ಲೇಖನ
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ, ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕೆಲ ವರ್ಷಗಳ ಹಿಂದೆ ಮುಂಜಾನೆ 11ರ ಸುಮಾರಿಗೆ ನಮ್ಮ ಮನೆಗೆ ಸುಮಾರು 50ರ ಆಸು ಪಾಸಿನ ಓರ್ವ ಮಹಿಳೆ ಬಂದಳು. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಕೂಗುತ್ತ ಬಂದ ಆಕೆ ಅದೆಷ್ಟೋ ಹಳೆಯ ಪರಿಚಯ ಇದ್ದವರೆಂಬಂತೆ ಆಕೆಯ ವರ್ತನೆ ಇತ್ತು. ನನಗೆ ಗೊತ್ತಿರುವ ಓರ್ವ ಸಿರಿವಂತ ದಂಪತಿಗಳ ಸಹೋದರಿ ತಾನೆಂದು ಪರಿಚಯಿಸಿಕೊಂಡಳು. ಆಕೆಯ ಮಗಳು ನನಗೆ ಸ್ವಲ್ಪ ಪರಿಚಯವಿದ್ದ ಕಾರಣ ಆಕೆಯನ್ನು ಕೂರಿಸಿ ಚಹಾ ಮಾಡಿ ಕೊಟ್ಟೆ.
ಬಸ್ಸಿಗೆ ಓಡಾಡಲು ತಮಗೆ ಸಾಧ್ಯವಿಲ್ಲವೆಂದು ಯಾವಾಗಲೂ ಕಾರಿನಲ್ಲಿಯೇ ಓಡಾಡುವುದಾಗಿ ಹೇಳಿದ ಆಕೆ ತಮ್ಮ ಮಗಳ ಮದುವೆಗೆ ಹಲವಾರು ಚಿನ್ನದ ಒಡವೆಗಳನ್ನು ಮಾಡಿಸಿದ್ದು ದುಬಾರಿ ಬೆಲೆಯ ಸೀರೆಗಳನ್ನು ಖರೀದಿಸಿ ಡಿಸೈನರ್ ಬ್ಲೌಸ್ ಗಳನ್ನು ಹೊಲಿಸಿರುವುದಾಗಿ ಒಣ ಪ್ರತಿಷ್ಠೆಯಿಂದ ಹೇಳುತ್ತಿದ್ದಳು.ಇದೆಲ್ಲ ಸಹಜ ಎಂದು ಭಾವಿಸಿ ನಾನು ಸುಮ್ಮನೆ ಕೇಳುತ್ತಿದ್ದರೂ ಆಕೆ ಬಂದ ಕಾರಣ ಮಾತ್ರ ತಿಳಿಯಲಿಲ್ಲ.
ತುಸು ಹೊತ್ತಿನ ನಂತರ ಆಕೆ ತಾನು ಹೊರಡುತ್ತೇನೆ ಎಂದೂ ಕುಂಕುಮ ಕೊಡಲು ಕೇಳಿದಳು. ಆಕೆಗೆ ಕುಂಕುಮ ನೀಡಲು ಹೊರಬಂದ ನನಗೆ ತುಸು ಓರೆಗೆ ಕರೆದೊಯ್ದ ಆಕೆ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ಮಗಳ ಮದುವೆ ಫಿಕ್ಸ್ ಆಗಿದ್ದು ಇನ್ನೊಂದು ವಾರದಲ್ಲಿ ಮದುವೆ ಇದೆ ಆದ್ದರಿಂದ ಸಾಧ್ಯವಿದ್ದಷ್ಟು ಹಣ ಸಹಾಯ ಮಾಡಲು ಕೇಳಿಕೊಂಡಳು. ಒಮ್ಮಿಂದೊಮ್ಮೆಲೆ ಆಕೆ ಹೀಗೆ ಕೇಳಿಕೊಂಡಾಗ ನನಗೆ ತುಸು ಗಾಬರಿಯೆನಿಸಿದರೂ ನನ್ನ ಪತಿಯನ್ನು ಕೇಳಿ ನೋಡುತ್ತೇನೆಂದು ಹೇಳಿ ಆಕೆಯನ್ನು ಸಾಗ ಹಾಕಿದೆ.
ನನ್ನ ಪತಿಗೆ ಆಕೆಯ ವಿಷಯವನ್ನು ಹೇಳಿದಾಗ ಇಂತಹ ಜನರಿಂದ ತುಸು ಹುಷಾರಾಗಿರು ಎಂದು ಹೇಳಿದರು.
