳು ಯುವ ಪೀಳಿಗೆಯ ದಾರಿ ತಪ್ಪಿಸುತ್ತವೆ. ಫೋಟೋಗಳನ್ನು ಎಡಿಟ್ ಮಾಡುವ, ಹೆಣ್ಣು ಮಕ್ಕಳ ಅಕೌಂಟನ್ನು ಹ್ಯಾಕ್ ಮಾಡುವ, ಶತಾಯಗತಾಯ ಅವರ ಹೆಸರು ಕೆಡಿಸಲು ಮಾಡಬಹುದಾದ ಎಲ್ಲ ರೀತಿಯ ಪ್ರಯತ್ನಗಳಿಗೆ ಆಕೆ ಈಡಾಗಬಹುದಾದ ಸಾಧ್ಯತೆಯಿದ್ದು, ತನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತು ಪಡಿಸುವ ಅನಿವಾರ್ಯತೆಗಳು ಉಂಟಾಗಬಹುದು. ಆದ್ದರಿಂದ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಎಷ್ಟರಮಟ್ಟಿಗೆ ಜವಾಬ್ದಾರಿಯುತರಾಗಿ ತೊಡಗಿಸಿಕೊಳ್ಳಬೇಕು ಎಂಬುದರ ಅರಿವನ್ನು ಮೂಡಿಸಬೇಕು. ಭ್ರಮಾ ಜಗತ್ತಿನ ಕಟು ವಾಸ್ತವ ಸತ್ಯಗಳ ಅನಾವರಣ ಮಾಡಿಕೊಡಬೇಕು.
- ಮಕ್ಕಳೊಂದಿಗೆ ಮುಕ್ತ ಮತ್ತು ಸೌಹಾರ್ದಯುತ ಮಾತುಕತೆಗೆ ಅವಕಾಶ ಮಾಡಿಕೊಡಬೇಕು. ಹೆಣ್ಣು ಮಕ್ಕಳು ತಮ್ಮ ಶಾಲೆ ಕಾಲೇಜು ಸ್ನೇಹಿತರು, ತಾನು ಕಾಣುವ ಎಲ್ಲ ವಿಷಯಗಳನ್ನು ಮುಕ್ತವಾಗಿ ಪಾಲಕರ ಬಳಿ ಹೇಳಿಕೊಳ್ಳುವಂತಹ ವಾತಾವರಣ ಮನೆಯಲ್ಲಿ ಇದ್ದು ತನ್ನ ದೇಹ, ಮನಸ್ಸು ಮತ್ತು ಭಾವನೆಗಳ ಕುರಿತಾದ ವೈಯುಕ್ತಿಕ ವಿಷಯಗಳನ್ನು ಕೂಡ ಅಷ್ಟೇ ಸರಳವಾಗಿ ಹೇಳಿಕೊಳ್ಳುವಂತಹ ಸ್ವಾತಂತ್ರ್ಯ, ನಿರ್ಭಿಡೆ ಮತ್ತು ಪಾಲಕರಲ್ಲಿ ಭರವಸೆ ಅವಳಲ್ಲಿ ಮೂಡುವುದಕ್ಕೆ ಒತ್ತು ನೀಡಿ.
- ಸಾಮಾಜಿಕ ಅವಘಡಗಳು, ಆಕಸ್ಮಿಕಗಳು, ಗಂಡು ಹೆಣ್ಣಿನ ಸಂಬಂಧದ ವಿಷಮ ಪರಿಸ್ಥಿತಿಗಳನ್ನು ಹೆಣ್ಣು ಮಕ್ಕಳು ನೋಡಿರುತ್ತಾರೆ ಅಲ್ಲವೇ? ಲೈಂಗಿಕತೆಯ ಕುರಿತಾದ ತಪ್ಪು ಕಲ್ಪನೆಗಳನ್ನು ದೂರವಾಗಿಸಿಕೊಳ್ಳಲು ಎಷ್ಟೋ ಬಾರಿ ಅವರು ಕೇಳುವ ಪ್ರಶ್ನೆಗಳು ಕೊಂಚ ಮುಜುಗರವನ್ನು ತಂದರೂ ಕೂಡ ಆಕೆಗೆ ಮತ್ತು ನಿಮಗೆ ಸಹ್ಯವೆನಿಸುವ ರೀತಿಯಲ್ಲಿ ನಿಮಗೆ ಗೊತ್ತಿದ್ದುದನ್ನು ಪ್ರಾಮಾಣಿಕವಾಗಿ ವಿವರಿಸಿ ತಿಳಿ ಹೇಳಿರಿ. ಇದು ಹೆಣ್ಣು ಮಕ್ಕಳು ಅನ್ಯಲಿಂಗಿಗಳೊಂದಿಗೆ ತಾವು ಹೇಗೆ ವರ್ತಿಸಬೇಕು ಎಂಬುದರ ಕುರಿತು ಸ್ಪಷ್ಟ ಮತ್ತು ಸೂಕ್ತ ತಿಳುವಳಿಕೆಯನ್ನು ನೀಡುತ್ತದೆ.
