ಸಾವಿಲ್ಲದ ಶರಣರು
ಲೇಖನ
– ಡಾ.ಶಶಿಕಾಂತ.ಪಟ್ಟಣ
ರಾಮದುರ್ಗ, ಮೊ:9552002338
ಉದಯರಶ್ಮಿ ದಿನಪತ್ರಿಕೆ
ಹನ್ನೆರಡನೆಯ ಶತಮಾನವು ಭಾರತದಲ್ಲಿ ಇತಿಹಾಸ ನಿರ್ಮಿಸಿದ ಸುವರ್ಣ ಯುಗವಾಗಿದೆ. ಭಾರತೀಯ ಸಂಸ್ಕೃತಿಗೆ ಭಿನ್ನವಾಗಿ ದಲಿತರು, ಅಸ್ಪ್ರಶ್ಯರು ಮಹಿಳೆಯರು, ಶೋಷಿತರು ಬಸವಣ್ಣನವರ ನೇತೃತ್ವದಲ್ಲಿ ವಚನ ಚಳುವಳಿಯನ್ನು ಆರಂಭಿಸಿದರು . ವರ್ಗ ವರ್ಣ ಆಶ್ರಮ ಲಿಂಗ ಭೇದ ಕಿತ್ತೆಸೆದು, ಸರ್ವಕಾಲಿಕ ಸಮಾನತೆ ಸಾರುವ ವ್ಯಕ್ತಿ ಮೂಲಕ ಸಮಾಜ ಕೇಂದ್ರಿತ ಪರಿವರ್ತನೆಗೆ ಶರಣರು ಹಾತೊರೆದರು. ಇಂತಹ ಒಂದು ಅಪೂರ್ವ ಕ್ರಾಂತಿ ಕರ್ನಾಟಕದ ನೆಲದಲ್ಲಿ ಜರುಗಿ ಹೋಯಿತು.
ಸತ್ಯ ಸಮತೆ ಶಾಂತಿ ಪ್ರೀತಿಗೆ ಶರಣರು ತಮ್ಮನ್ನೇ ಬಲಿದಾನ ಮಾಡಿಕೊಂಡರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ದಲಿತ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಎಂಬ ಪುಣ್ಯ ಸತಿ ಪತಿಗಳು ಕಲ್ಯಾಣದ ಮಹಾ ಮನೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.
ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ. ದಂಪತಿಗಳು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರೇಶ್ವರ ಗ್ರಾಮದವರು. ಇದನ್ನು ಗುಡುಗುಂಟಿ ಅಮರೇಶ್ವರ ಎಂತಲೂ ಕರೆಯುತ್ತಾರೆ.
ಬಡ ದಂಪತಿಗಳು ಬಸವಣ್ಣನವರ ಕೀರ್ತಿ ವಾರ್ತೆಗೆ ಮರುಳಾಗಿ ಕಲ್ಯಾಣದ ಶರಣ ಚಳುವಳಿಯಲ್ಲಿ ಪಾಲ್ಗೊಳ್ಳಲು ಅವರಿಬ್ಬರೂ ಕಲ್ಯಾಣಕ್ಕೆ ಬರುತ್ತಾರೆ.
“ಆಯ” ಎಂದರೆ ಕೂಲಿ. ಇಲ್ಲಿಯವರೆಗೆ ಎಲ್ಲ ವಚನ ಸಂಪುಟ, ಶರಣ ಚರಿತಾಮೃತ ,ಶರಣರ ಚರಿತ್ರೆ ಶೂನ್ಯ ಸಂಪಾದನೆಯಲ್ಲಿ , ಆಯ ಅಂದರೆ – ಆಯ್ದುಕೊಳ್ಳುವುದು ಅಂತ ದಾಖಲೆಯಾಗಿದೆ. ಅದು ಸಂಪೂರ್ಣ ತಪ್ಪು. ಕಾಯಕಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಕೊಟ್ಟವರು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ ಶರಣ ದಂಪತಿಗಳು. ರಸ್ತೆಯಲ್ಲಿ ಬಿದ್ದ ಕಾಳುಗಳನ್ನು ಹೆಕ್ಕಿ ಆಯ್ದು ಅವುಗಳನ್ನು ಶುದ್ಧೀಕರಿಸಿ ಪ್ರಸಾದ ಮಾಡುತ್ತಿದ್ದರು ಎನ್ನುವುದು ಶುದ್ಧ ತಪ್ಪು ಕಲ್ಪನೆ.