ಮರುದಿನದಿಂದ ಶುರುವಾಯಿತು ನೋಡಿ ಆಕೆಯ ಹಾವಳಿ.. ಪದೇ ಪದೇ ಫೋನ್ ಮಾಡಿ ಹಣಕ್ಕಾಗಿ ಪೀಡಿಸಲಾರಂಭಿಸಿದಳು. ಯಾಕೋ ತುಸು ಅನುಮಾನ ಬಂದಂತಾಗಿ ನಾನು ನನಗೆ ಪರಿಚಿತವಿರುವ ಆಕೆಯ ಸಂಬಂಧಿಗೆ ಕರೆ ಮಾಡಿ ಕೇಳಿದಾಗ ಆಕೆ ಸುತಾರಾಂ ನೀಡಬೇಡಿ ನಮ್ಮ ಹೆಸರು ಹೇಳಿಕೊಂಡು ಬಹಳಷ್ಟು ಕಡೆ ಹೀಗೆಯೇ ಹಣ ಪಡೆದಿದ್ದಾಳೆ ಎಂದು ಹೇಳಿದರು.
ಮರುದಿನ ಮುಂಜಾನೆ ಮತ್ತೆ ಆಕೆ ಕರೆ ಮಾಡಿ ಅಣ್ಣ(ನನ್ನ ಪತಿ) ಏನು ಹೇಳಿದರು ಎಂದು ಕೇಳಿದಳು.
ಕೂಡಲೇ ತುಸು ನಿಷ್ಟುರವಾಗಿ ನಾನು ಅವರ್ಯಾರು ಅಂತ ಗೊತ್ತಿಲ್ಲದೆ ಮನೆಗೆ ಸೇರಿಸಬೇಡ ಅಂತ ಗದರಿಸಿದ್ದಲ್ಲವೇ ದುಡ್ಡು ಕೊಡಲು ನನಗೇನು ಹುಚ್ಛೇ ಎಂದು ನಿರಾಕರಿಸಿದರು ಎಂದು ಹೇಳುತ್ತಲೇ ಕರೆಯನ್ನು ಕಟ್ ಮಾಡಿದಳು.
ಇದಾಗಿ ಸುಮಾರು ತಿಂಗಳುಗಳೇ ಕಳೆದಿತ್ತು. ಈ ಮಧ್ಯದಲ್ಲಿ ಆಕೆಯ ಕುರಿತು ಸಾಕಷ್ಟು ಮಾಹಿತಿಗಳನ್ನು ನಾನು ಸಂಗ್ರಹಿಸಿದ್ದು ಒಂದು ಬಟ್ಟೆ ಅಂಗಡಿಯಲ್ಲಿ ಆಕೆ ಲಕ್ಷಾಂತರ ರೂಗಳ ಬಟ್ಟೆಯನ್ನು
ಮಾರುತ್ತೇನೆ ಎಂದು ಉದ್ರಿ ಹೇಳಿ ಅಂಗಡಿಯ ಮಾಲೀಕರಿಗೆ ಹಣ ಕೊಡದೆ ಟೋಪಿ ಹಾಕಿದ್ದಳು. ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಿದ್ದ ಆಕೆ ಹಲವಾರು ತಿಂಗಳುಗಳು ಕಾಲ ಬಾಡಿಗೆ ಕೊಡದೆ ಸತಾಯಿಸಿ ಬೇರೊಂದು ಮನೆಗೆ ಬಾಡಿಗೆ ಹೋಗುತ್ತಿದ್ದಳು. ಪೀಡೆ ತಪ್ಪಿತು ಎಂದು ಆಕೆ ಬಿಟ್ಟು ಹೋಗುತ್ತಿದ್ದ ಮನೆಯ ಮಾಲೀಕರು ಸುಮ್ಮನಾಗಿಬಿಡುತ್ತಿದ್ದರು.
ಇದೀಗ ಕೆಲ ತಿಂಗಳ ನಂತರ ಮತ್ತೊಮ್ಮೆ ಆಕೆಯ ಸವಾರಿ ನಮ್ಮ ಮನೆಗೆ ಬಂತು.
ಮಗಳ ಮದುವೆಯ ವೈಭವವನ್ನು ಹೇಳಿದ ಆಕೆ
ಇದೀಗ ಆಕೆ ಗರ್ಭಿಣಿಯಾಗಿದ್ದು ಆಕೆಗೆ ನಾಡಿದ್ದು ಸೀಮಂತ ಮಾಡುತ್ತಿರುವುದಾಗಿಯೂ ಸಾಕಷ್ಟು ವಿಧದ ತಿಂಡಿ ತೀರ್ಥಗಳನ್ನು ಮಾಡುವುದು ಬಾಕಿ ಇದೆ ಎಂದಳು. ಅಷ್ಟೊಂದು ಕೆಲಸಗಳನ್ನು ಬಾಕಿ ಇಟ್ಟುಕೊಂಡು ಹೀಗೆ ಆರಾಮಾಗಿ ಕುಳಿತಿದ್ದೀರಲ್ಲ ಎಂದು ಸೂಕ್ಷ್ಮವಾಗಿ ಕೇಳಿದಾಗ ಆಕೆ ಸಪ್ಪೆ ಮುಖ ಮಾಡಿ ಎಲ್ಲವನ್ನು ನೆರವೇರಿಸಲು ಹಣ ಸಾಲದೆ ಹೋಗಿದ್ದು ಸುಮಾರು ಇಪ್ಪತ್ತು ಸಾವಿರ ರೂ ಹಣವನ್ನು ಕೊಡಲು ಆಗ್ರಹಿಸಿದಳು. ಮತ್ತೆ ನನ್ನ ಪತಿ ಮನೆಗೆ ಬಂದ ಮೇಲೆ ಕೇಳುತ್ತೇನೆಂದು ನಿಧಾನವಾಗಿ
(ಮುಖಕ್ಕೆ ಹೊಡೆದಂತೆ ಮಾತನಾಡುವುದು ನನ್ನ ಸ್ವಭಾವವಲ್ಲವಾದ ಕಾರಣ) ಹೇಳಿ ಆಕೆಯನ್ನು ಕಳುಹಿಸಿದೆ.