- ನಂಬಿಕೆ ಮತ್ತು ಮೌಲ್ಯಗಳ ಶಕ್ತಿಯನ್ನು ಮಕ್ಕಳಿಗೆ ಪರಿಚಯಿಸಬೇಕುಷ್ಟೇ ಅಲ್ಲದೆ ಅವುಗಳನ್ನು ಪಾಲಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಪ್ರಭಾವಶಾಲಿಯಾದ ಭದ್ರಬುನಾದಿಯನ್ನು ಹಾಕಬೇಕು. ಮೌಲ್ಯಗಳು ಬದುಕಿನಲ್ಲಿ ಉತ್ತಮ ನಿರ್ಣಯವನ್ನು ಕೈಗೊಳ್ಳುವಲ್ಲಿ ನಿಖರ ದಿಕ್ಸೂಚಿಯಾಗಿರುತ್ತವೆ. ಆತ್ಮಸ್ಥೈರ್ಯ ಮತ್ತು ಆಧ್ಯಾತ್ಮಿಕತೆಯ ಭಾವವನ್ನು ಒಳಗೊಂಡ ಮೌಲ್ಯಗಳು ಆಕೆಯಲ್ಲಿ ಇನ್ನಿಲ್ಲದ ಆತ್ಮವಿಶ್ವಾಸವನ್ನು ಸೃಷ್ಟಿಸುತ್ತವೆ.
- ಒಂದು ಒಳ್ಳೆಯ ಆರೋಗ್ಯಯುತ ಬದುಕನ್ನು ಸಾಗಿಸಲು ಆರೋಗ್ಯಕರ ಹವ್ಯಾಸಗಳು ಅತ್ಯವಶ್ಯಕ.
ಉತ್ತಮ ಮನೋದೈಹಿಕ ಆರೋಗ್ಯವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಪೋಷಕಾಂಶಗಳುಳ್ಳ ಆಹಾರ, ನಿಯಮಿತ ವ್ಯಾಯಾಮ, ಒಳ್ಳೆಯ ನಿದ್ರೆ ನೆಮ್ಮದಿಯ ಬದುಕನ್ನು
ಹೆಣ್ಣು ಮಕ್ಕಳು ತಮ್ಮದಾಗಿಸಿಕೊಳ್ಳಬೇಕು. ಆರೋಗ್ಯ ಎಂದರೆ ರೋಗವಿಲ್ಲದ ಸ್ಥಿತಿ ಎಂದಲ್ಲ, ಅನಾರೋಗ್ಯವನ್ನು ದೂರ ಮಾಡುವುದು ಎಂದಲ್ಲ ಒಳ್ಳೆಯ ಮನೋ ದೈಹಿಕ ಆರೋಗ್ಯ, ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ, ಚಟುವಟಿಕೆಯ ಜೀವನ ಮತ್ತು ಬದುಕನ್ನು ಎದುರಿಸುವ ಉತ್ಸಾಹ ಹೊಂದಿರುವುದು ಆರೋಗ್ಯದ ಲಕ್ಷಣ.
ಇಂತಹ ಎಲ್ಲ ಆರೋಗ್ಯಕರ ಲಕ್ಷಣಗಳನ್ನು ಒಳಗೊಂಡಿರುವ ಆತ್ಮವಿಶ್ವಾಸದ ಖನಿ ಹೆಣ್ಣು ಮಕ್ಕಳಾಗಿರಲಿ ಎಂದು ಹಾರೈಸುವ..