“ಆಯ”- ಅದು ಕೂಲಿ ಮಾಡುವ ಸತ್ಯ ಶುದ್ಧ ಕಾಯಕವಾಗಿತ್ತು. ಕೂಲಿಗಾಗಿ ಕಾಳು ಅಂದಿನ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿತ್ತು.
ಆಯ್ದಕ್ಕಿ ಲಕ್ಕಮನ ಒಟ್ಟು ವಚನಗಳು 25 ಕಂಡು ಬರುತ್ತವೆ. ಲಕ್ಕಮನ ವಚನಗಳಲ್ಲಿ ಕಾಯಕ ತತ್ವನಿಷ್ಠತೆ ಸಮಯ ಪ್ರಜ್ಞೆಯಂತಹ ದಿಟ್ಟ ಗುಣಗಳನ್ನು ಕಾಣಬಹುದು. ಸಂಖ್ಯಾತ್ಮಕವಾಗಿ ಕೇವಲ 25 ವಚನಗಳಿದ್ದರೂ ಮೌಲಿಕವಾಗಿ ತುಂಬಾ ಅರ್ಥಪೂರ್ಣವಾಗಿವೆ. ಕಲ್ಯಾಣ ಕ್ರಾಂತಿಯ ಆಶಯಗಳನ್ನು ಹೊತ್ತ ನೈಜ ವಿಚಾರಗಳು ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಕಾಣಬಹುದು. ಆಯ್ದಕ್ಕಿ ಲಕ್ಕಮ್ಮ ಮಹಾ ಮನೆಯಲ್ಲಿ ಅಕ್ಕಿ ಬೇಳೆ ಕಾಳು ಹಸನು ಮಾಡುವ ಕಾರ್ಯದಲ್ಲಿ ನಿರತಳಾದ ಮಹಾ ಶರಣೆ. ಲಕ್ಕಮನ ವಚನಾಂಕಿತ “ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ “
ಮಾರಯ್ಯ ದoಪತಿಗಳಿಬ್ಬರೂ ಕಾಯಕ ನಿಷ್ಠೆಯುಳ್ಳವರಾಗಿದ್ದರು. ಅವರು ಕಾಯಕ ಸಿದ್ಧಾoತಕ್ಕೆ ಅಪಾರವಾದ ಮಹತ್ವ ಮತ್ತು ಕೊಡುಗೆಯನ್ನು ಕೊಟ್ಟವರಾಗಿದ್ದಾರೆ. ಈ ದoಪತಿಗಳಿಗೆ ಗುರು ದರ್ಶನ, ಲಿoಗ ಪೂಜೆ ಮತ್ತು ಜoಗಮ ದಾಸೋಹಗಳಿಗಿoತಲೂ ಕಾಯಕ ತತ್ವವೇ ಮುಖ್ಯವಾಗಿತ್ತು. ಶರಣ ಸoಸ್ಕೃತಿಯ ತತ್ವವಾದ ದುಡಿಮೆಗೆ ಪ್ರಾಶಸ್ತ್ಯ ನೀಡಿ “ಕಾಯಕವೇ ಕೈಲಾಸ” ಎಂಬ ಮಾತನ್ನು ನಡೆಯಿಸಿಕೊoಡು ಬoದoಥ ಆದರ್ಶವಾದಿಗಳು. ಅವರು ಬರೆದ ಈ ವಚನವು ಕಾಯಕದ ಬಗ್ಗೆ ಬರೆದ ಶಾಸನದoತಿದೆ.
