ವಿಶೇಷ ಲೇಖನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೀನುಗಾರಿಕೆ ಇಲಾಖೆಯಡಿ ಜಿಲ್ಲೆಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಸ್ಥಳೀಯ ಮೀನುಗಾರರು ಮತ್ಸ್ಯ ಕೃಷಿಯಲ್ಲಿ ತೊಡಗಿಕೊಳ್ಳುವುದುರ ಮೂಲಕ ತಮ್ಮ ಜೀವನವನ್ನು ಬೆಳಕಾಗಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ೭,೨೧೯.೭೧ ಹೆಕ್ಟೇರ್ ಜಲ ವಿಸ್ತೀರ್ಣವುಳ್ಳ ೧೬೦ ದೊಡ್ಡ ಕೆರೆಗಳು, ೮೧ ಗ್ರಾಮ ಪಂಚಾಯತಿ ಕೆರೆಗಳು ಹಾಗೂ ಹಲವು ಸಣ್ಣ ಹೊಂಡಗಳು ಇರುವುದಲ್ಲದೇ ೧೪೨.೦೦ ಕಿ.ಮೀ ಉದ್ದದ ವ್ಯಾಪ್ತಿಯಲ್ಲಿ ಕೃಷ್ಣ, ಭೀಮಾ ಮತ್ತು ಡೋಣಿ ನದಿಗಳು ಇವೆ. ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಜಿಲ್ಲೆಯ ಮೀನುಗಾರಿಕೆ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಿವೆ.
ಜಿಲ್ಲೆಯಲ್ಲಿ ೨೪ ಮೀನುಗಾರಿಕೆ ಸಹಕಾರ ಸಂಘಗಳು ಕಾರ್ಯನಿರತವಾಗಿದ್ದು, ೬,೩೫೮ ಮೀನುಗಾರರು ಮೀನುಗಾರಿಕೆ ವೃತ್ತಿಯ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿ ವರ್ಷ ಶೇಕಡಾ ೧೦ ರಷ್ಟು ಮೀನು ಉತ್ಪಾದನೆ ಹೆಚ್ಚಳದ ಗುರಿ ಇದ್ದು, ಕಳೆದ ವರ್ಷ ಜಿಲ್ಲೆಯ ಆಲಮಟ್ಟಿ & ಬಸವಸಾಗರ ಜಲಾಶಯಗಳು ತುಂಬಿದ ಕಾರಣ ಮೀನು ಉತ್ಪಾದನೆ ಗಣನೀಯವಾಗಿ ಏರಿಕೆಯಾಗಿದೆ.
ಜಿಲ್ಲೆಯ ಎಲ್ಲ ಇಲಾಖೆಯ ಕೆರೆಗಳು, ಗ್ರಾಮ ಪಂಚಾಯತಿ ಕೆರೆಗಳು, ಪ್ರಮುಖ ಮೂರು ನದಿ ಭಾಗಗಳು, ಆಲಮಟ್ಟಿ ಮತ್ತು ಬಸವಸಾಗರ ಜಲಾಶಯ ಹಿನ್ನೀರು ಹೀಗೆ ಎಲ್ಲ ಜಲ ಸಂಪನ್ಮೂಲಗಳನ್ನು ಮೀನುಗಾರಿಕೆಗೆ ಅಳವಡಿಸಿ, ಅಭಿವೃದ್ಧಿಪಡಿಸಿ ಮೀನು ಉತ್ಪಾದನೆ ಹೆಚ್ಚಿಸುವದು ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಮೀನುಗಾರರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದು ಮೀನುಗಾರಿಕೆ ಇಲಾಖೆಯ ಮುಖ್ಯ ಉದ್ದೇಶವಾಗಿದ್ದು, ಜಿಲ್ಲಾ ವಲಯ, ರಾಜ್ಯ ವಲಯ ಹಾಗೂ ಕೇಂದ್ರ ವಲಯಗಳ ಮೀನುಗಾರಿಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಜಿಲ್ಲೆಯ ಮೀನುಗಾರರ ಸಾಮಾಜಿಕ ಮತ್ತು ಆರ್ಥಿಕಮಟ್ಟ ಸುಧಾರಿಸುವಲ್ಲಿ ಮೀನುಗಾರಿಕೆ ಇಲಾಖೆಯು ಪ್ರಮುಖ ಪಾತ್ರ ವಹಿಸಿದೆ.
