ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ವೇದಿಕೆಗಳಾಗಿವೆ. ಇಂತಹ ಸಮ್ಮೇಳನಗಳು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಹಿರಿಯ-ಕಿರಿಯ ಸಾಹಿತಿಗಳ ನಡುವೆ ಸಾಹಿತ್ಯಿಕ ಸಂವಾದಕ್ಕೆ ಅವಕಾಶ ಕಲ್ಪಿಸುತ್ತವೆ ಎಂದು ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹ.ಮ.ಪೂಜಾರ ಹೇಳಿದರು.
ಸಿಂದಗಿ ನಗರದಲ್ಲಿ ನಡೆಯುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಓದುವ ಹವ್ಯಾಸ, ಸೃಜನಶೀಲತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಸಾಹಿತ್ಯದ ಶ್ರೀಮಂತಿಕೆಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಹೊಣೆಗಾರಿಕೆಯಾಗಿದೆ. ನನ್ನನ್ನು ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾ ಹಾಗೂ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸ್ಥಳೀಯ ಶಾಸಕರಿಗೂ, ಸಾಹಿತ್ಯಾಭಿಮಾನಿಗಳು ಹಾಗೂ ಜಿಲ್ಲೆಯ ಸಮಸ್ತ ಕನ್ನಡ ಮನಸ್ಸುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಸಮ್ಮೇಳನವನ್ನು ಅರ್ಥಪೂರ್ಣ, ವೈಚಾರಿಕ ಹಾಗೂ ಸಾಹಿತ್ಯಿಕವಾಗಿ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕರೆ ನೀಡಿದರು.
ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಹ.ಮ. ಪೂಜಾರ ಅವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ಅನುಭವ, ಸಾಹಿತ್ಯಿಕ ಸಾಧನೆ ಹಾಗೂ ಸಮಾಜಮುಖಿ ಚಿಂತನೆಗಳು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹೊಸ ಮೆರುಗು ತಂದುಕೊಡಲಿದ್ದು, ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಾಯ್.ಸಿ.ಮಯೂರ ಮಾತನಾಡಿ, ಹ.ಮ.ಪೂಜಾರ ಅವರ ಆಯ್ಕೆ ಜಿಲ್ಲೆಯ ಸಾಹಿತ್ಯ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಾಹಿತ್ಯಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಕನ್ನಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸಮಾರಂಭದಲ್ಲಿ ಕಸಾಪ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಗೌರವ ಕಾರ್ಯದರ್ಶಿ ಆನಂದ ಶಾಬಾದಿ, ಮಹಾಂತೇಶ ನೂಲಾನವರ, ಎಸ್.ಎಸ್.ಸಾತಿಹಾಳ, ಎ.ಆರ್.ಹೆಗ್ಗನದೊಡ್ಡಿ, ಶಿವಕುಮಾರ ಶಿವಸಿಂಪಿಗೇರ, ಮಾಜಿ ಅಧ್ಯಕ್ಷ ಶಿವಾನಂದ ಬಡಾನೂರ, ರಾಜಶೇಖರ ಪೂಜಾರಿ, ಸೈನಾಬಿ ಮಸಳಿ, ವರ್ಷಾ ಪಾಟೀಲ, ಅನಸೂಬಾಯಿ ಪರಗೊಂಡ, ಶಾಂತು ರಾಣಾಗೋಳ, ಜೈಭೀಮ ತಳಕೇರಿ, ಗುಂಡು ಬಾಣಿ, ಜಮೀರ ಮೋಮಿನ, ರಮೇಶ ಪೂಜಾರ, ಜ್ಯೋತಿ ಪೂಜಾರ, ಅಶ್ವಿನಿ ಲೋಣಿ, ಮಂಗಲಾ ಬಮ್ಮಣ್ಣಿ, ಸಾಧನಾ ಇಮಡೆ, ಹೇಮಾ ಬಡಿಗೇರ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಇದ್ದರು.