ಒಮ್ಮೆ ಆಯ್ದಕ್ಕಿ ಮಾರಯ್ಯನವರು ಹೆಚ್ಚಿನ ಕಾಯಕ ಕೂಲಿ ಮಾಡಿ ಹೆಚ್ಚಿನ ಅಕ್ಕಿಯನ್ನು ಆಯ್ದಕ್ಕಿ ಮಾರಯ್ಯನವರು ಮನೆಗೆ ತಂದಾಗ ಅದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡ ಲಕ್ಕಮ್ಮಳು ಮಾರಯ್ಯನವರನ್ನು ಬಾಗಿಲ ಹೊಸ್ತಿಲಿನಲ್ಲಿಯೆ ತಡೆದಳು.
ಅವಳ ಸಾತ್ವಿಕ ಕೋಪ ಎಷ್ಟಿತ್ತೆಂದು ಈ ವಚನದ ಮೂಲಕ ತಿಳಿದುಕೊಳ್ಳಬಹುದು.
ಆಶೆಯೆಂಬುದು ಅರಸಿಂಗಲ್ಲದೆ
ಶಿವ ಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ.
ಅರಸಿಗೆ ಇರುವ ಆಶೆ ಶಿವ ಭಕ್ತರಿಗೇಕೆ ಎಂದು ಪ್ರಶ್ನಿಸಿ ಸಮಕಾಲೀನ ಶರಣೆಯರಲ್ಲಿ ಕಾಯಕ ದಾಸೋಹದ ಪ್ರತೀತಿ ಪಡೆದಳು ಲಕ್ಕಮ್ಮ. ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ. ಕೇವಲ ಒಂದು ದಿನದ ಹಸಿವಿಂಗೆ ಬಳಲುವ ಜೀವಗಳು ಎಂದು ಆಧ್ಯಾತ್ಮದ ಸಾಧನೆ ಮಾಡಲಾಗದು ಎಂದು ಬುದ್ಧಿ ಹೇಳುತ್ತಲೇ ಲಕ್ಕಮ್ಮ, ಹಾಗೇನಾದರು ಆಶೆ ಪಟ್ಟಲ್ಲಿ ಅದರಿಂದ ನಾವು ಸಮಾಜ ಮುಖಿ ಲಿಂಗಮುಖಿಯಿಂದ ದೂರವಾಗುತ್ತೇವೆ ಎಂದೆನ್ನುತ್ತಾಳೆ. ಅದು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲಿಸುವ ದೂರಾಗತ್ತದೆ ಎಂದು ಗಂಡ ಮಾರಯ್ಯನನ್ನು ಎಚ್ಚರಿಸುತ್ತಾಳೆ.
ಆದರೆ ಮಾರಯ್ಯ ಒಮ್ಮೆ ಇದನ್ನು ಪ್ರತಿರೋಧಿಸಿ ತಾನು ದುಡಿದು ತರುವ ವಸ್ತುವಿನ ಮೇಲೆ ತನ್ನ ಸಂಪೂರ್ಣ ಅಧಿಕಾರವಿದೆಯೆಂದು ನಂಬಿ ಹೆಂಡತಿಗೆ ಹೇಳಲು ಹೋದಾಗ ಲಕ್ಕಮ್ಮ ಕುಪಿತಗೊಂಡು,
ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ,
ಇದು ನಿಮ್ಮ ಮನವೊ , ಬಸವಣ್ಣನನ ಅನುಮಾನದ ಚಿತ್ತವೋ?
ಈ ಮಾತು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲದ ಬೋನ
ಅಲ್ಲಿಯೇ ಸುರಿದು ಬನ್ನಿರಿ ಮಾರಯ್ಯ.
ಈ ಮೇಲಿನ ಮಾತನ್ನು ಕೇಳಿದಾಗ ಮಾರಯ್ಯನವರಿಗೂ ತಮ್ಮ ತಪ್ಪಿನ ಅರಿವಾಗಿ ತಾವು ಬಸವಣ್ಣನವರ ಮನೆಗೆ ಬಂದು ಅಕ್ಕಿಯನ್ನು ತಿರುಗಿಸುತ್ತಾರೆ.