೨೦೨೩-೨೪ ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ೩,೩೮೩೫.೦೦ ಮೆ.ಟನ್ ಮೀನು ಉತ್ಪಾದನೆಯಾಗಿದೆ. ಜಿಲ್ಲೆಯಲ್ಲಿ ಕಿಸಾನ್ ಕ್ರ‍್ರೆಡಿಟ್ ಕಾರ್ಡನಡಿ ೬೧ ಮೀನುಗಾರರಿಗೆ, ಮಹಿಳಾ ಮೀನುಗಾರರಿಗೆ, ಮೀನುಕೃಷಿಕರಿಗೆ ಬ್ಯಾಂಕುಗಳ ಮೂಲಕ ರೂ ೧೨.೨೦ ಸಾಲ ವಿತರಿಸಲಾಗಿದೆ. ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಂದು ಮೀನು ಉತ್ಪಾದಕರ ಸಂಸ್ಥೆಯನ್ನು ನೊಂದಣಿ ಮಾಡಲಾಗಿದೆ. ರಾಜ್ಯ ವಲಯ ಯೋಜನೆಯಡಿ ಒಳನಾಡು ಮೀನುಗಾರರಿಗೆ ಮೀನುಗಾರಿಕೆ ಸಲಕರಣೆ ಕಿಟ್‌ಗಳ ವಿತರಣೆ ಯೋಜನೆಯಡಿ ಜಿಲ್ಲೆಯ ೩೫ ಜನ ಫಲಾನುಭವಿಗಳಿಗೆ ಸಲಕರಣೆ ಕಿಟ್ ವಿತರಿಸಲಾಗಿದೆ.
ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ ಜಿಲ್ಲೆಯಲ್ಲಿ ಉಚಿತವಾಗಿ ರೂ. ೦.೧೦ ಲಕ್ಷ ಘಟಕ ವೆಚ್ಚದಲ್ಲಿ ೨೦೦ ಪರಿಶಿಷ್ಟ ಜಾತಿ ಮೀನುಗಾರರಿಗೆ ಹಾಗೂ ಪರಿಶಿಷ್ಟ ಪಂಗಡ ಜಾತಿಯ ೧೦ ಜನ ಮೀನುಗಾರರಿಗೆ ಸಲಕರಣೆ ಕಿಟ್ ವಿತರಿಸಲಾಗಿದೆ. ಮೀನು ಮಾರುಕಟ್ಟೆ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಯೋಜನೆಯಡಿ ೭೧ ಜನ ವೃತ್ತಿಪರ ಮೀನುಗಾರರಿಗೆ ಸೈಕಲ್, ದ್ವಿಚಕ್ರವಾಹನ, ತ್ರಿಚಕ್ರ ವಾಹನ, ನಾಲ್ಕು ಚಕ್ರ ವಾಹನ ಖರೀದಿಗೆ ಸಹಾಯಧನ ವಿತರಿಸಲಾಗಿದೆ.
ಜಿಲ್ಲಾ ಪಂಚಾಯತಿಯ ಒಳನಾಡು ಮೀನುಗಾರಿಕೆ ಅಭಿವೃದ್ದಿಗೆ ಸಹಾಯ ಎಂಬ ಯೋಜನೆಯಡಿ ೨೬೪ ಜನ ವೃತ್ತಿಪರ ಮೀನುಗಾರರಿಗೆ ಮೀನು ಸಲಕರಣೆ ಖರೀದಿಸಿದಕ್ಕೆ ಸಹಾಯಧನ ವಿತರಿಸಲಾಗಿದೆ ಹಾಗೂ ಬಾವಿ ಮತ್ತು ಕೃಷಿ ಹೊಂಡ ಹೊಂದಿರುವ ೧,೭೦೦ ಜನ ರೈತರಿಗೆ ತಲಾ ೫೦೦ ರಂತೆ ಮೀನುಮರಿ ವಿತರಿಸಲಾಗಿದೆ.
