ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ | ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರಿಂದ ಮೂರು ದಿನದ ಗಡುವು
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಸೋಮವಾರ ಕೃಷ್ಣಾ ನದಿಯ ಹಿನ್ನೀರಿಗೆ ಇಳಿದು ೨ ಗಂಟೆಗಳ ಕಾಲ ನೀರಿನಲ್ಲೇ ಪ್ರತಿಭಟಿಸಿದರು.
ಚಂದ್ರಮ್ಮಾ ದೇವಸ್ಥಾನದ ಬಳಿ ಆರಂಭವಾದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಹಲಗೆ ವಾದನದೊಂದಿಗೆ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
“ಮುಂಗಾರು ಮಳೆ ಕೈಕೊಟ್ಟಿದೆ. ನೀರು ಬರುತ್ತದೆ ಎಂಬ ನಂಬಿಕೆಯಲ್ಲಿ ರೈತರು ಬೆಳೆ ಬೆಳೆದಿದ್ದಾರೆ. Iಅಅ ರಚನೆಯಾಗಿಲ್ಲ ಎಂಬ ಸಬೂಬು ಹೇಳಿ ನೀರು ಬಿಡದಿರುವುದು ಸರಿಯಲ್ಲ. ತಕ್ಷಣ ಕಾಲುವೆಗೆ ನೀರು ಹರಿಸಬೇಕು, ಕೆರೆಗಳನ್ನು ಭರ್ತಿ ಮಾಡಬೇಕು” ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
“ತುಬಚಿ-ಬಬಲೇಶ್ವರ ಏತಕ್ಕೆ ನೀರು ಬಿಡಲಾಗಿದೆ. ಆದರೆ ಆಲಮಟ್ಟಿ ಕಾಲುವೆಗೆ ಮಾತ್ರ ನೀರಿಲ್ಲ. ೩ ದಿನಗಳಲ್ಲಿ ನೀರು ಬಿಡದಿದ್ದರೆ ಅಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ನಂತರ ಸರ್ಕಾರದ ಮೇಲೆ ಒತ್ತಡ ಹೇರಲು ಕಾರ್ಯಕರ್ತರು ನೇರವಾಗಿ ಕೃಷ್ಣಾ ನದಿಗೆ ಇಳಿದರು. ಗಾಳಿ, ಚಳಿ, ನೀರಿನ ರಭಸದ ನಡುವೆಯೂ ಅವರು ನೀರಿನಲ್ಲೇ ನಿಂತು ಪ್ರತಿಭಟಿಸಿದರು. ಪೊಲೀಸರ ಮನವಿಗೆ ಮಣಿಯದ ರೈತರನ್ನು ನಿಡಗುಂದಿ ಸಿಪಿಐ ಶರಣಗೌಡ ಪಾಟೀಲ ಮನವೊಲಿಸಿ ಹೊರಗೆ ಕರೆತಂದರು.
ಈ ವೇಳೆ ಸೀತಪ್ಪ ಗಣಿ, ರವಿ ಕೋತಿನ, ವಿಠ್ಠಲ ಬಿರಾದಾರ, ಉಮೇಶ ವಾಲೀಕಾರ, ಸಿದ್ದು ಹಿರೇಮಠ ಸೇರಿದಂತೆ ಹಲವರು ಇದ್ದರು.
ರಾಜ್ಯ ರೈತ ಸಂಘದಿಂದ ಕಚೇರಿಗೆ ಬೀಗ
ಇದೇ ಬೇಡಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮುಖ್ಯ ಎಂಜಿನಿಯರ್ ಕಚೇರಿಗೆ ಬೀಗ ಜಡಿದು ದಿಗ್ಬಂಧನ ನಡೆಸಿದರು. ಅರೆಬೆತ್ತಲೆಯಾಗಿ ಮಲಗಿ ಪ್ರತಿಭಟಿಸಿದರು.
ಅಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, “ನೀರು ಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ” ಎಂದು ತಿಳಿಸಿದರು.
ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಪಾಟೀಲ ಮನವಿ ಸ್ವೀಕರಿಸಿ, “ಜುಲೈ ೧೪ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಡಿಸಿ, ಕೆಬಿಜೆಎನ್‌ಎಲ್ ಅಧಿಕಾರಿಗಳ ಸಭೆ ಇದೆ. ಅದರಲ್ಲಿ ನೀರು ಹರಿಸುವ ಬಗ್ಗೆ ತೀರ್ಮಾನವಾಗುತ್ತದೆ” ಎಂದು ಭರವಸೆ ನೀಡಿದರು.
ಗುರುಸಂಗಪ್ಪಗೌಡ ಹಂಡರಗಲ್ಲ, ಅಯ್ಯಪ್ಪ ಬಿದರಕುಂದಿ, ವೈ.ಎಲ್. ಬಿರಾದಾರ, ಶಿವಪ್ಪ ಬೇವಿನಮಟ್ಟಿ, ಲಕ್ಷ್ಮಣ ಚಳ್ಳಮರದ ಸೇರಿದಂತೆ ಹಲವರು ಭಾಗವಹಿಸಿದ್ದರು.