ಬಸವಣ್ಣನವರು ವ್ಯಾಕುಲಗೊಂಡು ಇದನ್ನು ಮರಳಿ ಒಯ್ಯಲು ಮಾರಯ್ಯನವರಿಗೆ ವಿನಂತಿಸುತ್ತಾರೆ.
ಪ್ರಾಯಶ ಒಬ್ಬ ದಿನಗೂಲಿ ಮಾರಯ್ಯನವರು ಅಂದಿನ ಬಹುದೊಡ್ಡ ರಾಜ್ಯದ ಪ್ರಧಾನ ಮಂತ್ರಿ ಪದವಿಯಲ್ಲಿದ್ದ ಬಸವಣ್ಣನವರಿಗೆ ಈ ರೀತಿಯಾಗಿ ಪ್ರಶ್ನಿಸಿ ತಾನು ಗಳಿಸಿದ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯನ್ನು ಮರುಕಳಿಸಿ ಬಂದ ಅತ್ಯಂತ ವಿರಳ ಘಟನೆ ನೋಡಿದರೆ ಕಾಯಕ ಮತ್ತು ದಾಸೋಹಕ್ಕೆ ಎಷ್ಟು ಮಹತ್ವವನ್ನು
ಶರಣರು ನೀಡಿದ್ದರು ಎಂದು ಗೊತ್ತಾಗುತ್ತದೆ.
ಬಸವಣ್ಣನವರು ಈ ವಿಷಯವನ್ನು ಅನುಭಾವ ಮಂಟಪಕ್ಕೆ ಒಯ್ಯುತ್ತಾರೆ. ಕಾರಣ ದುಡಿದ ಶ್ರಮಕ್ಕೆ ತಕ್ಕ ಆದಾಯವನ್ನು ನೀಡಿ ಆದಾಯವಾದ ಅಕ್ಕಿಯನ್ನು ಕಳುಹಿಸಿಕೊಟ್ಟರೆ ಅದನ್ನು ವಿನಮ್ರವಾಗಿ ನಿರಾಕರಿಸುವ ಚಿಂತನೆ ಮಾಡಿದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ದಂಪತಿಗಳ ನಿಲುವನ್ನು ಬಸವಣ್ಣನವರು ಅನುಭಾವ ಮಂಟಪದಲ್ಲಿ ಪ್ರಶ್ನಿಸುತ್ತಾರೆ. ಅಲ್ಲಿ ಶರಣರ ಮತ್ತು ಜ್ಞಾನಿಗಳು ಅಲ್ಲಮರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸುತ್ತಾರೆ.
ಅಲ್ಲಿ ನೆರೆದಿದ್ದ ಜನರು ಶರಣರು ಅಮರಗಣಂಗಳು ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರ ವಿಚಾರಕ್ಕೆ ಹಾತೊರೆಯುತ್ತಾರೆ.
ಬಸವಣ್ಣನವರಿಗೆ ಹೆಚ್ಚಿನ ಅಕ್ಕಿಯನ್ನು ಮರುಳಿಸಿದ ಪ್ರಸಂಗವು ಆಶ್ಚರ್ಯ ಮತ್ತು ಕುತೂಹಲ ಮೂಡಿತ್ತು .
ಅಲ್ಲಮರು ಈ ವಿಷಯವನ್ನು ಆಯ್ದಕ್ಕಿ ಮಾರಯ್ಯನವರಿಗೆ ಪ್ರಶ್ನಿಸಲು ಮಾರಯ್ಯನವರು ಈ ರೀತಿಯಾಗಿ ಉತ್ತರಿಸುತ್ತಾರೆ.
ಗೆಜ್ಜಲು ಮನೆ ಮಾಡಿ ಸರ್ಪನಗಿಂಬಾದಂತೆ
ನಾನತ್ತಣ ದ್ರವ್ಯವ ತಂದು ಇತ್ತ ಮಾಡಿದಡೆ .
ನನಗಿನ್ನೆತ್ತಣ ಮುಕ್ತಿ ಅಮರೇಶ್ವರ ಲಿಂಗ !