ಆಡಳಿತ ವ್ಯವಸ್ಥೆ
ಜಿಲ್ಲಾ ಮಟ್ಟದಲ್ಲಿ ಮೀನುಗಾರಿಕೆ ಉಪ ನಿರ್ದೇಶಕರ ಜಿಲ್ಲಾ ಕಾರ್ಯಾಲಯವಿದ್ದು, ವಿಜಯಪುರ, ಬಬಲೇಶ್ವರ, ತಿಕೋಟಾ,ಇಂಡಿ, ಚಡಚಣ, ಸಿಂದಗಿ, ದೇವರ ಹಿಪ್ಪರಗಿ ಆಲಮೇಲ ಎಂಟು ತಾಲೂಕುಗಳಿಗೆ ವಿಜಯಪುರದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಕಚೇರಿ ಹಾಗೂ ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟೆ, ನಿಡಗುಂದಿ ಮತ್ತು ಕೋಲಾರ ಐದು ತಾಲೂಕುಗಳಿಗೆ ಸಂಬಂಧಿಸಿದಂತೆ ಮುದ್ದೇಬಿಹಾಳದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಕಚೇರಿ ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ.
ಮೀನುಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ವಿವರ
ಜಿಲ್ಲಾ ವಲಯ ಯೋಜನೆಗಳು:
೧) ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ
ಎ) ಮೀನು ಬಲೆ ಖರೀದಿಗೆ ಶೇ ೫೦ ರಷ್ಟು ಸಹಾಯಧನ ವಿತರಣೆ:
ಮೀನುಗಾರರ ಸಹಕಾರ ಸಂಘದ ಸದಸ್ಯರು ಮೀನು ಸಲಕರಣೆ ಖರೀದಿಗಳನ್ನು ಖರೀದಿಸಿದಕ್ಕೆ ೫೦% ರಷ್ಟು ಸಹಾಯಧನ ಅಂದರೆ ಗರಿಷ್ಟ ರೂ.೫೦೦೦ಗಳನ್ನು ವಿತರಿಸಲಾಗುತ್ತಿದೆ.
ಬಿ) ಉಚಿತ ಮೀನು ಮರಿ ವಿತರಣೆ:
ಭಾವಿ ಮತ್ತು ಕೃಷಿ ಹೊಂಡ ಹೊಂದಿರುವ ಆಸಕ್ತ ಕೃಷಿಕರಿಗೆ ಉಚಿತವಾಗಿ ತಲಾ ೫೦೦ ರಂತೆ ಮೀನು ಮರಿಗಳನ್ನು ವಿತರಿಸಲಾಗುತ್ತಿದೆ.
ಸಿ) ಮೀನು ಕೃಷಿ ಕೊಳ ನಿರ್ಮಾಣಕ್ಕೆ ಸಹಾಯಧನ ವಿತರಣೆ:
ಜಿಲ್ಲಾ ಪಂಚಾಯತ ಯೋಜನೆಯಡಿ ಮೀನು ಕೃಷಿ ಕೊಳ ನಿರ್ಮಿಸಲು ೧ ಹೆಕ್ಟರಗೆ ರೂ.೧೧.೦೦ ಲಕ್ಷ ಘಟಕ ವೆಚ್ಚಕ್ಕೆ ೪೦% ರಷ್ಟು ಕೊಳದ ವಿಸ್ತೀರ್ಣಕ್ಕೆ ಅನುಗುಣವಾಗಿ ಸಹಾಯಧನ ಪಾವತಿಸಲಾಗುತ್ತಿದೆ.
ಡಿ) ವಿಶೇಷ ಘಟಕ ಯೋಜನೆಯಡಿ ಮೀನು ಸಲಕರಣೆ ಕಿಟ್ ವಿತರಣೆ :
ಜಿಲ್ಲೆಯ ಪರಿಶಿಷ್ಟ ಜಾತಿ ವರ್ಗದ ವೃತ್ತಿಪರ ಮೀನುಗಾರರಿಗೆ ಜಿಲ್ಲಾ ವಲಯ ಯೋಜನೆಯಡಿ ಉಚಿತವಾಗಿ ಮೀನು ಸಲಕರಣೆ ಕಿಟ್ ವಿತರಣೆ ಮಾಡಲಾಗುತ್ತಿದೆ.