ಆಕೆ ವಾಸವಾಗಿದ್ದ ಮೂರನೆಯ ಅಂತಸ್ತಿನಲ್ಲಿನ ಮನೆಯಿಂದ ನನ್ನ ಮನೆ ಮತ್ತು ತರಗತಿಯ ಎಲ್ಲಾ ಚಟುವಟಿಕೆಗಳು ಕಾಣುವಂತೆ ಇದ್ದು ಆಕೆಯ ಕರೆಯನ್ನು ತುಂಡರಿಸಿದರೂ ಮತ್ತೆ ಮತ್ತೆ ಕರೆ ಮಾಡ ತೊಡಗಿದ ಆಕೆಯ ವರ್ತನೆಯಿಂದ ಬೇಸತ್ತು ಈ ಬಾರಿ ಆಕೆಯ ಕರೆಯನ್ನು ಸ್ವೀಕರಿಸಿದ ನಾನು ಆಕೆಯ ಹೆಸರನ್ನು ಪೂರ್ತಿಯಾಗಿ ಕೇಳಿ ತಿಳಿದುಕೊಂಡೆ.
ನಂತರ ನಿಧಾನವಾಗಿ ನೋಡಿ ನೀವು ಯಾರು ಅಂತ ಗೊತ್ತಿಲ್ದೆ ಹೋದ್ರೂ ಮನೆಗೆ ಬಂದ ಅತಿಥಿ ಎಂದು ಸತ್ಕರಿಸಿದ್ದೇನೆ. ಬಸಿರಿ ಹೆಣ್ಣು ಮಗಳಿಗೆ ಬೇಕಿದ್ದರೆ ಒಂದು ಸೀರೆಯನ್ನು ಉಡುಗೊರೆಯಾಗಿ ಕೊಡುತ್ತೇನೆ. ಬಂದು ತೆಗೆದುಕೊಂಡು ಹೋಗಿ ಅದನ್ನು ಬಿಟ್ಟು ದುಡ್ಡು ಕಾಸು ಎಂದು ಪದೇ ಪದೇ ಕರೆ ಮಾಡಿ ತೊಂದರೆ ಕೊಟ್ಟರೆ ಇಲ್ಲವೇ ನನ್ನ ಮನೆಗೆ ಬರುವ ಪ್ರಯತ್ನ ಮಾಡಿದರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಬಿಡುತ್ತೇನೆ ಎಂದು ಗದರಿಸಿದೊಡನೆ ಥಟ್ಟನೆ ಫೋನ್ ಕರೆಯನ್ನು ತುಂಡರಿಸಿದಳಾಕೆ.
ನಂತರ ಮನೆಗೆ ಬಂದ ಪತಿಗೆ ನಾನು ಮಾತನಾಡಿದ ರೀತಿಯನ್ನು ಹೇಳಿದಾಗ ತುಸು ಆತಂಕಗೊಂಡ ಅವರು ಆಕೆ ಮನೆಯ ಮುಂದೆ ಬಂದು ಗಲಾಟೆ ಮಾಡಿದರೆ ಏನು ಮಾಡುವೆ ಎಂದು ಕೇಳಿದಾಗ ತುಸು ಆತಂಕವಾದರೂ ತೋರಿಸಿಕೊಳ್ಳದೆ ಆಕೆ ಬರಲಿಕ್ಕಿಲ್ಲ ಎಂದು ನನ್ನವರಿಗೆ ಸಮಾಧಾನ ಹೇಳಿದೆ.
ಈ ಹಿಂದೆ ಆಕೆಯಿಂದ ಮೋಸ ಹೋದ ಪರಿಚಿತ ಸ್ನೇಹಿತರಿಗೆ ಕರೆ ಮಾಡಿದಾಗ ಅವರು ಅಯ್ಯೋ! ಬರ್ಲಿ ಬಿಡ್ರಿ.. ಆಕೆಯಿಂದ ಮೋಸ ಹೋದವರು ಬಹಳಷ್ಟು ಜನ ಇದ್ದೇವೆ ಚಿಂತಿಸಬೇಡಿ ಎಂದು ಹೇಳಿದರು.
ಬದುಕಿನ ಹಾದಿಯಲ್ಲಿ ಇಂತಹ ಜನ ಅಲ್ಲಲ್ಲಿ ಕಾಣಸಿಗುತ್ತಾರೆ.. ಹುಷಾರ್