ಗೆದ್ದಲು ಮನೆಯ ಮಾಡಿ ಸರ್ಪನಿಗೆ ಬಿಟ್ಟು ಕೊಟ್ಟಂತೆ ತಾನು ಸಮಾಜದಲ್ಲಿನ ಪ್ರತಿಯೊಬ್ಬರ ಆದಾಯದ ಕಣಕಣವನ್ನು ತಂದು ಪ್ರಸಾದವ ಮಾಡಿದರೆ ನನಗೆ ಮುಕ್ತಿ ಸಿಗಲು ಸಾಧ್ಯವೆ? ಎಂದು ನಯವಾಗಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ.
ತನ್ನ ನಿಲುವನ್ನು ತಿಳಿಸಲು ಅಲ್ಲಮರು ಲಕ್ಕಮನಿಗೆ ಕೇಳುತ್ತಾರೆ ಆಗ ಲಕ್ಕಮ್ಮ
ಗರ್ವದಿಂದ ಮಾಡಿದ ಭಕ್ತಿ ದ್ರವ್ಯದ ಕೇಡು :
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ :
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ :
ಧೃಢವಿಲ್ಲದ ಭಕ್ತಿ ಆದಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ .
ಇಂತಹ ದಿಟ್ಟ ನಿಲುವನ್ನು ಲಕ್ಕಮ್ಮ ಪ್ರಕಟಿಸುತ್ತಾಳೆ. ಗರ್ವದಿಂದ ಮಾಡಿದ ಭಕ್ತಿ ದ್ರವ್ಯಕ್ಕೆ ಕೇಡು ಆಸ್ತಿಗೆ ಹಾನಿ, ನಡೆಯಿಲ್ಲದ ನುಡಿಯು ಅರಿವಿನ ಹಾನಿ, ಕೊಡದೆ ತ್ಯಾಗಿ ಎನ್ನಿಸಿಕೊಳ್ಳುವವ ಮುಡಿಯಿಲ್ಲದೆ ಶೃಂಗಾರವ ಮಾಡಿಕೊಂಬಂತೆ ಇಂತ ದೃಢವಿಲ್ಲದವನ ಭಕ್ತಿಯು ಒಡೆದ ಮಡಿಕೆಯೊಳಗೆ ಸುಜಲವ ಹಾಕಿದಂತೆ ಎಂದು ವ್ಯಂಗ್ಯವಾಡುತ್ತಾಳೆ.
ಮುಂದುವರೆದು ಲಕ್ಕಮ್ಮಳು ಹೀಗೆ ವಾದಿಸುತ್ತಾಳೆ.
ಭಕ್ತನಿಗೆ ಬಡತನವುಂಟೆ ? ನಿತ್ಯಂಗೆ ಮರಣವುಂಟೆ ?
ಭಕ್ತರು ಬಡವರೆಂದು ಮತ್ತೊಂದ ಕೊಟ್ಟೆಹೆನೆಂದಡೆ ,
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ.
ಭಕ್ತನು ಎಂದೂ ಬಡವನಾಗುವದಿಲ್ಲ. ನಿತ್ಯ ಸಂಘರ್ಷಕ್ಕಿಳಿಯುವವ ಸಾಯುವದಿಲ್ಲ. ಭಕ್ತರು ಬಡವೆರೆಂದು, ಮತ್ತೊಂದು ವಸ್ತು ಕೊಟ್ಟಡೆ ಅದು ವ್ಯಕ್ತಿಯ ಸಾವು ಎಂದು ಲಕ್ಕಮ್ಮ ದಿಟ್ಟವಾಗಿ ಉತ್ತರಿಸುತ್ತಾಳೆ.
ಅಪ್ಪ ಬಸವಣ್ಣನವರು ಕಾಯಕವೇ ಕೈಲಾಸವಾದ ಕಾರಣ ಮಾರಯ್ಯನವರು ತಾವು ಮಾಡಿದ ಕೂಲಿಗೆ ತಮ್ಮ ಪಾಲಿನ ಆದಾಯವನ್ನು ಅವರು ಪಡೆಯಲೇ ಬೇಕು ಎಂದು ಒತ್ತಾಯಿಸುತ್ತಾರೆ.