೨) ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ
ಎ) ದ್ವಿಚಕ್ರ ವಾಹನ ಖರೀದಿಸಿದಕ್ಕೆ ಸಹಾಯಧನ ವಿತರಣೆ:
ಜಿಲ್ಲೆಯ ವೃತ್ತಿಪರ ಮೀನುಗಾರರಿಗೆ ತಾಜಾ ಮೀನು ಮಾರಾಟ/ಸಾಗಾಟ ಮಾಡಲು ಅನುಕೂಲವಾಗಲು ಜಿಲ್ಲಾ ಪಂಚಾಯತ ಯೋಜನೆಯಡಿ ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಸಿದಕ್ಕೆ ಘಟಕ ವೆಚ್ಚ ರೂ.೭೫೦೦೦/-ಸಹಾಯಧನ ಶೇಕಡಾ ೪೦ ರಂತೆ ಗರಿಷ್ಠ ರೂ. ೩೦,೦೦೦/- ಸಾವಿರ ಸಹಾಯಧನ ವಿತರಣೆ ಮಾಡಲಾಗುತ್ತಿದೆ.
ಬಿ) ತ್ರಿಚಕ್ರ ವಾಹನ ಖರೀದಿಸಿದಕ್ಕೆ ಸಹಾಯಧನ ವಿತರಣೆ:
ಜಿಲ್ಲಯ ವೃತ್ತಿಪರ ಮೀನುಗಾರರಿಗೆ ತಾಜಾ ಮೀನು ಮಾರಾಟ ಸಾಗಾಟ ಮಾಡಲು ಅನುಕೂಲವಾಗಲು ಜಿಲ್ಲಾ ಪಂಚಾಯತ ಯೋಜನೆಯಡಿ ತ್ರಿಚಕ್ರ ವಾಹನ ಖರೀದಿಸಿದಕ್ಕೆ ಘಟಕ ವೆಚ್ಚ ರೂ.೩,೦೦,೦೦೦/- ಸಹಾಯಧನ ಶೇಕಡಾ ೪೦ ರಂತೆ ಗರಿಷ್ಠ ರೂ. ೧,೨೦,೦೦೦/-ಸಾವಿರ ಸಹಾಯಧನ ವಿತರಣೆ ಮಾಡಲಾಗುತ್ತಿದೆ.
ಸಿ) ನಾಲ್ಕು ಚಕ್ರ ವಾಹನ ಖರೀದಿಸಿದಕ್ಕೆ ಸಹಾಯಧನ ವಿತರಣೆ:
ಜಿಲ್ಲೆಯ ವೃತ್ತಿಪರ ಮೀನುಗಾರರಿಗೆ ತಾಜಾ ಮೀನು ಮಾರಾಟ / ಸಾಗಾಟ ಮಾಡಲು ಅನುಕೂಲವಾಗಲು ಜಿಲ್ಲಾ ಪಂಚಾಯತ ಯೋಜನೆಯಡಿ ನಾಲ್ಕು ಚಕ್ರ ವಾಹನ ಖರೀದಿಸಿದಕ್ಕೆ ಘಟಕ ವೆಚ್ಚ ರೂ.೬,೦೦,೦೦೦/- ಸಹಾಯಧನ ಶೇಕಡಾ ೪೦ ರಂತೆ ಗರಿಷ್ಠ ರೂ. ೨,೪೦,೦೦೦/- ಸಾವಿರ ಸಹಾಯಧನ ವಿತರಣೆ ಮಾಡಲಾಗುತ್ತಿದೆ.
೩) ವಸ್ತು ಪ್ರದರ್ಶನ ಮತ್ತು ತರಬೇತಿ
ಜಿಲ್ಲೆಯಲ್ಲಿ ನಡೆಯುವ ಕೃಷಿ ವಿಸ್ತೀರ್ಣ ಚಟುವಟಿಕೆಗಳಾದ ಕೃಷಿ ಮೇಳ, ಕೃಷಿ ಉತ್ಸವ, ಮೀನುಗಾರರಿಗೆ ಮಾಹಿತಿ ಕಾರ್ಯಾಗಾರ ಹೊರ ರಾಜ್ಯದ ಕ್ಷೇತ್ರ ಪರಿಚಯ ಪ್ರವಾಸ, ವಿಶ್ವ, ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.
