ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ನಂ.೨೯ಕ್ಕೆ ಉಪ ಚುನಾವಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ ೨೯ರಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಚುನಾವಣೆ ನಡೆಯುವ ಮಹಾನಗರ ಪಾಲಿಕೆ ವಾರ್ಡ್ ನಂ.೨೯ರ ವ್ಯಾಪ್ತಿಯಲ್ಲಿನ ಆಯುಧ ಲೈಸನ್ಸದಾರರು ತಮ್ಮ ಎಲ್ಲ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಎಲ್ಲ ಆಯುಧ ಲೈಸನ್ಸದಾರರು ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳು ಅಂದರೆ ಎಸ್.ಬಿ.ಬಿ.ಎಲ್/ಡಿ.ಬಿ.ಬಿ.ಎಲ್, ಬಂದೂಕು, ರೈಫಲ್, ರಿವಾಲ್ವರ್ ಹಾಗೂ ಪಿಸ್ತೂಲುಗಳನ್ನು ಹೊಂದಲು ಕೊಟ್ಟ ಲೈಸನ್ಸ್ ಗಳನ್ನು ನವೆಂಬರ್ ೦೪ ರಿಂದ ನವೆಂಬರ್ ೨೬ರವರೆಗೆ ಸ್ಥಗಿತಗೊಳಿಸಲಾಗಿದೆ.
ಈ ಆದೇಶವು ಬ್ಯಾಂಕುಗಳು ಮತ್ತು ಫ್ಯಾಕ್ಟರಿಗಳ ಭದ್ರತೆಗೋಸ್ಕರ ಪಡೆದುಕೊಂಡ ಆಯುಧಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