ಆಗ ಲಕ್ಕಮ್ಮಳು
” ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ?
ಮುಂದೊಂದ ಕಲ್ಪಿಸದೆ ಹಿಂದೊಂದ ಭಾವಿಸದೆ ಸಲೆ ಸಂದಿದ್ದಾಗವೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವೆ ಕೈಲಾಸ.
ಸಮಾಜವು ಒಪ್ಪದ ಹೆಚ್ಚಿನ ಹಣ ಅಥವಾ ಆದಾಯ ಮತ್ತು ದವಸ ಧಾನ್ಯವನ್ನು ಪಡೆಯುವದು ಘೋರ ಪಾಪವೆಂದು ಹೇಳುತ್ತಲೇ ಕೈಲಾಸವೇನು ಕೈಕೂಲಿ ಮಾಡಿ ಸಂಪಾದಿಸಲು ಸಾಧ್ಯವೇ? ಸತ್ಯ ಶುದ್ಧವಾದ ಕಾಯಕದಿಂದ ಮಾಡಿ ಅಗತ್ಯದಷ್ಟೇ ಪಡೆದು ಸಮಾಜ ಸೇವೆ ಮಾಡಬೇಕೆಂಬುದು ಲಕ್ಕಮ್ಮನ ಪ್ರಬಲವಾದ ಮಂಡನೆ.
ಅದೇ ತತ್ವವನ್ನು ಮಾರಯ್ಯನವರು ಪ್ರತಿಪಾದಿಸುತ್ತಾರೆ.
ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು
ಕಾಯಕ ಸತ್ತು , ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲದೆ ಸದ್ಭಕ್ತನಿಗೆ.
ಆ ಗುಣ ಅಮರೇಶ್ವರ ಲಿಂಗಕ್ಕೆ ದೂರ.
ಒಂದು ವೃತ ಆಚರಣೆ ನೇಮವ ಮಾಡಿಕೊಂಡು ಅದನ್ನು ಈಡೇರಿಸಲು ಭಕ್ತರು ಮನೆಯ ಅಂಗಳಕ್ಕೆ ಹೋಗಿ ಕಾಯಕ ಕೊಂದು ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಾಗುವದಲ್ಲದೆ ಸದ್ಭಕ್ತನಿಗೆ ಇಂತಹ ಗುಣ ಅಮರೇಶ್ವರ ಲಿಂಗಕ್ಕೆ ದೂರ. ಸಮಾಜದಿಂದ ದೂರವಾಗುವ ಸಂಧರ್ಭವೆಂದು ಹೇಳುತ್ತಾನೆ.
ಇಂತಹ ಸುದೀರ್ಘ ಸಮಾಲೋಚನೆ ಇನ್ನೂ ಜೀವಂತವಿದ್ದಾಗಲೆ ಲಕ್ಕಮ್ಮಳು ಕುಪಿತಗೊಂಡು ತನ್ನ ಸಮಯ ಪ್ರಜ್ಞೆ ಮೆರೆಯುವ ಪ್ರಸಂಗವನ್ನು ತೋರುತ್ತಾಳೆ.
ಕಾಯಕವು ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ.
ಭಾವ ಶುದ್ಧವಾಗಿ ಮಹಾ ಶರಣ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾಡಬೇಕು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ
ಬೇಗ ಹೋಗು ಮಾರಯ್ಯ.