ರಾಜ್ಯವಲಯ ಯೋಜನೆಗಳು
೧.ಮೀನುಗಾರಿಕೆ ಮೀನುಹಿಡಿಯುವ ಸಲಕರಣೆಗಳ ಕಿಟ್ ಪೂರೈಸುವದು
ಈ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಇರುವ ಜಲಾಶಯದಲ್ಲಿ ಪರವಾನಗಿ ಪಡೆದ ಮೀನುಗಾರರಿಗೆ ಮೀನು ಹಿಡಿಯಲು ಮೀನುಗಾರರಿಗೆ ರೂ. ೧೦,೦೦೦ ಮೌಲ್ಯದ ಮೀನುಹಿಡಿಯುವ ಸಲಕರಣೆಗಳ ಕಿಟ್ (ಬಲೆ, ಇತ್ಯಾದಿ) ಗಳನ್ನು ಉಚಿತವಾಗಿ ಪೂರೈಸಲಾಗುತ್ತಿದೆ.
೨. ಮೀನು ಮರಿಗಳ ಖರೀದಿಗಾಗಿ ಶೇ ೫೦ % ಸಹಾಯಧನ:
ಮೀನುಗಾರರ ಸಹಕಾರ ಸಂಘಗಳಿಗೆ ಹಾಗೂ ಮೀನು ಕೃಷಿಕರರಿಗೆ ಗುತ್ತಿಗೆ ಮುಖಾಂತರ ಪಡೆದ ಕೆರೆಗಳಲ್ಲಿ ಮೀನುಮರಿಗಳು ಖರೀದಿಸಿ ಬಿತ್ತನೆ ಮಾಡಿದ ಗುತ್ತಿಗೆದಾರರಿಗೆ ಶೇಕಡಾ ೫೦ % ರಷ್ಟು ವೈಯಕ್ತಿಕ ರೂ.೫೦೦೦/- ಮತ್ತು ಮೀನುಗಾರರ ಸಹಕಾರ ಸಂಘಗಳಿಗೆ ರೂ.೨೦,೦೦೦/- ಸಹಾಯಧನ ನೀಡಲಾಗುತ್ತಿದೆ.
೩. ಮತ್ಸ್ಯಾಶ್ರಯ ಯೋಜನೆ : –
ವಿಜಯಪುರ ಜಿಲ್ಲೆಯ ವೃತ್ತಿನಿರತ ನಿರ್ವಸತಿ ಮೀನುಗಾರರು ಸ್ವಂತ ಖಾಲಿ ನಿವೇಶನ ಹೊಂದಿರಬೇಕು ಅಂತಹ ಅರ್ಹ ಸಾಮಾನ್ಯ ವರ್ಗದ ಮೀನುಗಾರ ಫಲಾನುಭವಿಗೆ ರೂ.೧,೨೦,೦೦೦ ಮತ್ತು ಎಸ್.ಸಿ, ಎಸ್.ಟಿ ಮೀನುಗಾರ ಫಲಾನುಭವಿಗೆ ರೂ.೧,೭೫,೦೦೦ ಸಹಾಯಧನ ನೀಡಲಾಗುವುದು. ಆಯಾ ವಿಧಾನ ಸಭಾದ ಮಾನ್ಯ ಸ್ಥಳೀಯ ಶಾಸಕರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಕೇಂದ್ರ ವಲಯ ಯೋಜನೆಗಳು
೧.ಮೀನು ಕೊಳ ನಿರ್ಮಾಣಕ್ಕಾಗಿ ಹಾಗೂ ಹೂಡಿಕೆ ವೆಚ್ಚದ ಶೇಕಡಾ ೪೦/೬೦ ರಷ್ಟು ಸಹಾಯಧನ
ಕಳೆದ ಸನ್ ೨೦೨೦-೨೧ ನೇ ಸಾಲಿನಿಂದ ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೊಳ ಹಾಗೂ ಉಪ ಘಟಕ ಯೋಜನೆಯಡಿ ನಿರ್ಮಾಣ ಮಾಡಿಕೊಂಡಿರುವ ಘಟಕಗಳಿಗೆ ಹೂಡಿಕೆ ವೆಚ್ಚದ ಶೇಕಡಾ ೪೦% ಸಾಮಾನ್ಯರಿಗೆ ಹಾಗೂ ೬೦% ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಫಲಾನುಭವಿಗೆ ಸಹಾಯಧನ ನೀಡಲಾಗಿದೆ.
