ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಚುನಾವಣೆ ನಡೆಯುವ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಆಯುಧ ಲೈಸನ್ಸದಾರರು ತಮ್ಮ ಎಲ್ಲ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮ ಪಂಚಾಯತಿಯ ಅರಳದಿನ್ನಿ ಹಾಗೂ ಚಿಮ್ಮಲಗಿ ಗ್ರಾಮ ಪಂಚಾಯತಿಯ ಚಿಮ್ಮಲಗಿ ಕ್ಷೇತ್ರಕ್ಕೆ, ಇಂಡಿ ತಾಲೂಕಿನ ಸಾಲೋಟಗಿ ಹಾಗೂ ಖೇಡಗಿ ಗ್ರಾಮ ಪಂಚಾಯತ್, ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮ ಪಂಚಾಯಿತಿಯ ನಾಗರಾಳ ಹುಲಿ, ಮುತ್ತಗಿ ಹಾಗೂ ಬ್ಯಾಕೋಡ ಗ್ರಾಮ ಪಂಚಾಯತಿಯ ಜಯವಾಡಗಿ ಉಪ ಚುನಾವಣೆ ನಡೆಸಲಾಗುವುದು.
ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮ ಪಂಚಾಯತಿಯ ಕಾತ್ರಾಳ ಕ್ಷೇತ್ರಕ್ಕೆ, ವಿಜಯಪುರ ತಾಲೂಕಿನ ಕನ್ನೂರ, ನಾಗಠಾಣ, ಜುಮನಾಳ ಹಾಗೂ ಹೊನಗನಹಳ್ಳಿ ಗ್ರಾಮ ಪಂಚಾಯತಿಗೆ, ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತಿಗೆ, ತಾಳಿಕೋಟೆ ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯ ತಮದಡ್ಡಿ, ಚಡಚಣ ತಾಲೂಕಿನ ಲೋಣಿ ಬಿ.ಕೆ ಮತ್ತು ಚಡಚಣ ತಾಲೂಕಿನ ಹತ್ತಳ್ಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಯುಧ ಲೈಸನ್ಸದಾರರು ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳು ಅಂದರೆ ಎಸ್.ಬಿ.ಬಿ.ಎಲ್/ಡಿ.ಬಿ.ಬಿ.ಎಲ್, ಬಂದೂಕು, ರೈಫಲ್, ರಿವಾಲ್ವರ್ ಹಾಗೂ ಪಿಸ್ತೂಲುಗಳನ್ನು ಹೊಂದಲು ಕೊಟ್ಟ ಲೈಸನ್ಸ್ ಗಳನ್ನು ನವೆಂಬರ್ ೦೬ ರಿಂದ ನವೆಂಬರ್ ೨೬ರವರೆಗೆ ಸ್ಥಗಿತಗೊಳಿಸಲಾಗಿದೆ.
ಈ ಆದೇಶವು ಬ್ಯಾಂಕುಗಳು ಮತ್ತು ಫ್ಯಾಕ್ಟರಿಗಳ ಭದ್ರತೆಗೋಸ್ಕರ ಪಡೆದುಕೊಂಡ ಆಯುಧಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