ಅನುಭವ ಮಂಟಪದಲ್ಲಿ ವೈಚಾರಿಕ ಚರ್ಚೆ ಗಂಭೀರವಾಗಿ ನಡೆದಾಗ ಲಕ್ಕಮ್ಮಳು ತನ್ನ ಪತಿ ಮಾರಯ್ಯನವರಿಗೆ ಸಮಯದ ಕಾಯಕದ ವೇಳೆಯ ಬಗ್ಗೆ ಜ್ಞಾಪಿಸುತ್ತಾಳೆ. ಇಂತಹ ವ್ಯರ್ಥವಾದ ಚರ್ಚೆ ಶ್ರಮಿಕರಿಗೆ ಸಲ್ಲದು. ಕಾಯಕ ಜೀವಿಗಳಾದ ನಾವು ಮೊದಲು ಕಾಯಕಕ್ಕೆ ಆಧ್ಯತೆ ಕೊಡಬೇಕು ಎಂದು ಹೇಳುತ್ತಾ, ತನ್ನ ಆಳುವ ಒಡೆಯನೆ ಇನ್ನೂ ಕಾಯಕಕ್ಕೆ ಹೋಗೋಣ ನಡೆ ಎಂದು ಬಿನ್ನವಿಸುತ್ತಾಳೆ.
ಕಲ್ಯಾಣ ಕ್ರಾಂತಿಯಲ್ಲಿ ಕಾಯಕ ಮತ್ತು ದಾಸೋಹಕ್ಕೆ ನಿಷ್ಠೆ ತೋರಿದ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮರು ನಿತ್ಯ ಕಾಯಕಯೋಗದ ಮೂಲಕ ಜಂಗಮ ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ. ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರು ಅಕ್ಕನಾಗಮ್ಮನ ಜೊತೆಗೆ ಬನವಾಸಿಯವರೆಗೆ ಹೋಗಿ ಅಲ್ಲಿಯೇ ಐಕ್ಯಳಾಗುತ್ತಾಳೆ ಎಂದು ಹಲವರ ಅಭಿಮತವಾಗಿದೆ
ಬಡವಾರಾದರೂ ಸ್ವಾಭಿಮಾನಿಗಳಾಗಬೇಕೆಂಬ ಹಂಬಲ ಆಯ್ದಕ್ಕಿ ಲಕ್ಕಮ್ಮ ಮಾತು ಮಾರಯ್ಯ ದಂಪತಿಗಳದ್ದು. ನಿತ್ಯ ಸತ್ಯ ಶುದ್ಧ ಕಾಯಕ ಮಾಡಿ ಸಂಗ್ರಹಿಸಿದ ದವಸ ಧಾನ್ಯದಿಂದ ಒಮ್ಮೆ ಲಕ್ಕಮ್ಮಳು ಮತ್ತು ಮಾರಯ್ಯನವರು ಕಲ್ಯಾಣದ ಜಂಗಮ ಗಣ ಸಮೂಹಕ್ಕೆ ಪ್ರಸಾದದ ಬಿನ್ನಹ ನೀಡುತ್ತಾರೆ. ಅದನ್ನು ಸಿದ್ಧಪಡಿಸಿದ ಲಕ್ಕಮ್ಮ ತನ್ನ ಗಂಡನಿಗೆ ಕರೆದು ಹೀಗೆ ಹೇಳುತ್ತಾಳೆ.
ಬಸವಣ್ಣ ಚೆನ್ನ ಬಸವಣ್ಣ ಪ್ರಭುದೇವ ಮೊದಲಾದ
ನೇಮ ನಿತ್ಯ ಕೃತ್ಯ ಸಕಲ ಸಮೂಹ ನಿತ್ಯ ನೇಮವ
ಜಂಗಮ ಭಕ್ತರು ಗಣಂಗಳು ಮುಂತಾದ ಸಮೂಹ ಪದಕ್ಕೆ
ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯ ,
ಅಮರೇಶ್ವರಲಿಂಗದ ಮನೆಯಲ್ಲಿ ಆದಿತೆಂದು.