“ಮೀನುಗಾರಿಕೆ ವಲಯವು ಉದ್ಯೋಗ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ವಿದೇಶಿ ವಿನಿಮಯ ಗಳಿಕೆ ಮತ್ತು ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರಿಗೆ ಆದಾಯದ ಪ್ರಮುಖ ಕೊಡುಗೆ ನೀಡುತ್ತಿದ್ದು, ಜಿಲ್ಲೆಯಲ್ಲಿರುವ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯ ಕೆರೆಗಳಿಗೆ ಮೀಸಲಾತಿ ಸಭೆ ಜರುಗಿಸಿದ್ದು, ಕೂಡಲೇ ಸರ್ಕಾರದ ನಿಯಮಗಳಂತೆ ಕೆರೆಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಹೆಚ್ಚಿನ ಮೀನು ಉತ್ಪಾದನೆಗೆ ಒಳ್ಳೆಯ ಅವಕಾಶ ಇದೆ.”
– ಶ್ರೀ ರಿಷಿ ಆನಂದ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಪಂ, ವಿಜಯಪುರ
“ಮೀನುಗಾರರಿಗೆ ಮೀನು ಬಲೆಗಳು ಹಾಗೂ ಇತರೆ ಸಾಮಗ್ರಿಗಳು ಖರೀದಿಸಿ ಮೀನುಶಿಕಾರಿ ಹೆಚ್ಚಿಸಿಕೊಳ್ಳಲು ಸಾಲವನ್ನು ಪಡೆಯಲು ಅನುಕೂಲವಾಗಲು ಜಿಲ್ಲೇಯ ೩೩೨ ಜನವೃತ್ತಿಪರ ಮೀನುಗಾರರಿಗೆ ರಾಷ್ಟ್ರೀಕೃತ ಬ್ಯಾಕುಗಳಿಂದ ಕಿಸಾನ ಕ್ರೇಡಿಟ್ ಕಾರ್ಡ್ (ಕೆಸಿಸಿ) ಸಾಲ ರೂ. ೭೨.೨೦ ಲಕ್ಷ ಸಾಲವನ್ನು ಮಂಜೂರು ಮಾಡಲಾಗಿದೆ. ಅಲ್ಲದೆ ಜಿಲ್ಲೆಯ ಮೀನುಗಾರರಿಗೆ ಅವರು ಹಿಡುವಳಿ ಮಾಡಿದ ಮೀನಿಗೆ ಯೋಗ್ಯ ಬೆಲೆಯನ್ನು ದೊರಕಿಸಿ ಕೊಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಸ್ಥಾಪನೆಯಾದ ಒಂದು ಮೀನು ಉತ್ಪಾದಕರ ಸಂಸ್ಥೆ (ಎಫ್.ಪಿ.ಓ) ಮುಖಾಂತರ ಬಸವಸಾಗರ ಜಲಾಶಯದಿಂದ ಹಿಡುವಳಿಯಾದ ಎಲ್ಲ ತಳಿಗಳ ಮೀನುಗಳನ್ನು ಯೋಗ್ಯ ದರದಲ್ಲಿ ಪಡೆದು ಮೀನು ಮಾರಾಟ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅದು ಇನ್ನೂ ಕಾರ್ಯಗತವಾಗಬೇಕಾಗಿದೆ. ಈ ವರ್ಷ ಮಳೆ ಉತ್ತಮವಾಗಿದ್ದು ನಿಗದಿತ ಸಮಯದಲ್ಲಿ ಮೀನು ಕೃಷಿಕರು ಮೀನುಗಳನ್ನು ಕೆರೆಗಳಲ್ಲಿ ದಾಸ್ತಾನು ಮಾಡಿದ್ದು, ಮೀನಿನ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಗಳಿವೆ ಹಾಗೂ ಇಲಾಖೆಯು ಮೀನುಗಾರರ ಅಭಿವೃದ್ಧಿಗಾಗಿ ಮಹತ್ವದ ಪಾತ್ರವಹಿಸುತ್ತಿದೆ.
– ಶ್ರೀ ಎಮ್ ಎಚ್ ಬಾಂಗಿ ಮೀನುಗಾರಿಕೆ ಉಪ ನಿರ್ದೇಶಕರು,
ಜಿಲ್ಲಾ ಪಂಚಾಯತ ವಿಜಯಪುರ