ಎಂತಹ ಗಟ್ಟಿತನ ಲಕ್ಕಮ್ಮನಲ್ಲಿತ್ತು ಎಂದು ಇಲ್ಲಿ ತಿಳಿದುಕೊಳ್ಳಬಹುದು. ಅಂದು ಅನುಭವ ಮಂಟಪದಲ್ಲಿ ಅಲ್ಲಮರ ಪ್ರಶ್ನೆಗೆ ಬಸವಣ್ಣ ಚೆನ್ನ ಬಸವಣ್ಣನವರ ಸಾಕ್ಷಿಯಾಗಿ ಎಲ್ಲ ಶರಣ ಸಮೂಹವನ್ನು ಪ್ರಸಾದಕ್ಕೆ ಆಮಂತ್ರಿಸುವ ಎದೆಗಾರಿಕೆಯನ್ನು ಕಾಯಕ ದಂಪತಿಗಳು ತೋರುತ್ತಾರೆ. ಲಕ್ಕಮ್ಮ ಬಸವಣ್ಣ ಚೆನ್ನ ಬಸವಣ್ಣ ಪ್ರಭುದೇವ ಮೊದಲಾದವರಿಗೆ ತಮ್ಮ ಗುಡಿಸಲಿನಲ್ಲಿ ಪ್ರಸಾದಕ್ಕೆ ಕರೆದು ಬರಲು ಗಂಡನಿಗೆ ಹೇಳುವದಲ್ಲದೆ, ಪ್ರಸಾದದ ಸ್ಥಳವು ಅಮರೇಶ್ವರಲಿಂಗದ ಮನೆಯಲ್ಲಿ ಆದಿತೆಂದು ಎಂದು ಹೇಳುತ್ತಾಳೆ . ಇಂತಹ ಪ್ರಸಂಗವು ಕಲ್ಯಾಣದಲ್ಲಿ ನಡೆದಿದೆಯೆಂದರೆ ಅದಕ್ಕೆ ಬಸವಣ್ಣನವರು ಅಂದು ಮಹಿಳೆಯರಿಗೆ ಬಡವರಿಗೆ ದಲಿತರಿಗೆ ಕೊಟ್ಟ ಮುಕ್ತ ಅವಕಾಶ ಸಮಾನತೆ ಮತ್ತು ವೃತ್ತಿ ಗೌರವವಾಗಿದೆ.
ಕಲ್ಯಾಣದ ಶರಣರ ಸಂಕುಲದಲ್ಲಿ ದಿಟ್ಟ ಕಾಯಕ ನಿಷ್ಠ, ತಾತ್ವಿಕರಾಗಿ ಬಸವ ಸಂದೇಶವನ್ನು ಜೀವಂತವಾಗಿಡಲು ಶ್ರಮಿಸಿದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರು ಅಮರ ಜೀವಿಗಳು.
ಬಾಕ್ಸ್ ೧
ದಿಟ್ಟ ಶರಣೆ ಆಯ್ದಕ್ಕಿ ಲಕ್ಕಮ್ಮ ವಿವರ
ಶರಣೆಯ ಪೂರ್ಣ ಹೆಸರು – ಲಕ್ಕಮ್ಮ ಮುಂದೆ ಆಯ್ದಕ್ಕಿ ಲಕ್ಕಮ್ಮ
ಸ್ಥಳ -ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರೇಶ್ವರ ಗ್ರಾಮದವರು
ಕಾಲ – ಹನ್ನೆರಡನೆಯ ಶತಮಾನ ಬಸವಯುಗ
ಕಾಯಕ -ಕೂಲಿ ಕೆಲಸ
ಗಂಡ – ಆಯ್ದಕ್ಕಿ ಮಾರಯ್ಯ
ಒಟ್ಟು ವಚನಗಳು 25
ವಚನಾಂಕಿತ – “ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ “
ಐಕ್ಯ -ಬನವಾಸಿ
ಬಾಕ್ಸ್ ೨
ಆಕರ
ಕಿಚ್ಚಿನಲ್ಲಿ ಕೈ ಹಾಕಿ ಹೆಕ್ಕಿದರು ವಚನಗಳು – ಡಾ ಶಶಿಕಾಂತ ಪಟ್ಟಣ
ಎತ್ತ ಹೋದರು ಶರಣರು – ಡಾ ಶಶಿಕಾಂತ ಪಟ್ಟಣ
ಶಿವ ಶರಣೆಯರ ವಚನಗಳು – ಡಾ ವೀರಣ್ಣ ರಾಜೂರ
ಕಣಜ
ಬಯಲು